ಯಾವುದೇ ಹಾಡು ರಿಲೀಸ್ ಆಗಬೇಕಾದರೆ ಅದರ ಬಿಡುಗಡೆಗೂ ಮುನ್ನ ಮಾಡಬೇಕಾದ ವರ್ಕುಗಳು ಅಷ್ಟಿಷ್ಟಲ್ಲ. ಗೀತ ಸಾಹಿತ್ಯ ಬರೆದು, ಅದಕ್ಕೆ ಟ್ರ್ಯಾಕ್ ಹಾಡಿಸಿ ನಂತರ ಮೂಲ ಗಾಯಕರಿಂದ ಹಾಡಿಸಲಾಗುತ್ತದೆ. ಒಮ್ಮೊಮ್ಮೆ ಟ್ರ್ಯಾಕ್ ಹಾಡಿದ್ದೇ ಚೆಂದ ಬಂದರೆ ಅದನ್ನೇ ಕ್ಯಾರಿ ಮಾಡಲಾಗುತ್ತದೆ. ಸಾಕಷ್ಟು ಸಂಗೀತ ನಿರ್ದೇಶಕರು ಇದೇ ರೂಲ್ಸ್ ಫಾಲೋ ಮಾಡೋದು ಕೂಡ.
ಸದ್ಯ ಸ್ಯಾಂಡಲ್ ವುಡ್ ನ ಬೇಡಿಕೆಯ ಸಂಗೀತ ನಿರ್ದೆಶಕ ಹರಿಕೃಷ್ಣ ಕೂಡ ಅಂತಹ ಸಾಕಷ್ಟು ಟ್ರ್ಯಾಕ್ ಗಳನ್ನು ಹಾಡಿದ್ದಾರೆ. ಅವರ ಹೆಂಡತಿ ಕಮ್ ಸಿಂಗರ್ ವಾಣಿ ಹರಿಕೃಷ್ಣ ಕೂಡ ಸಾಕಷ್ಟು ಹಾಡುಗಳಿಗೆ ಟ್ರ್ಯಾಕ್ ಹಾಡುತ್ತಾರೆ. ಆದರೆ ಇತ್ತೀಚಿಗೆ ಅವರು ತೀರ ಮನನೊಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕುರುಕ್ಷೇತ್ರ ಹಾಗೂ ರಾಂಧವ ಚಿತ್ರದ ಹಾಡುಗಳಿಗೆ ಟ್ರ್ಯಾಕ್ ಗಳನ್ನು ವಾಣಿ ಹರಿಕೃಷ್ಣ ಹಾಡಿದ್ದರಂತೆ. ಅದನ್ನು ಹಾಡಿಸಿದ್ದು ಕೂಡ ಪತಿ ಹರಿಕೃಷ್ಣ ಅವರೇ. ಆದರೆ ಹರಿಕೃಷ್ಣ ಅವರ ಟ್ರ್ಯಾಕ್ ಹಾಗೆಯೇ ಉಳಿಸಿಕೊಂಡು ಬೇರೆ ಗಾಯಕರಿಂದ ಹಾಡನ್ನು ಹಾಡಿಸಿದ್ದಾರೆ. ಆದರೆ ತಾನು ಹಾಡಿರುವ ಹಾಡೇ ಫೈನಲ್ ಎಂದು ಭಾವಿಸಿದ್ದ ವಾಣಿ ಹರಿಕೃಷ್ಣ ಅದು ಸುಳ್ಳು ಎಂದು ತಿಳಿದಮೇಲೆ ವಿಷಾಧವನ್ನು ವ್ಯಕ್ತಪಡಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಕುರಿತು ಸದ್ಯ ಹರಿಕೃಷ್ಣ ಅವರೇ ಸ್ಪಷ್ಟನೇ ನೀಡಬೇಕಿದೆ.