ರಿಯಲ್ ಸ್ಟಾರ್ ಉಪೇಂದ್ರ ಈಗ ಐ ಲವ್ ಯೂ ಚಿತ್ರದಲ್ಲಿ ಬ್ಯತುಸಿಯಾಗಿದ್ದಾರೆ. ಅದಾಗಲೇ ಅವರ ಐವತ್ತನೇ ಚಿತ್ರದತ್ತ ಅಭಿಮಾನಿಗಳ ಕಣ್ಣು ನೆಟ್ಟಿದೆ. ಆ ಸಿನಿಮಾವನ್ನು ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಾರೆಂಬುದರ ಜೊತೆಗೆ, ಅಧಿರ ಎಂಬ ಟೈಟಲ್ಲೂ ಕೂಡಾ ಪಕ್ಕಾ ಆಗಿದೆ. ಬಹು ಭಾಷೆಯಲ್ಲಿ ಮೂಡಿ ಬರಲಿರೋ ಈ ಚಿತ್ರದ ಬಜೆಟ್ ಎದೆ ಅದುರಿಸುವಂತಿದೆ!
ಅಧಿರ ಹೇಳಿ ಕೇಳಿ ಉಪೇಂದ್ರ ಅವರ ಐವತ್ತನೇ ಚಿತ್ರ. ಇದು ವಿಶೇಷವಾಗಿರ ಬೇಕೆಂಬ ಇರಾದೆ ಉಪ್ಪಿಗೂ ಇತ್ತು. ಆದ್ದರಿಂದಲೇ ಅದನ್ನು ದೊಡ್ಡ ಮಟ್ಟದಲ್ಲಿಯೇ ಮಾಡಲು ಉಪ್ಪಿ ಮುಂದಾಗಿದ್ದಾರೆ. ಏಕಕಾಲದಲ್ಲಿಯೇ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿರೋ ಅಧಿರದ ಬಜೆಟ್ಟು ಐವತ್ತು ಕೋಟಿಯಂತೆ.
ಇದೀಗ ಈ ಚಿತ್ರಕ್ಕೆ ಜೋರಾಗಿಯೇ ತಯಾರಿ ನಡೆಯುತ್ತಿದೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯೂ ಭರದಿಂದ ಸಾಗುತ್ತಿದೆ. ನಾಯಕಿ ಯಾರಾಗಲಿದ್ದಾರೆಂಬ ಬಗ್ಗೆ ಉಪ್ಪಿ ಅಭಿಮಾನಿಗಳು ಕಾತರಾಗಿರೋವಾಗಲೇ ಹುಡುಕಾಟವೂ ನಡೆಯುತ್ತಿದೆ. ಇದೇ ಹೊತ್ತಲ್ಲಿ ಈ ಚಿತ್ರದ ಕಡೆಯಿಂದ ಮತ್ತೊಂದು ಒಳ್ಳೆ ಸುದ್ದಿಯೂ ಹೊರ ಬಿದ್ದಿದೆ.
ಅದರ ಪ್ರಕಾರ ಹೇಳೋದಾದರೆ ಅಧಿರವನ್ನು ಖುದ್ದು ಉಪೇಂದ್ರ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಒಂದಷ್ಟು ಕಾಲದ ಬಳಿಕ ಉಪ್ಪಿ ಮತ್ತೆ ನಿರ್ದೇಶಕರಾಗಿಯೂ ಅವತರಿಸಲಿದ್ದಾರೆ. ಇದು ನಿಜಕ್ಕೂ ಉಪ್ಪಿ ಅಭಿಮಾನಿಗಳ ಪಾಲಿಗೆ ಖುಷಿಯ ಸುದ್ದಿ! #