ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಎಂದೇ ಹೆಸರಾಗಿರುವವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಬಹು ನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ನಿರೀಕ್ಷೆಯಂತೆಯೇ ಈ ಟ್ರೈಲರ್ ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಇಡೀ ಚಿತ್ರದ ಬಗ್ಗೆ ಎಲ್ಲರನ್ನೂ ಸೆಳೆಯುವಂತೆ ಮೂಡಿ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿರೋ ಈ ಟ್ರೈಲರ್ಗೆ ಕಿಚ್ಚಾ ಸುದೀಪ್ ಖಡಕ್ ಶೈಲಿಯಲ್ಲಿ ಧ್ವನಿ ನೀಡಿದ್ದಾರೆ. ಕಡೆಯಲ್ಲವರು ಮಾಸ್ಟರ್ ಆಫ್ ಸಸ್ಪೆನ್ಸ್ ಸುನೀಲ್ ಕುಮಾರ್ ದೇಸಾಯಿ ಮತ್ತೆ ಮರಳಿದ್ದಾರೆ ಅಂದಿದ್ದಾರೆ. ಇಡೀ ಟ್ರೈಲರ್ ಆ ಮಾತನ್ನು ಅಕ್ಷರಶಃ ಪುಷ್ಟೀಕರಿಸುವಂತಿದೆ.
ಮರ್ಡರ್ ಮಿಸ್ಟರಿಯ ಸುತ್ತಾ, ಕ್ಷಣ ಕ್ಷಣವೂ ಮೈನವಿರೇಳುವಂತೆ ಮಾಡೋ ಶೈಲಿಯಲ್ಲಿ ಉದ್ಘರ್ಷ ಮೂಡಿ ಬಂದಿದೆ ಅನ್ನೋ ಸೂಚನೆಯೂ ಈ ಮೂಲಕ ಸಿಕ್ಕಿದೆ. ಕನ್ನಡವೂ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ತಯಾರಾಗಿರೋ ಈ ಸಿನಿಮಾ ಮೂಲಕ ಮತ್ತೆ ದೇಸಾಯಿಯವರ ಸಸ್ಪೆನ್ಸ್ ಥ್ರಿಲ್ಲರ್ ಯುಗ ಶುರುವಾಗೋ ಲಕ್ಷಣಗಳೂ ಸ್ಪಷ್ಟವಾಗಿವೆ. ಕೆಲ ಜನಪ್ರಿಯ ಟಿವಿ ಶೋಗಳು ಸೇರಿದಂತೆ ಸಿಂಗಂ 3 ಚಿತ್ರದಲ್ಲಿಯೂ ಖಳನಾಗಿ ನಟಿಸಿದ್ದ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದ ಮೂಲಕ ಮೊದಲ ಸಲ ಹೀರೋ ಆಗಿದ್ದಾರೆ. ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಬ್ಬರಿಸಿರೋ ಇವರನ್ನೇ ನಾಯಕನಾಗಿ ಮಾಡಬೇಕೆಂದುಕೊಂಡ ದೇಸಾಯಿ ಅದನ್ನೇ ಮಾಡಿದ್ದಾರೆ. ಈ ಮೂಲಕ ಅಜಾನುಬಾಹು ನಾಯಕನೊಬ್ಬ ಕನ್ನಡಕ್ಕೂ ಎಂಟ್ರಿ ಕೊಟ್ಟಂತಾಗಿದೆ.
ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
No Comment! Be the first one.