ಜೈಲಲ್ಲಿ ದರ್ಶನ್ ರಾಜಾರೋಷವಾಗಿ ಒಂದು ಕೈಲಿ ಕಾಫಿ ಮಗ್ ಹಿಡಿದು, ಮತ್ತೊಂದು ಕೈಲಿ ಧಮ್ಮು ಎಳೀತಾ ಕುಂತಿರುವ ಫೋಟೋ ವೈರಲ್ ಆಗಿದೆ. ಆಗಿರೋದು ಫೋಟೋ ವೈರಲ್ ಮಾತ್ರ ಅಲ್ಲ, ಕಾರಾಗೃಹ ವ್ಯವಸ್ಥೆ ಅದೆಷ್ಟು ಹಡಾಲೆದ್ದಿದೆ ಅನ್ನೋದು ಕೂಡಾ ಅದೇ ರೇಂಜಿಗೆ ವೈರಲ್ ಆಗಿದೆ. ಈಗ ರೌಡಿಗಳ ಜಿದ್ದಾಜಿದ್ದಿ ಕೂಡಾ ದರ್ಶನ್ ಕೇಸಿಗೆ ಲಿಂಕ್ ಪಡೆದಿದೆ!
- ಅರುಣ್ ಕುಮಾರ್ ಜಿ.
ʻಬಂಧೀಖಾನೆ ಅನ್ನೋದು ಹೆಸರಿಗಷ್ಟೇ. ಕೊಲೆಗಡುಕ, ಕ್ರಿಮಿನಲ್ಲುಗಳಿಗೆ ಅದೊಂದು ಯೂನಿವರ್ಸಿಟಿ ಇದ್ದಂಗೆ… ಕಾಸಿರೋರಿಗೆ ಅದೊಂಥರಾ ಹೋಮ್ ಸ್ಟೇ ಥರಾ…ʼ ಎಂಬಿತ್ಯಾದಿ ವಿಚಾರಗಳು ಇವತ್ತು ನೆನ್ನೆ ಮಾತಲ್ಲ. ದರ್ಶನ್ ಪ್ರಕರಣವನ್ನೇ ತೆಗೆದುಕೊಳ್ಳಿ, ಪೊಲೀಸರು ತಮಗೆ ಬಂದ ಎಲ್ಲಾ ಒತ್ತಡಗಳು, ಸವಾಲುಗಳನ್ನು ಎದುರಿಸಿ ಯಾವ ಸ್ಟಾರ್ ಆದರೇನು, ಸೆಲೆಬ್ರಿಟಿಗಳಾದರೇನು ಅಂತಾ ದರ್ಶನ್ ಮತ್ತು ಆತನ ಸಹಚರರನ್ನು ಸಾಕ್ಷಿ, ಆಧಾರಗಳ ಸಮೇತ ಹಿಡಿದು ಕರೆದುಕೊಂಡು ಹೋಗಿ ಜೈಲಿಗೆ ಬಿಟ್ಟು ಬಂದಿದ್ದರು. ತನಿಖಾ ತಂಡಕ್ಕೆ ತಾವು ಕಷ್ಟಪಟ್ಟು ಬೇಧಿಸಿದ ಪ್ರಕರಣ, ತಪ್ಪಿತಸ್ಥರಿಗೆ ಶಿಕ್ಷೆ ಸಿಗಲಿ. ಆ ಮೂಲಕ ಪ್ರಾಣ ಕಳೆದುಕೊಂಡವನ ಮನೆಯವರಿಗೆ ನ್ಯಾಯ ಸಿಗಲಿ. ಜೊತೆಗೆ ತಮಗೂ ಇಂಥದ್ದೊಂದು ಹೈ ಪ್ರೊಫೈಲ್ ಕೇಸಲ್ಲಿ ಕೆಲಸ ಮಾಡಿದ ಹೆಸರು ದಕ್ಕಲಿ ಅನ್ನೋ ಬಯಕೆಗಳೆಲ್ಲಾ ಇರುತ್ತವೆ. ಆದರೆ ಎಲ್ಲರ ಶ್ರಮಕ್ಕೂ ಎಳ್ಳು ನೀರು ಬಿಡುವ ಕೆಲಸವನ್ನು ಕಾರಾಗೃಹ ಮಾಡಿದೆ.
ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿ ವಾಸ್ತವ್ಯ ಹೂಡಿದ ಆರಂಭದ ದಿನಗಳಲ್ಲಿ ನಿಜಕ್ಕೂ ಕಟ್ಟುನಿಟ್ಟಿನ ವ್ಯವಸ್ಥೆ ಇದ್ದಿದ್ದು ನಿಜ. ಸ್ವತಃ ಅವರ ಮನೆಯವರು ಹೋದಾಗಲೂ ನಿಯಮದ ಪ್ರಕಾರವೇ ಅವರನ್ನು ಮಾತಾಡಲು ಬಿಟ್ಟಿದ್ದರು. ಮನೆಯವರು ಕೊಟ್ಟ ಆಹಾರದ ಪದಾರ್ಥಗಳನ್ನೆಲ್ಲಾ ನಾಲ್ಕುದಿನಗಳಾದರೂ ದರ್ಶನ್ಗೆ ತಲುಪಿಸಿರಲಿಲ್ಲ. ತಿಂಡಿ ಪದಾರ್ಥಗಳ ಪೊಟ್ಟಣಗಳನ್ನು ದರ್ಶನ್ ತೆಗೆದು ನೋಡೋ ಹೊತ್ತಿಗೆ ಎಲ್ಲ ಹಳಸಿ ನಾರುತ್ತಿತ್ತು. ಆದರೆ ಯಾವಾಗ ಸಮಾಜಘಾತುಕರಿಂದ ಜೈಲು ಸಿಬ್ಬಂದಿಗೆ ಫೀಡಿಂಗ್ ಶುರುವಾಯ್ತೋ ಒಳಗಿರುವ ಡೆವಿಲ್ಗೆ ರಾಜಾತಿಥ್ಯ ಶುರುವಾಯಿತು. ಹೊರಗಿನ ಸಂಪರ್ಕ, ಮೊಬೈಲ್ ಕನೆಕ್ಟಿವಿಟಿ ಎಲ್ಲವೂ ಸಲೀಸಾಗಿಹೋಯ್ತು.
ಯಾವುದೇ ವಿಚಾರಣಾಧೀನ ಖೈದಿಯನ್ನು ಮಾನವೀಯ ದೃಷ್ಟಿಯಿಂದ ತನ್ನ ಆತ್ಮೀಯರು, ಹತ್ತಿರದ ಬಂಧುಗಳು, ಕುಟುಂಬಸ್ಥರ ಭೇಟಿಗೆ ಅನುವು ಮಾಡಿಕೊಡಬೇಕು ಅನ್ನೋದು ಕಾನೂನು. ದರ್ಶನ್ ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಆತನ ಚೇಲಾಗಳು, ಚೆಂಬು, ಬಕೀಟುಗಳು ಪದೇ ಪದೇ ಜೈಲಿಗೆ ಎಡತಾಕುತ್ತಿವೆ. ಮೇಲಿಂದ ಮೇಲೆ ಹೋಗಿ ನೋಡಿಕೊಂಡು ಬಂದರೆ, ತಮ್ಮ ಬಾಸ್ ಶಭಾಷ್ಗಿರಿ ಗಿಟ್ಟುತ್ತದೆ ಅನ್ನೋ ಕಾರಣಕ್ಕೆ ಕೆಲವರು ಸುಖಾಸುಮ್ಮನೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಎಂಟ್ರಿ ಬರೆಸುತ್ತಿದ್ದಾರೆ.
ಧನ್ವೀರ್ ಯಾಕೆ ದರ್ಶನ್ ಅವರನ್ನು ಪದೇಪದೆ ಭೇಟಿ ಮಾಡುತ್ತಿದ್ದಾನೋ ಗೊತ್ತಿಲ್ಲ. ಯಶಸ್ ಸೂರ್ಯ, ಚಿಕ್ಕಣ್ಣ ಇವರುಗಳೆಲ್ಲಾ ಈ ಪ್ರಕರಣದ ಸಾಕ್ಷಿಗಳಾಗಿದ್ದರೂ ದರ್ಶನ್ ಅವರನ್ನು ನೇರವಾಗಿ ಮೀಟ್ ಮಾಡಿ ಬಂದಿದ್ದಾರೆ. ಬಂಡಿ ಮಾಂಕಾಳಮ್ಮನ ದೇವಸ್ಥಾನದ ಶಿವಣ್ಣನ ಮಗ ಶಶಿ ದೇವಸ್ಥಾನದಲ್ಲಿ ಪೂಜೆ ಮಾಡೋದನ್ನು ಬಿಟ್ಟು, ಪರಪ್ಪನ ಅಗ್ರಹಾರದ ಸುತ್ತಲೇ ಸುಳಿದಾಡುತ್ತಿದ್ದಾನೆ. ಸ್ನೇಹ, ಅಭಿಮಾನದ ಹೊರತಾಗಿ ಯಾವ ವ್ಯವಹಾರ ಕುದುರಿಸೋದು ಇವರುಗಳ ಉದ್ದೇಶವಿರಬಹುದು?
ರಚಿತಾ ರಾಮ್ ಕೂಡಾ ಜೈಲಿಗೆ ʻಸ್ಪೆಷಲ್ ಎಂಟ್ರಿʼ ಕೊಟ್ಟುಬಂದಿದ್ದಾರೆ. ಈಕೆಗೆ ಎಷ್ಟು ಸಮಯ ಭೇಟಿಗೆ ಸಮಯ ಕೊಟ್ಟಿದ್ದರು? ಏನೆಲ್ಲಾ ಮಾತಾಡಿಕೊಂಡರು? ಎನ್ನುವುದನ್ನು ಜೈಲಿನ ಅಧಿಕಾರಿಗಳು ದಾಖಲು ಮಾಡಿದ್ದಾರಾ? ದರ್ಶನ್ ಪತ್ನಿ, ಸಹೋದರ, ತಾಯಿ, ತಂಗಿ, ಮಗನ ಹೊರತಾಗಿ ದೇವರ ದರ್ಶನಕ್ಕಾಗಿ ಕ್ಯೂ ನಿಲ್ಲುವಂತೆ ದಿನಬೆಳಗಾದರೆ ಜೈಲಿನ ಮುಂದೆ ವಕ್ಕರಿಸಿಕೊಂಡು ಹಾಜರಾತಿ ಹಾಕುತ್ತಿರುವವರನ್ನು ದೂರವಿಡಬೇಕು. ದರ್ಶನ್ ಗೆ ಒಳಗಿರುವ ರೌಡಿಗಳ ಸಂಪರ್ಕ ಒದಗಿಸುತ್ತಿರುವ ಕೇʼಡಿʼಗಳನ್ನು ಹುಡುಕಿ, ಕುಂಡೆಗೆ ಬಾರಿಸಬೇಕು. ಆಗ ಎಲ್ಲವೂ ಸರಿ ಹೋಗುತ್ತದೆ. ದರ್ಶನ್ ಮತ್ತಾತನ ಗ್ಯಾಂಗು ದೇಶಕ್ಕಾಗಿ ಬಡಿದಾಡಿ ಜೈಲು ಸೇರಿಲ್ಲ. ಅನಾಮತ್ತಾಗಿ ಒಂದು ಕೊಲೆ ಮಾಡಿ ಸಿಕ್ಕಿಬಿದ್ದು ಬಂಧಿಯಾಗಿದ್ದಾರೆ. ಭೇಟಿ ಮಾಡಿಬಂದು ಅನುಕಂಪದ ಮಾತಾಡೋರ ಸುದ್ದಿಯನ್ನು ಪ್ರಸಾರ ಮಾಡುವುದನ್ನು ನಮ್ಮ ಮೀಡಿಯಾಗಳು ಕೂಡಾ ನಿಲ್ಲಿಸಬೇಕು.
ಫೋಟೋ ಲೀಕ್ ಹಿಂದೆ ಸೈಲೆಂಟ್ ನೆರಳು?
ಇದೀಗ ಫೋಟೋ, ಅದರ ಹಿಂದೆ ವಿಡಿಯೋ ಕಾಲ್ ಗಳು ಲೀಕ್ ಆಗಿರುವುದಕ್ಕೂ ರೌಡಿಸಂಗೂ ನೇರಾನೇರ ಸಂಬಂಧವಿದೆಯಾ? ಇಂಥದ್ದೊಂದು ಅನುಮಾನ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವೂ ಇದೆ. ಒಂದು ಕಾಲದಲ್ಲಿ ಸೈಲೆಂಟ್ ಸುನೀಲ, ಒಂಟೆ ರೋಹಿತನ ಗ್ಯಾಂಗ್ನಲ್ಲೇ ಇದ್ದವನು ವಿಲ್ಸನ್ ಗಾರ್ಡನ್ ನಾಗ. ಸುನೀಲ ಮತ್ತು ಒಂಟೆ ಭಾಗಿಯಾಗಿದ್ದ ಹಲವು ಪ್ರಕರಣಗಳ ಪಾಲುದಾರನಾಗಿದ್ದವನು. ಇವರುಗಳ ನಡುವೆ ಅದೇನು ಭಿನ್ನಾಭಿಪ್ರಾಯ ಮೂಡಿತ್ತೋ ಗೊತ್ತಿಲ್ಲ. ಕೋವಿಡ್ ಸಮಯದಲ್ಲಿ ಒಂದು ಭಯಾನಕ ಕೊಲೆ ನಡೆದು ಹೋಗಿತ್ತು. ಅದು ಡಬಲ್ ರೋಡ್ ಲಿಂಗನದ್ದು. ಹಾಸನದ ಫಾರಂಹೌಸ್ ನಲ್ಲಿದ್ದ ಲಿಂಗರಾಜ್ ಮನೆ ಮೇಲೆ ಏಕಾಏಕಿ ಹನ್ನೆರಡು ಹುಡುಗರ ತಂಡ ನುಗ್ಗಿತ್ತು. ಡಬಲ್ ಮೀಟರ್ ಮೋಹನ, ನಂಜಪ್ಪ, ವಾಲ್ಟರ್, ನವೀನ, ಪ್ರದೀಪ, ರಮೇಶ, ಪಾರ್ತಿಬನ್, ಕಣ್ಣ, ಸುರೇಶ, ಮನೋಹರ ಮತ್ತು ಸುದೀಪ ಸೇರಿದಂತೆ ಹನ್ನೆರಡು ಜನರ ರಕ್ಕಸ ಪಡೆಯನ್ನು ಕಳಿಸಿ ಲಿಂಗನನ್ನು ಮುಖಾಮೂತಿ ನೋಡದೆ ಕೊಚ್ಚಿಹಾಕಿಸಿದ್ದು ಇದೇ ವಿಲ್ಸನ್ ಗಾರ್ಡನ್ ನಾಗ. ಶಾಂತಿನಗರ ಲಿಂಗ ಅಲಿಯಾಸ್ ಡಬಲ್ ರೋಡ್ ಲಿಂಗ ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತ್ ಇಬ್ಬರಿಗೂ ಪರಮಾಪ್ತನಾಗಿದ್ದವನು. ಪ್ರತೀ ಸಲ ನಾಗ ಮತ್ತು ಲಿಂಗ ಲೀಡರ್ಶಿಪ್ಗಾಗಿ ಬಡಿದಾಡಿಕೊಂಡಾಗ ನಡುವೆ ನಿಂತು ಖುದ್ದು ಸೈಲೆಂಟ್ ಸುನೀಲ ಮತ್ತು ಒಂಟೆ ರಾಜಿ ಮಾಡಿಸುತ್ತಿದ್ದರು. ಆದರೆ, 2020ರ ಡಿಸೆಂಬರ್ 15ನೇ ತಾರೀಖು ಹಾಸನದ ಕಮರವಳ್ಳಿ ಗ್ರಾಮದಲ್ಲಿದ್ದ ಲಿಂಗನ ಮೇಲೆ ಎರಗಿದ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗು ಅನಾಮತ್ತಾಗಿ ಕತ್ತರಿಸಿ ಬಿಸಾಕಿತ್ತು. ತಮ್ಮದೇ ಸಿಂಡಿಕೇಟಿನಲ್ಲಿದ್ದ, ಅಪಾರ ಪ್ರೀತಿಪಾತ್ರನೂ ಆಗಿದ್ದ ಲಿಂಗನನ್ನು ತಮ್ಮದೇ ಹುಡುಗ ವಿಲ್ಸನ್ ಗಾರ್ಡನ್ ನಾಗ ಕೊಲ್ಲಿಸಿ ಕೆಡವಿದ್ದು ಸೈಲೆಂಟ್ ಸುನೀಲ ಮತ್ತು ಒಂಟೆ ರೋಹಿತ್ ಬೇಸರಕ್ಕೆ ಕಾರಣವಾಗಿತ್ತು. ಅಲ್ಲೀತನಕ ನಮ್ಮದು-ತಮ್ಮದು ಅಂತಾ ಸಿಂಡಿಕೇಟ್ ಕಟ್ಟಿಕೊಂಡಿದ್ದ ಫೀಲ್ಡಲ್ಲಿ ನಂಬಿಕೆ ಅನ್ನೋದು ಮಣ್ಣುಪಾಲಾಗಿತ್ತು!
ದರ್ಶನ್ ಸ್ನೇಹಕ್ಕಾಗಿ!
ಸದ್ಯ ಜೈಲಿನಲ್ಲಿ ದಿಲ್ದಾರಾಗಿರುವ ವಿಲ್ಸನ್ ಗಾರ್ಡನ್ ನಾಗ ಮೊದಲಿನಿಂದಲೂ ದರ್ಶನ್ಗೆ ಹಾರ್ಡ್ ಕೋರ್ ಅಭಿಮಾನಿ. ಇತ್ತ ಸುನೀಲ ಕೂಡಾ ದರ್ಶನ್ ಫ್ಯಾನು. ಒಂದು ಕಾಲದಲ್ಲಿ ತನ್ನೊಟ್ಟಿಗೇ ಇದ್ದು, ನಂತರ ತನ್ನ ಆಪ್ತ ಲಿಂಗನನ್ನು ಕೊಲ್ಲಿಸಿದ್ದಲ್ಲದೇ, ಜೈಲಿನಲ್ಲಿ ದರ್ಶನ್ ಸ್ನೇಹ ಗಿಟ್ಟಿಸುತ್ತಿರುವ ನಾಗನ ವರಸೆ ಕಂಡು ಸೈಲೆಂಟ್ ಸುನಿಲನ ಮನಸ್ಸು ಒಳಗೊಳಗೇ ಕುದಿಯಲು ಶುರುವಾಗಿದೆ. ಈ ಕಾರಣಕ್ಕೇ ಮಾರ್ಕೆಟ್ ವೇಲುವನ್ನು ಬಿಟ್ಟು ಫೋಟೋ ತೆಗೆಸಿ ಅದನ್ನು ಹೊರಬರುವಂತೆ ಮಾಡಿರಬಹುದು ಎನ್ನುವ ದಟ್ಟ ಅನುಮಾನ ಹುಟ್ಟಿದೆ. ಮೂಲಗಳ ಪ್ರಕಾರ ಸೈಲೆಂಟ್ ಸುನೀಲ ಮತ್ತು ರಚಿತಾ ರಾಮ್ ನಡುವೆ ಒಂದೊಳ್ಳೆ ಅಭಿಮಾನ, ಬಾಂಧವ್ಯವಿದೆ. ಇತ್ತ ರಚಿತಾ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದ ಮಾರನೇ ದಿನಕ್ಕೆಲ್ಲಾ ಫೋಟೋ ಲೀಕ್ ಆಗಿರುವುದು ಕೂಡಾ ಮತ್ತೊಂದು ಮಜಲನ್ನು ಅನಾವರಣಗೊಳಿಸುತ್ತಿದೆ. ರೌಡಿಸಮ್ಮು, ರಾಜಕೀಯ, ಸಿನಿಮಾ ಮತ್ತದರ ಜೊತೆಗೊಂದು ಕೊಲೆ ಕೇಸು ಸೇರಿಕೊಂಡು ಬಗೆಬಗೆಯ ಬಣ್ಣಗಳನ್ನು ತೆಗೆದುಕೊಳ್ಳುತ್ತಿವೆ!
ʻನಾನು ಮುತ್ತಪ್ಪ ರೈ ಥರಾ ಆಗಬೇಕುʼ ಅಂತಾ ಆಗಾಗ ಆಪ್ತರಲ್ಲಿ ಹೇಳಿಕೊಳ್ಳುತ್ತಿದ್ದವರು ದರ್ಶನ್. ಚಕ್ರವರ್ತಿ ಎನ್ನುವ ಸಿನಿಮಾ ರೂಪುಗೊಂಡಿದ್ದರ ಹಿಂದೆಯೂ ದರ್ಶನ್ ಅವರ ಅಂಥದ್ದೊಂದು ಆಂತರ್ಯದ ಬಯಕೆ ಇತ್ತು. ʻತಾನೊಬ್ಬ ಹೆಸರಾಂತ ಹೀರೋ. ನನ್ನನ್ನು ಎಷ್ಟೋ ಜನ ಅನುಸರಿಸುತ್ತಿದ್ದಾರೆ. ಸಮಾಜದಲ್ಲಿ ತಗ್ಗಿ ಬಗ್ಗಿ ಬಾಳಬೇಕು. ಸರಳವಾಗಿದ್ದಷ್ಟೂ ಜನಪ್ರಿಯತೆ ಹೆಚ್ಚುತ್ತದೆ. ಉತ್ತಮ ರೀತಿಯಲ್ಲಿ ಎಲ್ಲರಿಗೂ ಮಾದರಿಯಾಗಬೇಕುʼ ಎನ್ನುವ ಹಂಬಲ ದರ್ಶನ್ ಗೆ ಯಾವತ್ತೂ ಇರಲಿಲ್ಲ. ದೈವದತ್ತವಾಗಿ ಬಂದಿದ್ದ ಅಭಿಮಾನಿ ಬಳಗವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ. ಬಾಯಿತುಂಬಾ ಹೊಲಸು ಮಾತು, ಸುತ್ತಲೂ ಅನಾಗರೀಕರ ಪಡೆಯನ್ನೇ ಬೆಳೆಸಿಕೊಂಡು ಬಂದಿದ್ದರು. ಸಿಕ್ಕವರಮೇಲೆ ಕೈ ಮಾಡೋದು ಖಯಾಲಿಯಾಗಿತ್ತು. ಕೊಲೆ ಕೇಸಲ್ಲಿ ಜೈಲು ಸೇರಿದ್ದೂ ಆಗಿದೆ. ಇನ್ನೇನು… ಎಲ್ಲವೂ ದರ್ಶನ್ ಬಯಸಿದಂತೆಯೇ ನಡೆಯುತ್ತಿದೆಯಲ್ಲಾ? ಯಾವತ್ತಾದರೊಂದು ದಿನ ಜೈಲಿಂದ ಹೊರಬಂದಮೇಲೆ ರಾಜಕಾರಣವನ್ನೂ ಆರಂಭಿಸಬಹುದು!!
No Comment! Be the first one.