ಜೀ ಕನ್ನಡ ವಾಹಿನಿಯಲ್ಲಿ ಶನಿ-ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ `ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಯಶಸ್ವಿ 50ನೇ ಸಂಚಿಕೆಯನ್ನು ಪೂರ್ಣಗೊಳಿಸಿದೆ.ಈ ಹಿನ್ನೆಲೆಯಲ್ಲಿ ಧಾರಾವಾಹಿಯ ಕಥಾನಾಯಕ ಮತ್ತು ತಂಡ ಮಾದೇಶ್ವರ ಸ್ವಾಮಿಯ ಮೂಲ ನೆಲೆಯನ್ನು ದರ್ಶಿಸಿ ಧನ್ಯತೆ ಅನುಭವಿಸಿತು. ಕಲಾವಿದರು, ತಂತ್ರಜ್ಞರು ಹುಲಿವಾಹನ ಸೇವೆ, ರಥೋತ್ಸವಗಳಲ್ಲಿ ಪಾಲ್ಗೊಂಡರು. ದೇವಾಲಯ ಸಂದರ್ಶಿಸಲು ಬಂದ ಭಕ್ತಾದಿಗಳು ನೆಚ್ಚಿನ ದೇವನ ಕಥೆಯ ಪಾತ್ರಗಳನ್ನು ಕಣ್ಣೆದುರೇ ಕಂಡು ಪುಳಕಗೊಂಡು ಮಾತಾಡಿಸಿ ಖುಷಿಪಟ್ಟರು.
ಮರಿದೇವನ ಪಾತ್ರಧಾರಿ ಮಾ| ಅಮೋಘ, ತಾಯಿ ಉತ್ತರಾಜಮ್ಮನ ಪಾತ್ರಧಾರಿ ಕೃತಿ, ತಂದೆ ಕಲ್ಯಾಣದೇವ ಪಾತ್ರಧಾರಿ ಚಂದ್ರಶೇಖರ ಶಾಸ್ತ್ರಿ, ರೇಣುಕಾ ಪಾತ್ರಧಾರಿ ಚಂದ್ರಿಕಾ, ಮಂಚಣ್ಣನ ಪಾತ್ರಧಾರಿ ಪದ್ಮನಾಭ, ಇತರ ಪಾತ್ರಗಳಾದ ವ್ಯಾಘ್ರಾನಂದ, ಶರಣಪ್ಪ, ಮಲ್ಲಮ್ಮ, ನೀಲವ್ವ, ಚೌಡಯ್ಯ, ಬಿದಿರಯ್ಯ ಮತ್ತಿರರು ಜೊತೆಗೆ ತಂತ್ರಜ್ಞರು ಉಪಸ್ಥಿತರಿದ್ದರು. ನಿರ್ಮಾಪಕ-ಪ್ರಧಾನ ನಿರ್ದೇಶಕ ಕೆ.ಮಹೇಶ್ ಸುಖಧರೆ ತಂಡದ ನೇತೃತ್ವ ವಹಿಸಿದ್ದರು.
`ಉಘೇ ಉಘೇ ಮಾದೇಶ್ವರ’ ಧಾರಾವಾಹಿ ವಾರಾಂತ್ಯದಲ್ಲಿ ಮಹತ್ವದ 50 ಸಂಚಿಕೆಗಳನ್ನು ಪೂರೈಸಿದೆ. ವೀಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಭೇಟಿ ನೀಡಿದ ಮೇಲೆ ಪ್ರತಿಯೊಬ್ಬರೂ ಕಥೆಯನ್ನು ತಮ್ಮ ತಮ್ಮ ಪಾತ್ರವನ್ನು ಗ್ರಹಿಸುವ ರೀತಿ ಬದಲಾಗುತ್ತದೆ. ಧಾರಾವಾಹಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನೆರವಾಗುತ್ತದೆ ಎಂದು ಪ್ರಧಾನ ನಿರ್ದೇಶಕ ಕೆ.ಮಹೇಶ್ ಸುಖಧರೆ ಅಭಿಪ್ರಾಯಪಟ್ಟರು.
ಮಲೆ ಮಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಮೇಲೆ ಇದೇ ದೇವರ ಪಾತ್ರವನ್ನು ಮಾಡುತ್ತಿರುವುದಕ್ಕೆ ಮತ್ತಷ್ಟು ಹೆಮ್ಮೆ ಎನ್ನಿಸಿತು ಎಂದು ಮರಿದೇವ ಪಾತ್ರಧಾರಿ ಮಾ|ಅಮೋಘ ಹೇಳಿದರು.
ಮಾದೇಶ್ವರರ ತಾಯಿ-ತಂದೆಯರಾಗಿ ಪಾತ್ರ ನಿರ್ವಹಿಸುತ್ತಿರುವ ನಮಗೆ ಇಲ್ಲಿನ ಭಕ್ತರೂ ವಿಶೇಷ ಗೌರವದಿಂದ ಮಾತಾಡಿಸುತ್ತಿದ್ದರು.ಈ ಪಾತ್ರ ದೊರಕಿರುವುದು ಪುಣ್ಯವೆಂಬುದೇ ನಮ್ಮ ಭಾವನೆ. ಇಲ್ಲಿ ಭೇಟಿ ನೀಡಿದ್ದು ವಿಶೇಷ ಅನುಭವ ನೀಡಿತು ಎನ್ನುತ್ತಾರೆ ಉತ್ತರಾಜಮ್ಮ ಪಾತ್ರಧಾರಿ ಕೃತಿ ಹಾಗೂ ಕಲ್ಯಾಣದೇವ ಪಾತ್ರಧಾರಿ ಚಂದ್ರಶೇಖರ ಶಾಸ್ತ್ರಿ. ಕಂಸಾಳೆ ನೃತ್ಯ ಹಾಗೂ ಮಾದೇಶ್ವರ ಕಾವ್ಯ ಗಾಯನ ಒಳಗೊಂಡ ವಿಶೇಷ ಸಂಚಿಕೆ `ಉಘೇ ಉಘೇ ಮಾದೇಶ್ವರ-ಶಿವರಾತ್ರಿ ಯಾತ್ರಾ ಸಮಯ’ ಮಾರ್ಚ್ 4, ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ. ಸೋಮವಾರ ರಾತ್ರಿ 12:30 ಕ್ಕೆ `ಉಘೇ ಉಘೇ ಮಾದೇಶ್ವರ – ಶಿವರಾತ್ರಿ ಕಥಾ ಸಮಯ’ ವಿಶೇಷ ಸುದೀರ್ಘ ಸಂಚಿಕೆ ಪ್ರಸಾರವಾಗಲಿದೆ.
No Comment! Be the first one.