ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರದತ್ತ ಕಥೆಯೇನು ಎಂಬುದರಿಂದ ಮೊದಲ್ಗೊಂಡು ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರು ದೃಷ್ಟಿ ನೆಟ್ಟಿದ್ದಾರೆ. ಚಿತ್ರ ತಂಡವೂ ಕೂಡಾ ಮತ್ತಷ್ಟು ಕುತೂಹಲಕಾರಿಯಾದ ಕೆಲ ವಿಚಾರಗಳನ್ನು ಹಂತ ಹಂತವಾಗಿ ಜಾಹೀರು ಮಾಡುತ್ತಾ ಸಾಗುತ್ತಿದೆ. ಹೀಗಿರುವಾಗಲೇ ಈ ಚಿತ್ರದ ನಾಯಕಿಯರಲ್ಲೊಬ್ಬರಾಗಿರುವ ಅಕ್ಷತಾ ಮಾತಾಡಿದ್ದಾರೆ!
ಮಾಡೆಲ್ ಆಗಿ ರ್ಯಾಂಪ್ನಲ್ಲಿ ಹೆಜ್ಜೆ ಹಾಕುತ್ತಲೇ ಪಿಯುಸಿಯಲ್ಲಿರುವಾಗಲೇ ನಿರೂಪಕಿಯಾಗಿ ಹೊರ ಹೊಮ್ಮಿದ್ದವರು ಅಕ್ಷತಾ. ಮಾಡೆಲಿಂಗ್ನಿಂದ ಮೊದಲ್ಗೊಂಡು, ಆಂಕರಿಂಗ್, ನಟನೆ ಸೇರಿದಂತೆ ಎಲ್ಲವೂ ಅಕ್ಷತಾ ಪಾಲಿಗೆ ಬಯಸದೇ ಘಟಿಸಿದವುಗಳೇ. ಇದೀಗ ಅವರು ಉದ್ದಿಶ್ಯ ಚಿತ್ರದ ನಾಯಕಿಯರಲ್ಲೊಬ್ಬರು. ಸದ್ಯಕ್ಕೆ ಹೊಸಾ ಥರದಲ್ಲಿ ಸದ್ದು ಮಾಡುತ್ತಿರೋ ಈ ಚಿತ್ರದ ಬಗ್ಗೆ, ಭಿನ್ನವಾದ ಕಥೆಯ ಬಗ್ಗೆ ಅಪಾರವಾದ ಭರವಸೆಯ ಮಾತುಗಳನ್ನಾಡಿರೋ ಅಕ್ಷತಾ ಉದ್ದಿಶದ ನೆಪದಲ್ಲಿ ನಿರುದ್ದಿಶವಾಗಿ ತಮ್ಮ ಈ ವರೆಗಿನ ಸಿನಿ ಯಾನವನ್ನು ಬಿಚ್ಚಿಟ್ಟಿದ್ದಾರೆ.
ಉದ್ದಿಶ್ಯ ಚಿತ್ರದಲ್ಲಿ ಅಕ್ಷತಾ ಅವರದ್ದು ಅಭಿನಯಕ್ಕೆ ಹೆಚ್ಚು ಒತ್ತಿರುವ ಪರಿಣಾಮಕಾರಿ ಪಾತ್ರವಂತೆ. ಹದಿನಾರು ವರ್ಷದಿಂದ ಮೂವತ್ತೆರಡು ವರ್ಷಗಳ ವರೆಗೆ ಹೆಣ್ಣೊಬ್ಬಳ ಬದುಕಿನಲ್ಲಿ ಘಟಿಸುವ ಸೂಕ್ಷ್ಮ ಪಲ್ಲಟಗಳು ಈ ಪಾತ್ರವನ್ನು ಆವರಿಸಿಕೊಂಡಿರುತ್ತವೆ. ಇಡೀ ಕಥೆ ಹೇಗೆ ಡಿಫರೆಂಟಾಗಿದೆಯೋ, ಈ ಪಾತ್ರವೂ ಅಷ್ಟೇ ಭಿನ್ನವಾಗಿದೆ ಎಂಬುದು ಅಕ್ಷತಾ ಭರವಸೆ. ಬ್ಲ್ಯಾಕ್ ಮ್ಯಾಜಿಕ್ಕಿನಿಂದ, ಹಾರರ್ ಜಾಡಿಗೆ ಹೊರಳಿಕೊಂಡು, ದುಷ್ಟನೊಬ್ಬ ಬ್ಲ್ಯಾಕ್ ಮ್ಯಾಜಿಕ್ ಮತ್ತು ಮಕ್ಕಳನ್ನು ಬಳಸಿಕೊಂಡು ಇಂಥಾದ್ದನ್ನೂ ಮಾಡಬಹುದಾ ಅಂತ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಅಂಶಗಳೂ ಈ ಸಿನಿಮಾದಲ್ಲಿವೆಯಂತೆ. ಅಂತೂ ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಅಕ್ಷತಾ ಉದ್ದಿಶ್ಯ ಸಿನಿಮಾ ಕನ್ನಡದಲ್ಲಿ ತನ್ನ ಚಿತ್ರಬದುಕಿಗೆ ಹೊಸಾ ದಿಕ್ಕು ತೋರಿಸುತ್ತದೆ ಎಂಬ ನಿರೀಕ್ಷೆ ಹೊಂದಿದ್ದಾರೆ.
ಅಕ್ಷತಾ ಪಿಯುಸಿಯಲ್ಲಿರುವಾಗಲೇ ಯೂಟು ವಾಹಿನಿಯ ಗುಡ್ ಮಾರ್ನಿಂಗ್ ಗೆಳೆಯರೇ ಕಾರ್ಯಕ್ರಮದ ನಿರೂಪಕಿಯಾಗಿದ್ದವರು. ಈ ಕಾರ್ಯಕ್ರಮದಿಂದಲೇ ಅವರು ಒಂದಷ್ಟು ಖ್ಯಾತಿಯನ್ನೂ ಪಡೆದುಕೊಂಡಿದ್ದರು. ಕಾಲೇಜಿನಲ್ಲಿದ್ದಾಗಲೇ ಸಿಲ್ವರ್ ಪ್ರಿಂಟ್ ಆಡ್ನಲ್ಲಿ ಕೆಲಸ ಮಾಡಿದ್ದ ಅಕ್ಷತಾಗೆ ಚೆನ್ನಾಗಿ ಮಾತಾಡೋ ಕಲೆ ಗೊತ್ತಿದ್ದರಿಂದ ಯಾಕೆ ಆಂಕರ್ ಆಗಬಾರದು ಅಂತ ಒಂದಷ್ಟು ಮಂದಿ ಕೇಳಿದ್ದರಂತೆ. ಅದಾದ ನಂತರ ಅಚಾನಕ್ಕಾಗಿಯೇ ವಾಹಿನಿಯೊಂದರಲ್ಲಿ ನಿರೂಪಕಿಯಾಗೋ ಅವಕಾಶ ಕೂಡಿ ಬಂದಿತ್ತು. ಆಮೇಲೆ ಯೂ ೨ನಲ್ಲಿ ನಿರೂಪಕಿಯಾಗಿ ಅಲ್ಲೇ ವರ್ಷಾಂತರಗಳ ಕಾಲ ಕಾರ್ಯ ನಿರ್ವಹಿಸಿದ್ದ ಅಕ್ಷತಾ ಯಾವತ್ತೂ ತಾನು ನಟಿಯಾಗಬೇಕು ಅಂದುಕೊಂಡಿದ್ದೇ ಇಲ್ಲ. ಆದರೆ ದೂರದ ತಮಿಳುನಾಡಿನಿಂದ ಅಚ್ಚರಿದಾಯಕವಾಗಿ ಅವಕಾಶವೊಂದು ಅರಸಿ ಬಂದಿತ್ತು!
ಡೈರೆಕ್ಟರ್ ಒಬ್ಬರು ಅಕ್ಷತಾರನ್ನು ಕೇಂದ್ರದಲ್ಲಿಟುಕೊಂಡೇ ಕಥೆಯೊಂದನ್ನು ರೆಡಿ ಮಾಡಿ ನಟಿಸುವಂತೆ ಆಫರ್ ಇಟ್ಟಿದ್ದರು. ಆದರೆ ಆಗಿನ್ನು ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅಕ್ಷತಾರ ಮನೆಯಿಂದ ಸದ್ಯಕ್ಕೆ ಬೇಡ ಎಂಬ ನಿರ್ಧಾರ ಪ್ರಕಟವಾಗಿತ್ತು. ನಂತರ ಎರಡು ವರ್ಷ ಕಾದು ಕಡೆಯೂ ಅವರೇ ನಾಯಕಿಯಾಗಿ ಆ ತಮಿಳು ಚಿತ್ರ ಶುರುವಾಗಿತ್ತು. ಅದು ಅಕ್ಷತಾರ ಮೊದಲ ಚಿತ್ರ. ಆ ನಂತರ ಎರಡನೇ ಚಿತ್ರವಾಗಿ ಬಂದಿದ್ದ ಕನ್ನಡದ ಪಾನಿಪುರಿ. ಪಾರ್ಥಸಾರಥಿ ಮೂರನೇ ಚಿತ್ರವಾದರೆ ಬಹು ನಿರೀಕ್ಷಿತ ಉದ್ದಿಶ್ಯ ನಾಲಕ್ಕನೆಯದ್ದು. ವಿಶೇಷವೆಂದರೆ ಉದ್ದಿಶ್ಯದ ಜೊತೆಗೇ ಬಿಡುಗಡೆಯಾಗುತ್ತಿರೋ ತ್ರಾಟಕ ಷಚಿತ್ರದಲ್ಲಿಯೂ ಅಕ್ಷತಾ ಎರಡನೇ ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದಾರೆ.
ಇದೀಗ ಮಲೆಯಾಳಂ ಚಿತ್ರವೊಂದಕ್ಕೂ ಸಹಿ ಹಾಕಿರೋ ಅಕ್ಷತಾರ ಮತ್ತೊಂದು ಕನ್ನಡ ಚಿತ್ರ ಇಷ್ಟರಲ್ಲಿಯೇ ಘೋಷಣೆಯಾಗಲಿದೆ. ಕೆ. ಮಂಜು ನಿರ್ಮಾಣದ ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿರೋ ಚಿತ್ರದಲ್ಲಿಯೂ ಅಕ್ಷತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಬಯಸದೆಯೇ ನಟನಾ ರಂಗಕ್ಕಿಳಿಸಿದ್ದು ಯಾವ ಮಾಯೆ ಎಂಬುದಕ್ಕೂ ಅಕ್ಷತಾರ ಬಳಿಯೇ ಉತ್ತರವಿದೆ. ಅಕ್ಷತಾ ಪಕ್ಕಾ ಬೆಂಗಳೂರು ಹುಡುಗಿಯಾದರೂ ಅವರ ತಂದೆ ಮೈಸೂರು ಮೂಲದವರು. ತಾಯಿಯ ಊರು ಆಂಧ್ರಪ್ರದೇಶ. ತಾಯಿಯ ತಂದೆ ವೆಂಕಟಾಚಲಪತಿ ಬೀದಿ ನಾಟಕಗಳ ಮೂಲಕವೇ ಪ್ರಸಿದ್ಧರಾಗಿದ್ದರಂತೆ. ಅವರಿಂದಲೇ ತನಗೆ ರಕ್ತಗತವಾಗಿ ನಟನಾ ಚಾತುರ್ಯ ಬಂದು ಸೇರಿಕೊಂಡಿದ್ದಿರ ಬಹುದೆಂಬುದು ಅಕ್ಷತಾ ನಂಬಿಕೆ.
ಹೀಗೆ ಹಂತ ಹಂತವಾಗಿ ನಾಯಕಿಯಾಗಿ ನೆಲೆಗೊಳ್ಳುತ್ತಾ ಸಾಗುತ್ತಿರುವ ಅಕ್ಷತಾ ನಯನತಾರಾ ಅವರ ಹಾರ್ಡ್ಕೋರ್ ಫ್ಯಾನ್. ಕನ್ನಡದ ಕಿಚ್ಚಾ ಸುದೀಪ್ ನಟನೆಯೆಂದರೆ ಅಚ್ಚುಮೆಚ್ಚು. ಅದರ ಜೊತೆಗೇ ತಮಿಳಿನ ಅಜಿತ್ ಮತ್ತು ವಿಜಯ್ ಸೇತುಪತಿ ನಟನೆಯೆಂದರೆ ಪ್ರಾಣ. ಸದ್ಯ ಒಂದಷ್ಟು ಅವಕಾಶಗಳನ್ನು ತನ್ನದಾಗಿಸಿಕೊಂಡಿರೋ ಅಕ್ಷತಾ ಇದೀಗ ತಾನು ನಟಿಸಿರೋ ಉದ್ದಿಶ್ಯ ಚಿತ್ರದೊಂದಿಗೆ ತ್ರಾಟಕ ಚಿತ್ರವೂ ತೆರೆ ಕಾಣುತ್ತಿರೋ ಖುಷಿಯಲ್ಲಿದ್ದಾರೆ!
———————————-
ಉದ್ದಿಶ್ಯ ಈ ವಾರ ಬಿಡುಗಡೆ
Chersonese Entertinement ಲಾಂಛನದಲ್ಲಿ ಹೇಮನ್ (ಹೇಮಂತ್ ಕೃಷ್ಣಪ್ಪ) ನಿರ್ಮಿಸಿ ನಿರ್ದೇಶಿಸಿರುವ ಉದ್ದಿಶ್ಯ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ನಿರ್ದೇಶನ ಮೇಲ್ವಿಚಾರಣೆ-ಸಾಹುರಾಜ್ ಸಿಂಧೆ, ಸಹ ನಿರ್ಮಾಪಕರು – ಗ್ಯಾರಿ ಗ್ರಿಫಿನ್ & ಕಾರ್ಲಸ್ ಹೆಜಿನ್, ಛಾಯಾಗ್ರಹಣ – ಚೇತನ್ ರಘುರಾಮ್, ಮೂಲ ಕಥೆ – ರಾಬರ್ಟ್ ಗ್ರಿಫಿನ್, ಸಂಕಲನ-ವೆಂಕಟೇಶ್ ಯು.ಡಿ.ವಿ, ಸಿಂಕ್ ಸೌಂಡ್- ಅದಮ್ಯ ಚೇತನ್, ಸಂಗೀತ – ಶದ್ರಚ್ ಸಾಲೊಮನ್, ತಾರಾಗಣದಲ್ಲಿ – ಹೇಮಂತ್, ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು, ಅಶ್ವತ್ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರಿದ್ದಾರೆ. #
No Comment! Be the first one.