ಕೆಲವೊಂದು ಸಿನಿಮಾಗಳು ಸ್ಟಾರ್ ನಟರ ನಾಮಬಲದೊಂದಿಗೆ ಭರ್ಜರಿಯಾಗಿ ಓಪನಿಂಗ್ ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ನಿರ್ದೇಶಕರ ಚರಿಷ್ಮಾ ಕೆಲಸ ಮಾಡುತ್ತದೆ. ಹೆಸರಾಂತರ ಕಾಂಬಿನೇಷನ್ ಸಿನಿಮಾವಾಗಿ ಬಿಟ್ಟರಂತೂ ಚಿತ್ರ ಅನೌನ್ಸ್ ಆದಾಗಿಲಿಂದಲೇ ಅದರ ಬಗ್ಗೆ ಮಾತುಗಳು ಆರಂಭ. ಐ ಲವ್ ಯೂ ಕೂಡಾ ಅಂಥದ್ದೇ ಒಂದು ಚಿತ್ರ. ಸ್ಟಾರ್ ನಟ ಉಪೇಂದ್ರ ಮತ್ತು ಹಿಟ್ ಸಿನಿಮಾಗಳನ್ನ ನೀಡಿರುವ ಡೈರೆಕ್ಟರ್ ಆರ್ ಚಂದ್ರು ಸಂಯೋಜನೆಯಲ್ಲಿ ಮೂಡಿ ಬರುತ್ತಿರುವ ಚಿತ್ರ ಐ ಲವ್ ಯೂ. ವಿಭಿನ್ನವಾದ ಕಾಸ್ಟ್ಯೂಮ್, ಕುತೂಹಲ ಹೆಚ್ಚಿಸಿದ ಟ್ರೇಲರ್, ದಾವಣಗೆರೆಯಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದ ವೈಭವ.. ಇದೆಲ್ಲವನ್ನೂ ನೋಡುತ್ತಿದ್ದರೆ ಐ ಲವ್ ಯೂ 2019ರ ಬ್ಲಾಕ್ ಬಸ್ಟರ್ ಚಿತ್ರವಾಗುವ ನಿರೀಕ್ಷೆಗಳನ್ನ ಹುಟ್ಟುಹಾಕುತ್ತಿದೆ.

ಹಾಗೆ ನೋಡಿದರೆ ಐ ಲವ್ ಯೂ ಸಿನಿಮಾ ಇದೇ ವ್ಯಾಲೆಂಟೆನ್ಸ್ ದಿನದಂದು ತೆರೆ ಕಾಣಬೇಕಿತ್ತು. ಶೀರ್ಷಿಕೆಯೇ ಐ ಲವ್ ಯೂ ಎಂದಿರುವಾಗ ಫೆಬ್ರುವರಿ 14ಕ್ಕಿಂತ ಬೇರೆ ಸೂಕ್ತ ದಿನಾಂಕ ಬೇಕೆ? ಎಂದು ನಿರ್ದೇಶಕ ಆರ್ ಚಂದ್ರು ಕೂಡಾ ಆಲೋಚಿಸಿದ್ದರು. ಆದರೆ ‘ಚಿತ್ರ ಇನ್ನಷ್ಟು, ಮತ್ತಷ್ಟು ಸೊಗಸಾಗಿ ಮೂಡಿ ಬರಬೇಕು, ಉಪೇಂದ್ರ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಬಾರದು’ ಎಂಬ ಸಂಕಲ್ಪಕ್ಕೆ ಬಿದ್ದ ಚಂದ್ರು ಆ ನಿಟ್ಟಿನಲ್ಲಿ ಕೆಲಸ ಮಾಡಿಸುತ್ತಲೇ ಇದ್ದಾರೆ. ಹೀಗಾಗಿ ಐ ಲವ್ ಯೂ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಜೂನ್ 14ಕ್ಕೆ ಚಿತ್ರ ತೆರೆಗೆ ಬರುತ್ತಿದೆ.

ಆರ್ ಚಂದ್ರು ನವಿರಾದ ಪ್ರೇಮಕಥೆ, ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳನ್ನ ಮಾಡಿ ಹೆಸರಾದ ನಿರ್ದೇಶಕ. ಹಳ್ಳಿ ಸೊಗಡು, ತಾಯಿ ಸೆಂಟಿಮೆಂಟ್, ಪ್ರೇಮದ ಹೊಯ್ದಾಟಗಳು. ಇವೆಲ್ಲ ಚಂದ್ರು ಅವರ ಸಿನಿಮಾದ ಜೀವಾಳ. ಅವರ ಆರಂಭದ ತಾಜ್‍ಮಹಲ್ ಸಿನಿಮಾದಿಂದ ಹಿಡಿದು ಇತ್ತೀಚಿಗಿನ ಕನಕವರೆಗೂ ಅವರದನ್ನ ಬಿಟ್ಟುಕೊಟ್ಟಿಲ್ಲ. ಆ ಕಾರಣದಿಂದಲೇ ಚಂದ್ರು ಸಿನಿಮಾಗಳಿಗೆ ಕೌಟುಂಬಿಕ ಪ್ರೇಕ್ಷಕರ ದಾಖಲಾತಿ ಹೆಚ್ಚಿದೆ. ಆದರೆ ಉಪೇಂದ್ರರ ಅಭಿಮಾನಿ ವರ್ಗದ ಟೆಂಪೋನೆ ಬೇರೆ.

ಉಪೇಂದ್ರ ಅಂದರೇನೇ ಡೈಲಾಗ್ ಕಿಂಗ್, ರಿಯಲ್ ಸ್ಟಾರ್ ಇಮೇಜ್, ಅಬ್ಬರ, ಟ್ವಿಸ್ಟ್‍ಗಳು ನೆನಪಾಗುತ್ತವೆ. ಉಪ್ಪಿ ಎಷ್ಟೇ ಸಿನಿಮಾ ಮಾಡಿದ್ದರೂ ಇವತ್ತಿಗೂ ಅವರ ಕಟ್ಟಾಭಿಮಾನಿಗಳು ಎ ಮತ್ತು ಉಪೇಂದ್ರ ಚಿತ್ರವನ್ನ ನೆನಪಿಸಿಕೊಂಡು ರೋಮಾಂಚಿತರಾಗುತ್ತಾರೆ. ತಮ್ಮ ಇಷ್ಟದ ನಟನ ಪ್ರೀತ್ಸೆ ಚಿತ್ರದ ಇಮೇಜ್‍ನ್ನ ಅವರ ಅಭಿಮಾನಿಗಳು ಇವತ್ತಿಗೂ ಬಿಟ್ಟುಕೊಡಲು ಸಿದ್ಧರಿಲ್ಲ. ಹಾಗಿದ್ದರೂ ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ಚಿತ್ರ ಸೆಟ್ಟೇರಿದ್ದೇ ವಿಶೇಷವಾದದ್ದು.

ಇಲ್ಲಿ ಉಪೇಂದ್ರ ಆರ್ ಚಂದ್ರು ಮಾದರಿಗೆ ಹೊರಳಿಕೊಳ್ಳುತ್ತಾರೋ ಅಥವಾ ಆರ್ ಚಂದ್ರು ಉಪೇಂದ್ರರ ಮಾದರಿಯ ಸಿನಿಮಾ ಮಾಡುತ್ತಾರೋ ಎಂಬ ಕುತೂಹಲಗಳು ಮೊದಲೇ ಶುರುವಾಗಿದ್ದವು. ಅದಕ್ಕೆ ಆರ್ ಚಂದ್ರು ಆರಂಭದಲ್ಲೇ ‘ಇದು ನನ್ನ ಚಿತ್ರ. ಆದರೆ ಉಪೇಂದ್ರರ ಹಳೇ ಇಮೇಜ್‍ನಲ್ಲಿರುತ್ತದೆ..’! ಎಂದು ಹೇಳಿದ್ದರು. ಹೀಗೊಂದು ಟ್ವಿಸ್ಟ್ ಕೊಡುವುದರ ಮೂಲಕವೇ ಆರ್ ಚಂದ್ರು ಐ ಲವ್ ಯೂ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುವಂತೆ ಮಾಡಿಬಿಟ್ಟಿದ್ದರು. ದಿನೇ ದಿನೇ ಇದು ಹೆಚ್ಚಾಗುತ್ತಲೇ ಇದೆ. ಇಬ್ಬರ ಶೈಲಿಯ ಈ ಸಿನಿಮಾ ಹೇಗಿರಬಹುದು ಎಂದು ಈಗಾಗಲೇ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ.

ಚಂದ್ರು ಕಂಡಂತೆ ಉಪ್ಪಿ

‘ಬ್ರಹ್ಮ ಸಿನಿಮಾದ ನಂತರ ನಾನು ಉಪ್ಪಿ ಸರ್ ಸೇರಿ ಮಾಡುತ್ತಿರುವ ಎರಡನೇ ಚಿತ್ರವಿದು. ಆಗಲೂ ನಿರೀಕ್ಷೆಗಳಿದ್ದವು. ಆದರೆ ಈ ಬಾರಿ ಐ ಲವ್ ಯೂಗೆ ಮಾತ್ರ ನಾನೆಣಿಸಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿಯೇ ಕ್ರೇಜ್ ಕ್ರಿಯೇಟ್ ಆಗಿದೆ. ಟೀಸರ್ ಬಿಟ್ಟಾಗಲೇ ನನಗೆ ಅದರ ಅನುಭವವಾಯ್ತು. ಉಪೇಂದ್ರರ ಹಳೆ ಶೈಲಿಯನ್ನ, ಆ ಧಾಟಿಯ ಮಾತುಗಳನ್ನ ಬಹಳ ವರ್ಷಗಳ ನಂತರ ನೋಡಿದ ಅವರ ಅಭಿಮಾನಿಗಳು, ಐ ಲವ್ ಯೂ ಮೂಲಕ ತಮ್ಮ ನೆಚ್ಚಿನ ನಟ ಮಗದೊಮ್ಮೆ ರಸದೌತಣ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ಖಂಡಿತಾ ಐ ಲವ್ ಯೂ ಮೂಲಕ ಈಡೇರಲಿದೆ. ನಾನು ಭರವಸೆ ಕೊಡುತ್ತೇನೆ..’ ಎನ್ನುತ್ತಾರೆ ಆರ್ ಚಂದ್ರು.

ಚಂದ್ರು ಎಷ್ಟೇ ಹೆಸರು ಮಾಡಿದ್ದರೂ ಇವತ್ತಿಗೂ ಅವರ ವಿಧೇಯತೆ ಕಡಿಮೆಯಾಗಿಲ್ಲ. ಉಪೇಂದ್ರ ನಟರೂ ಹೌದು. ನಿರ್ದೇಶಕರೂ ಹೌದು. ಹೀಗಾಗಿ ಅಂಥ ಪೊಸಿಷನ್‍ನಲ್ಲಿರುವವರನ್ನ ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. ಈ ಸವಾಲನ್ನ ಚಂದ್ರು ಹೇಗೆ ಸ್ವೀಕರಿಸಿದರು. ನಿರ್ದಶಕ ಉಪೇಂದ್ರರಿಂದ ನಿರ್ದೇಶಕ ಚಂದ್ರುಗೆ ಕಿರಿಕಿರಿಯಾದದ್ದೇನಾದರೂ ಉಂಟಾ? ಪ್ರಶ್ನೆ ಸಹಜ.

ಆದರೆ ಚಂದ್ರು ಕೊಡುವ ಉತ್ತರವೇ ಬೇರೆ- ‘ಉಪ್ಪಿ ಸರ್ ಜೊತೆ ಈಗಲ್ಲ, ಬ್ರಹ್ಮ ಮಾಡುವಾಗಲೂ ನಾನು ಸಮಸ್ಯೆ ಎದುರಿಸಿಲ್ಲ. ಅವರು ನಿರ್ದೇಶಕರ ನಟ. ಯಾವುದೇ ವಿಷಯ ಅವರ ತಲೆಗೆ ಬಂದರೆ ಅದನ್ನ ಸಮಾಲೋಚಿಸುತ್ತಾರೆ. ಹೀಗೆ ಮಾಡಬಹುದೇನೋ ನೋಡಿ ಎಂದು ಸಜೆಷನ್ ಕೊಡುತ್ತಾರೆ. ಆದರೆ ಅದನ್ನೇ ಮಾಡಬೇಕು ಎಂದು ಹಠ ಹಿಡಿಯುವುದಿಲ್ಲ. ಅದಕ್ಕೆ ಅವರು ಇವತ್ತು ಈ ಎತ್ತರಕ್ಕೆ ಬೆಳೆದು ನಿಂತಿರುವುದು. ಅವರಿಂದ ಬಂದ ಎಷ್ಟೋ ಸಲಹೆಗಳನ್ನ ನಾನು ಸ್ವೀಕರಿಸಿದ್ದೇನೆ. ಅಗತ್ಯ ಎನಿಸಿದ್ದನ್ನ ಅಳವಡಿಕೆಯೂ ಮಾಡಿದ್ದೇನೆ. ಅದರಿಂದ ಐ ಲವ್ ಯೂ ಚಿತ್ರದ ಮೆರುಗು ಮತ್ತಷ್ಟು ಹೆಚ್ಚಾಯ್ತೇ ವಿನಾ ನನ್ನ ಇಗೋಗೆ ಎಲ್ಲೂ ಹರ್ಟ್ ಆಗಿಲ್ಲ. ಒಳ್ಳೇಯದನ್ನ ಎಲ್ಲಾ ಕಡೆಯಿಂದಲೂ ಸ್ವೀಕರಿಸುವವನು ನಾನು. ಆ ರೀತಿ ಮಾಡಿದಾಗಲೆ ಒಂದು ಒಳ್ಳೇ ಸಿನಿಮಾ ರೂಪುಗೊಳ್ಳಲು ಸಾಧ್ಯ..’ ಎನ್ನುತ್ತಾರೆ ಚಂದ್ರು.

‘ಉಪ್ಪಿ ಸರ್‍ರ ದೊಡ್ಡ ಗುಣ ಎಂಥವರನ್ನೂ ಇಂಪ್ರೆಸ್ ಮಾಡುತ್ತದೆ. ನನಗವರು ಎರಡನೇ ಛಾನ್ಸ್ ಕೊಟ್ಟಿದ್ದಾರೆ. ನಾನದಕ್ಕೆ ಎಂದಿಗೂ ಅಭಾರಿ. ಹತ್ತು ಲಕ್ಷ ರೂಪಾಯಿಗಳ ಬಾಕಿ ಮೊತ್ತವನ್ನ ಅವರಿಗೆ ಕೊಡಲು ಒಮ್ಮೆ ಅವರ ಮನೆಗೆ ಹೋಗಿದ್ದೆ. ಅವರದರಲ್ಲಿ ಬರೇ ಒಂದು ಲಕ್ಷ ತೆಗೆದುಕೊಂಡು ಕಳಿಸಿಕೊಟ್ಟರು. ಅದು ಅವರ ಔದಾರ್ಯಕ್ಕೆ ಸಾಕ್ಷಿ.  ತಂತ್ರಜ್ಞರಿಗೆ, ಅವರು ಮಾಡಿದ ಉತ್ತಮ ಕೆಲಸಗಳಿಗೆ ಉಪ್ಪಿ ಸರ್ ಯಾವತ್ತಿಗೂ ಗೌರವ ಕೊಡುತ್ತಾರೆ. ಅಷ್ಟು ದೊಡ್ಡ ಹೆಸರು ಮಾಡಿದವರು ಹೀಗೆಲ್ಲಾ ನಡೆದುಕೊಂಡಾಗ ನಮಗೂ ಖುಷಿಯಾಗುತ್ತದೆ.

ಐ ಲವ್ ಯೂ ಸಿನಿಮಾಕ್ಕಾಗಿ ಕಾಲ್ ಶೀಟ್ ಕೇಳಲು ಹೋದಾಗ ಆಕ್ಚುಯಲಿ ಅವರು ಮೊದಲೇ ಬೇರೆ ಚಿತ್ರಕ್ಕೆ ಬುಕ್ಕಾಗಿದ್ದರು. ಆದರೆ ನನ್ನ ಮೇಲಿನ ಪ್ರೀತಿಯಿಂದಾಗಿ ಅದನ್ನ ನನಗೆ ಕೊಪಡಿಸಿ ಈ ಚಿತ್ರ ಶುರುವಾಗುವಂತೆ ನೋಡಿಕೊಂಡರು. ಅದರಿಂದಲೇ ಐ ಲವ್ ಯೂ ಇಷ್ಟು ಶೀಘ್ರವಾಗಿ ಸೆಟ್ಟೇರಿ ಪೂರ್ಣಗೊಳ್ಳಲು ಸಾಧ್ಯವಾಯ್ತು..’ ಎನ್ನುತ್ತಾರೆ ಚಂದ್ರು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚಿತ್ರರಂಗದಲ್ಲಿ ಅನುಭವಕ್ಕಿಂತ ಗೆಲ್ಲುವ ಸಿನಿಮಾ ಮಾಡುವುದು ಮುಖ್ಯ!

Previous article

ಹೊರಬಿತ್ತು ಐ ಲವ್ ಯು ಮೊದಲ ವಿಡಿಯೋ ಸಾಂಗ್!

Next article

You may also like

Comments

Leave a reply

Your email address will not be published. Required fields are marked *