ಸುನೀಲ್ ಕುಮಾರ್ ದೇಸಾಯಿ ಒಂದಷ್ಟು ಕಾಲಾವಧಿಯ ನಂತರ ಮರಳಿ ಬಂದಿದ್ದಾರೆ. ನಮ್ಮೂರ ಮಂದಾರ ಹೂವೆ ಚಿತ್ರದಂಥಾ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದೇಸಾಯಿ ಉತ್ಕರ್ಷ, ನಿಶ್ಕರ್ಷ, ಬೆಳದಿಂಗಳ ಬಾಲೆ ಮುಂತಾದ ಚಿತ್ರಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿರುವವರು. ಅವರು ನಿರ್ದೇಶನ ಮಾಡಿರೋ ಹೊಸಾ ಚಿತ್ರ `ಉದ್ಘರ್ಷ’ ಇದೀಗ ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ಸದ್ದು ಮಾಡಲಾರಂಭಿಸಿದೆ.
ವಿಶೇಷವೆಂದರೆ, ಈ ಚಿತ್ರದ ಮೂಲಕ ಪರಭಾಷೆಗಳಲ್ಲಿಯೂ ಬಾರೀ ಬೇಡಿಕೆ ಹೊಂದಿರುವ ನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ. ಇವರನ್ನು ನಾಯಕನಾಗಿ ಕನ್ನಡಿಗರಿಗೆ ಪರಿಚಯ ಮಾಡಲೆಂದೇ ಪತ್ರಿಕಾಗೋಷ್ಟಿ ಒಂದನ್ನು ಆಯೋಜಿಸಿದ್ದ ಸುನೀಲ್ ಕುಮಾರ್ ದೇಸಾಯಿ ಇಡೀ ಚಿತ್ರದ ಬಗ್ಗೆಯೂ ಒಂದಷ್ಟು ರೋಚಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಕೆಲ ಜನಪ್ರಿಯ ಟಿವಿ ಶೋಗಳು ಸೇರಿದಂತೆ ಸಿಂಗಂ ೩ ಚಿತ್ರದಲ್ಲಿಯೂ ಖಳನಾಗಿ ನಟಿಸಿದ್ದವರು ಠಾಕೂರ್ ಅನೂಪ್ ಸಿಂಗ್. ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಭಿನಯಿಸಿರುವ ಇವರನ್ನೇ ನಾಯಕನಾಗಿ ಮಾಡಬೇಕೆಂದುಕೊಂಡ ದೇಸಾಯಿ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಥೆ ಹೇಳಿದ್ದರಂತೆ. ದೇಸಾಯಿ ಕಥೆ ಹೇಳಿದಾಗ ತಮ್ಮದು ವಿಲನ್ ರೋಲ್ ಅಂದುಕೊಂಡಿದ್ದ ಠಾಕೂರ್ಗೆ ತಾನೇ ನಾಯಕ ಎಂಬುದು ತಿಳಿದಾಗ ಶಾಕ್ ಆಗಿತ್ತಂತೆ.
ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
#
No Comment! Be the first one.