ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಬಾಲಿವುಡ್‌ನ ಜನಪ್ರಿಯ ತಾರಾದಂಪತಿ. ಇತ್ತೀಚೆಗೆ ಸಾಮಾಜಿಕ ಕಳಕಳಿ ಮತ್ತು ನೈಜಘಟನೆಗಳನ್ನು ಆಧರಿಸಿದ ಚಿತ್ರಗಳಲ್ಲೇ ಅಕ್ಷಯ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕ್ಷನ್ ಹೀರೋ ಆಗಿ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿದ್ದ ಅವರೀಗ ತಮ್ಮ ಇಮೇಜಿನ ಹಂಗು ತೊರೆದು ನಟಿಸುತ್ತಿದ್ದಾರೆ. ವಿಶೇಷವೆಂದರೆ ಅವರೀಗ ಅಮೇಜಾನ್ ಪ್ರೈಂನ ’ದಿ ಎಂಡ್’ ಆಕ್ಷನ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು! ಈ ಮೂಲಕ ಬಾಲಿವುಡ್‌ನ ಮತ್ತೊಬ್ಬ ನಟ ವೆಬ್ ಸರಣಿ ಪ್ರವೇಶಿಸಿದಂತಾಗಿದೆ. ಇದೊಂದು ಆಕ್ಷನ್ ಸರಣಿಯಾಗಿದ್ದು, ಅಕ್ಷಯ್ ಇಲ್ಲಿ ಮತ್ತೆ ಆಕ್ಷನ್ ಜಗತ್ತಿಗೆ ಮರಳಲಿದ್ದಾರೆ.
ಅಕ್ಷಯ್ ಅಮೇಜಾನ್ ಪ್ರೈಂನ ಈ ಸರಣಿ ಲಾಂಚ್ ಕಾರ್ಯಕ್ರಮದಲ್ಲಿ ಅವರು ವಿಭಿನ್ನ ರೀತಿಯಲ್ಲಿ ಸ್ಟೇಜ್ ಮೇಲೆ ಕಾಣಿಸಿಕೊಂಡರು. ಆಕ್ಷನ್ ಸರಣಿಗೆ ಸೂಕ್ತವಾದ ಎಂಟ್ರಿ ಅದು! ತಾವು ತೊಟ್ಟಿದ್ದ ಕಪ್ಪು ಕೋಟ್‌ಗೆ ಬೆಂಕಿ ಹೊತ್ತಿಸಿಕೊಂಡು ಸ್ಟೇಜ್ ಪ್ರವೇಶಿಸಿ ಅಲ್ಲಿ ನೆರೆದಿದ್ದವರನ್ನು ಅಚ್ಚರಿಗೆ ದೂಡಿದರು. ಈ ಆಕ್ಷನ್ ನೋಡಿದಾಕ್ಷಣ ಅವರ ತಾರಾಪತ್ನಿ ಟ್ವಿಂಕಲ್ ಪತಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೆಂದೂ ಇಂತಹ ಅಪಾಯಕಾರಿ ಸ್ಟಂಟ್ ಮಾಡಕೂಡದು. ಮತ್ತೊಮ್ಮೆ ಇಂತಹ ಸನ್ನಿವೇಶ ಮರುಕಳಿಸಿದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ! ಎಂದು ಟ್ವಿಂಕಲ್ ಎಚ್ಚರಿಕೆ ನೀಡಿದ್ದಾರೆ. ಇನ್ನು ತಮ್ಮ ನೂತನ ಸರಣಿ ಬಗ್ಗೆ ಅಕ್ಷಯ್ ಉತ್ಸುಕರಾಗಿದ್ದಾರೆ. ನನಗೆ ಬೆಂಕಿ ಸ್ಟಂಟ್ ಮಾಡುವಾಗ ಭಯವಾಗಿರಲಿಲ್ಲ. ಈಗ ಪತ್ನಿ ವಾರ್ನ್ ಮಾಡಿರುವುದು ಆತಂಕವಾಗಿದ್ದು, ಮನೆಯಲ್ಲೇನು ಕಾದಿದೆಯೋ!? ಎಂದು ತಮಾಷೆಯ ಟ್ವೀಟ್ ಮಾಡಿದ್ದಾರೆ.
No Comment! Be the first one.