ವಾಹಿನಿಗಳಲ್ಲಿ ಕೆಲಸ ಮಾಡುವುದರೊಂದಿಗೆ ಜೊತೆಯಾಗಿ, ಬಹುಕಾಲದ ಪ್ರೀತಿಯನ್ನು ಪೋಷಿಸಿಕೊಂಡು ಬಂದಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಸಾಂಸ್ಕೃತಿಕ ವಲಯದಲ್ಲಿ ವರುಣ್ ಮತ್ತು ಕಾವ್ಯ ಇಬ್ಬರೂ ಅಪಾರ ಸ್ನೇಹ ಸಂಪಾದಿಸಿದ್ದಾರೆ. ಖಂಡಿತವಾಗಿ ಆ ಎಲ್ಲ ಸ್ನೇಹ ಬಳಗ ಇವರಿಬ್ಬರ ಮದುವೆಗೆ ಸಾಕ್ಷಿಯಾಗಲಿದೆ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುತೇಕರಿಗೆ ಪರಿಚಯವಿರುವ ಹೆಸರು ವರುಣ್ ಗೌಡ. ಜ಼ೀ ಟೀವಿಯಲ್ಲಿ ಕಾರ್ಯನಿರ್ವಹಿಸುತ್ತಾ ಚಿತ್ರರಂಗದವರ ಸಂಪರ್ಕ, ಪ್ರೀತಿ ಪಡೆದಿರುವ ವರುಣ್ ಈಗ ವಾಹಿನಿಗಷ್ಟೇ ಸೀಮಿತವಾಗಿಲ್ಲ. ಇವೆಂಟ್ ಮ್ಯಾನೇಜ್ ಮೆಂಟ್, ಕಾರ್ಯಕ್ರಮ ಸಮನ್ವಯ, ಸಿನಿಮಾ ನಿರ್ಮಾಣ, ರೆಸ್ಟೋರೆಂಟ್ ಉದ್ಯಮ – ಹೀಗೆ ನಾಲ್ಕಾರು ಕೆಲಸಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಇಡೀ ಸಿನಿಮಾ ಉದ್ಯಮದ ಜೊತೆಗೆ ನಂಟು ಹೊಂದಿರುವ ವರುಣ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪಿ.ಆರ್.ಕೆ. ಸಂಸ್ಥೆಯೊಂದಿಗೆ ಸ್ವಲ್ಪ ಹೆಚ್ಚೇ ಬಾಂಧ್ಯವ್ಯ ಹೊಂದಿರುವವರು. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಹೇಗಿರುತ್ತದೆಂದರೆ, ಒಬ್ಬ ಸೂಪರ್ ಸ್ಟಾರ್, ಒಂದು ಸಂಸ್ಥೆಯ ಜೊತೆ ಭಾಗಿಯಾದವರು ಮತ್ತೊಂದು ಜಾಗದಲ್ಲಿ ಕಾಣಸಿಗುವುದಿಲ್ಲ. ಆದರೆ ವರುಣ್ ಹಾಗಲ್ಲ. ಇಲ್ಲಿರುವ ಎಲ್ಲ ಹೀರೋಗಳೊಂದಿಗೂ ಏಕಪ್ರಕಾರದ ಬಾಂಧವ್ಯ ಉಳಿಸಿಕೊಂಡಿದ್ದಾರೆ.
ಇನ್ನು, ನಟಿ ಕಾವ್ಯ ಶಾ ಗೊತ್ತಲ್ಲ… ಹಿರಿಯ ನಟ ನಾಗೇಂದ್ರ ಶಾ ಮಗಳು. ಸಿನಿಮಾ- ಕಿರುತೆರೆ ನಟಿ, ರೂಪರ್ದಶಿ, ನೃತ್ಯ ಕಲಾವಿದೆ, ಕೊರಿಯೋಗ್ರಫರ್, ಕಾರ್ಯಕ್ರಮ ನಿರೂಪಕಿ. ಸರಿ ಸುಮಾರು ಹತ್ತನ್ನೆರಡು ವರ್ಷಗಳ ಹಿಂದೆಯೇ ಚಿತ್ರರಂಗ ಪ್ರವೇಶಿಸಿದ್ದ ಕಾವ್ಯ ಹೆಚ್ಚು ಫೇಮಸ್ ಆಗಿದ್ದು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾದ ಮೂಲಕ. ಆ ನಂತರ ಚಕ್ರವ್ಯೂಹ, ಮುಕುಂದ ಮುರಾರಿ, ಲೌಡ್ ಸ್ಪೀಕರ್, ಮೂಕಜ್ಜಿಯ ಕನಸುಗಳು ಚಿತ್ರಗಳಲ್ಲಿ ನಟಿಸಿದರು.
ಬಾಲಾ ನಿರ್ದೇಶನದ ತಾರೈತಾಪಟ್ಟಿ ಸಿನಿಮಾದ ಮೂಲಕ ತಮಿಳಿಗೆ ಹೋದ ಕಾವ್ಯ ಅಲ್ಲೂ ಮೇಲಿಂದ ಮೇಲೆ ಅವಕಾಶ ಪಡೆದರು. ವೀರ ಶಿವಾಜಿ, ಜರುಗಂಡಿ, ಪ್ಯಾರಿಸ್ ಜಯರಾಜ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ನಟನೆಯ ಜೊತೆ ಜೊತೆಗೆ ಇಂಟರ್ ನ್ಯಾಷನಲ್ ಹೆಲ್ತ್ & ಲೈಫ್ ಕೋಚ್ ಆಗಿಯೂ ಕಾವ್ಯ ಹೆಸರು ಮಾಡಿದ್ದಾರೆ. ಆಹಾರ ಮತ್ತು ಫಿಟ್ ನೆಸ್ ಬಗ್ಗೆ ತರಬೇತಿ ನೀಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈಕೆ ಪೋಸ್ಟ್ ಮಾಡುವ ʻಕಾವ್ಯ ಕೋಟ್ಸ್ʼ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಿದೆ. ಇವರು ಟ್ಯಾಗ್ ಮಾಡುವ ʻಮೈ ಮನೆ ಊಟʼದ ಫೋಟೋಗಳನ್ನು ನೋಡೋದೇ ಚೆಂದ.
ಈಗ ಒಂದೇ ಸಲಕ್ಕೆ ವರುಣ್ ಮತ್ತು ಕಾವ್ಯ ಇಬ್ಬರ ಬಗ್ಗೆ ಹೇಳಲಿಕ್ಕೂ ಕಾರಣವಿದೆ. ವಾಹಿನಿಗಳಲ್ಲಿ ಕೆಲಸ ಮಾಡುವುದರೊಂದಿಗೆ ಜೊತೆಯಾಗಿ, ಬಹುಕಾಲದ ಪ್ರೀತಿಯನ್ನು ಪೋಷಿಸಿಕೊಂಡು ಬಂದಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ಇದೇ ತಿಂಗಳ ಹದಿನೆಂಟರಂದು ಬೆಂಗಳೂರಿನಲ್ಲಿ ಅದ್ದೂರಿ ಮದುವೆ ಏರ್ಪಾಟಾಗಿದೆ. ಸಾಂಸ್ಕೃತಿಕ ವಲಯದಲ್ಲಿ ವರುಣ್ ಮತ್ತು ಕಾವ್ಯ ಇಬ್ಬರೂ ಅಪಾರ ಸ್ನೇಹ ಸಂಪಾದಿಸಿದ್ದಾರೆ. ಖಂಡಿತವಾಗಿ ಆ ಎಲ್ಲ ಸ್ನೇಹ ಬಳಗ ಇವರಿಬ್ಬರ ಮದುವೆಗೆ ಸಾಕ್ಷಿಯಾಗಲಿದೆ. ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗುತ್ತಲೇ ಈ ಪ್ರತಿಭಾವಂತ ಜೋಡಿ ಇನ್ನೂ ದೊಡ್ಡ ಎತ್ತರಕ್ಕೇರಲಿ… ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ….
Comments