ಉಪ್ಪಿ-2 ಚಿತ್ರದ ಕ್ರಿಯೇಟಿವ್ ಪೋಸ್ಟರ್ ಡಿಸೈನುಗಳು ಒಂದು ಥರದ ಅಚ್ಚರಿಗೆ ಕಾರಣವಾಗಿತ್ತಲ್ಲಾ? ಅದನ್ನು ವಿನ್ಯಾಸಗೊಳಿಸಿದ್ದವರು ವಿಜಯ್ ಸೂರ್ಯ ಎಂಬ ಪ್ರತಿಭೆ. ಆ ಚಿತ್ರದ ಪೋಸ್ಟರ್ ಡಿಸೈನಿಂಗ್ ಜೊತೆಗೆ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದ ವಿಜಯ್ ಮೂಲತಃ ಉಪ್ಪಿ ಅಭಿಮಾನಿ. ಬಹುಶಃ ಆ ಕಾರಣದಿಂದಲೇ ಉಪೇಂದ್ರ ಗರಡಿ ಸೇರಿಕೊಂಡು ಭಿನ್ನವಾಗಿ ಆಲೋಚಿಸುವ ವಿಧಾನವನ್ನೂ ಸಿದ್ಧಿಸಿಕೊಂಡಂತಿರೋ ಅವರೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅದರ ಫಲವಾಗಿಯೇ ಇದೀಗ `ಎ ಪ್ಲಸ್’ ಚಿತ್ರದ ಹಂಗಾಮಾ ಶುರುವಾಗಿ ಬಿಟ್ಟಿದೆ!
ಈಗ `ಎ ಪ್ಲಸ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಿವರಾಜ್ ಕುಮಾರ್, ಉಪೇಂದ್ರ ಸೇರಿದಂತೆ ಅನೇಕ ಸ್ಟಾರ್ ನಟರೇ ಈ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಒಂದೂವರೆ ನಿಮಿಷದ ಈ ಟ್ರೈಲರ್ ಸೃಷ್ಟಿಸಿರೋ ಸೆನ್ಸೇಷನ್ ಎಂಥವರೂ ಬೆರಗಾಗುವಂತಿದೆ. ಒಂದಷ್ಟು ಮಂದಿಗಿದು ಅಂಡರ್ವರ್ಲ್ಡ್ ಬೇಸ್ಡ್ ಲವ್ ಸ್ಟೋರಿಯಂತೆ ಕಂಡರೆ ಮತ್ತೆ ಕೆಲವರಿಗೆ ಬೇರೆಯದ್ದೇ ರೀತಿಯಲ್ಲಿ ಗೋಚರಿಸಿದೆ. ಒಟ್ಟಾರೆಯಾಗಿ ಈ ಚಿತ್ರದ ಮೇಲೀಗ ಎಲ್ಲರ ದೃಷ್ಟಿ ನೆಟ್ಟಿದೆ. ಈ ಮೂಲಕ ಆರಂಭಿಕ ಹೆಜ್ಜೆಯಲ್ಲಿಯೇ ನಿರ್ದೇಶಕ ವಿಜಯ್ ಸೂರ್ಯ ಭರವಸೆ ಮೂಡಿಸಿದ್ದಾರೆ.
ಒಟ್ಟಾರೆಯಾಗಿ ಈ ಚಿತ್ರದ ಬಗ್ಗೆ ನಿರ್ದೇಶಕ ವಿಜಯ್ ಸೂರ್ಯ ಕುತೂಹಲದ ಕೆಂಡಕ್ಕೆ ತುಪ್ಪ ಸುರಿಯುವಂಥಾ ಮತ್ತೊಂದಷ್ಟು ವಿಚಿತ್ರ ವಿಚಾರಗಳನ್ನೇ ಹೊರ ಹಾಕಿದ್ದಾರೆ. ಒಂದು ಚಿತ್ರವೆಂದ ಮೇಲೆ, ಅದರಲ್ಲಿಯೂ ಕಮರ್ಷಿಯಲ್ ಚಿತ್ರಗಳಲ್ಲಿ ಹಾಡು ಮತ್ತು ಫೈಟ್ ಸೀನುಗಳು ಇರಲೇ ಬೇಕೆಂಬ ಸೂತ್ರವಿದೆ. ಆದರೆ ಈ ಚಿತ್ರದಲ್ಲಿ ಹಾಡೂ ಇಲ್ಲ. ಫೈಟಿಂಗೂ ಇಲ್ಲ. ಅರೇ ಟ್ರೈಲರ್ ನೋಡಿದರೆ ಭೂಗತ ಲೋಕದ ಕಥೆ ಇದ್ದಂತಿದೆ. ಫೈಟಿಂಗ್ ಇಲ್ಲ ಅಂದರೆ ಏನರ್ಥ ಎಂಬ ಪ್ರಶ್ನೆ ನಿರ್ದೇಶಕರಿಗೆ ಹೋದಲ್ಲಿ ಬಂದಲ್ಲಿ ಎದುರಾಗುತ್ತಿವೆಯಂತೆ. ಈ ಚಿತ್ರದುದ್ದಕ್ಕೂ ಫೈಟಿಂಗ್ ಇದೆ ಆದ್ರೆ ಕಾಣೋದಿಲ್ಲ ಅನ್ನೋ ಮೂಲಕ ನಿರ್ದೇಶಕ ವಿಜಯ ಸೂರ್ಯ ಮತ್ತಷ್ಟು ಕೌತುಕ ಕುದಿಯುವಂತೆ ಮಾಡುತ್ತಿದ್ದಾರೆ.
ಹೀಗೆ ಮೊದಲ ಚಿತ್ರದಲ್ಲಿಯೇ ಈ ಪಾಟಿ ಸಂಚಲನ ಸೃಷ್ಟಿಸಿರುವ ವಿಜಯ್ ಸೂರ್ಯ ಮೂಲತಃ ಬೆಂಗಳೂರಿನವರೇ. ಕಾಮಾಕ್ಷಿಪಾಳ್ಯದ ಬಡ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಅವರಿಗೆ ಯಾವ ಸಿನಿಮಾ ಹಿನ್ನೆಲೆಯೂ ಇಲ್ಲ. ಸಿನಿಮಾ ಬಗ್ಗೆ ಕನಸು ಕಾಣುವಂಥಾ ವಾತಾವರಣವೂ ಇರಲಿಲ್ಲ. ಆದರೆ ಆರಂಭದಿಂದಲೂ ಇವರಿಗೆ ಸಿನಿಮಾಸಕ್ತಿ ಇತ್ತು. ಬರ ಬರುತ್ತಾ ರಿಯಲ್ ಸ್ಟಾರ್ ಉಪೇಂದ್ರ ಮೇಲೆ ಅಭಿಮಾನವೂ ಹುಟ್ಟಿಕೊಂಡಿತ್ತು. ಈ ನಡುವೆ ವಿಜಯ್ ಅವರನ್ನು ಅವರ ಬಾಲ್ಯ ಸ್ನೇಹಿತ ಆ ಕಾಲಕ್ಕೆ ನಟರಾಗಿದ್ದ ಮಂಡ್ಯ ಜಗದೀಶ್ ಬಳಿ ಬಿಟ್ಟಿದ್ದರು. ಈಗ ನಿರ್ಮಾಪಕರಾಗಿರೋ ಜಗದೀಶ್ ನಂತರ ವಿಜಯ್ರನ್ನು ನಿರ್ದೇಶಕ ಅನೀಲ್ ಅವರಿಗೆ ಪರಿಚಯಿಸಿದ್ದರು. ಅದಾದ ಬಳಿಕ ವಿಜಯ್ ಅನಿಲ್ ಅವರ ಮನೆಯಲ್ಲಿಯೇ ಮನೆ ಮಗನಂತೆ ಆರೇಳು ವರ್ಷ ಕಲಿತಿದ್ದರು. ಸಿನಿಮಾ, ನಿರ್ದೇಶನದ ಬಗ್ಗೆಯೂ ತಿಳಿದುಕೊಂಡಿದ್ದರು.
ಅನಿಲ್ ಅವರೇ ಉಪ್ಪಿ ೨ ಚಿತ್ರದ ಸಮಯದಲ್ಲಿ ವಿಜಯ್ ರನ್ನು ಉಪೇಂದ್ರ ಅವರ ಬಳಿ ಹೋಗುವಂತೆ ಮಾಡಿದ್ದರು. ಹಾಗೆ ಹೋಗುವಾಗ ಉಪ್ಪಿ ೨ ಚಿತ್ರದ ಕೆಲ ಪೋಸ್ಟರುಗಳನ್ನೂ ಡಿಸೈನು ಮಾಡಿದ್ದರಲ್ಲಾ ವಿಜಯ್? ಅದು ಉಪ್ಪಿಗೆ ತುಂಬಾ ಇಷ್ಟವಾಗಿತ್ತು. ಆ ಕಾರಣದಿಂದಲೇ ಉಪ್ಪಿ ವಿಜಯ್ರನ್ನು ಡಿಸೈನರ್ ಕಂ ಅಸೋಸಿಯೇಟ್ ಆಗಿ ಮೇಮಿಸಿಕೊಂಡಿದ್ದರು. ಇದಕ್ಕೂ ಮೊದಲೇ ವಿಜಯ್ ವಿಜಯಾ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ನಿರ್ದೇಶನ ತರಬೇತಿ ಪಡೆದು ಬಂದು ಆರಂಭದಲ್ಲಿಯೇ ಒರಟ ಐಲವ್ ಯೂ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆ ಬಳಿಕ ದೀನ, ಶಕ್ತಿ, ವೀರ, ಮುದ್ದು ಮನಸೇ, ಮುಂತಾದ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆ ಎಲ್ಲ ಅನುಭವಗಳು ಸ್ಪಷ್ಟವಾಗಿ ಮಾಗಿಕೊಂಡಿದ್ದ ಉಪ್ಪಿಯ ಸಮ್ಮುಖದಲ್ಲಿಯೇ.
ಉಪ್ಪಿ ೨ ಚಿತ್ರವಾದ ನಂತರದಲ್ಲಿ ವಿಜಯ್ `ಎ ಪ್ಲಸ್’ ಚಿತ್ರದ ಕಥೆ ಬರೆದು ಅದನ್ನು ಉಪೇಂದ್ರರಿಗೆ ಹೇಳಿದ್ದರಂತೆ. ಅದನ್ನು ಇಷ್ಟಪಟ್ಟ ಉಪ್ಪಿ ಈ ಟೈಟಲ್ಲೇ ಏಕೆ ಬೇಕು ಅಂತೆಲ್ಲ ವಿಚಾರಿಸಿ ಆ ಬಳಿಕ ಒಪ್ಪಿಕೊಂಡಿದ್ದರಂತೆ. ಆ ನಂತರ ನಿರ್ಮಾಪಕರಾದ ಸೌಂದರ್ಯ ಜಗದೀಶ್ ಕೂಡಾ ಈ ಕಥೆಯನ್ನು ಇಷ್ಟಪಟ್ಟಿದ್ದರಂತೆ. ಕಡೆಗೂ ವಿ. ಪ್ರಭು ಕುಮಾರ್ ಕಥೆ, ಕ್ರಿಯೇಟಿವ್ ಅಂಶಗಳಿಗೆ ಮನಸೋತ ವಿ ಪ್ರಭುಶಂಕರ್ ಈ ಚಿತ್ರ ನಿರ್ಮಾಣ ಮಾಡಲು ಮುಂದಾಗಿ ಅದನ್ನು ಪೂರೈಸಿಕೊಂಡಿದ್ದಾರೆ.
ಈ ಮೂಲಕ ಅನೀಲ್ ಸಿದ್ದು ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ಹರ ಹರ ಮಹಾದೇವ ಸೀರಿಯಲ್ಲಿನಲ್ಲಿ ಸತಿಯಾಗಿ ನಟಿಸಿದ್ದ ಸಂಗೀತಾ ಶೃಂಗೇರಿ ಈ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. ಈ ಚಿತ್ರದ ಮೂಲಕ ವಿಜಯ್ ಸೂರ್ಯ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
https://www.youtube.com/watch?v=-yNUhnwWU2Q #