ನಿರ್ಮಾಪಕ ಬೆಂಕೋಶ್ರೀ ಪುತ್ರ ಅಕ್ಷರ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರೋ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ತಿಂಗಳ ಹಿಂದೆ ನಿರ್ಮಾಪಕ ಮತ್ತು ವಿತರಕ ಬಿ.ಕೆ.ಶ್ರೀನಿವಾಸ್ ತಮ್ಮ ಬೆಂಕೋಶ್ರೀ ಫಿಲಂ ಫ್ಯಾಕ್ಟರಿ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿಯೇ ಇಂಥಾದ್ದೊಂದು ಸುಳಿವು ಸಿಕ್ಕಿತ್ತು. ಇದೀಗ ಅಕ್ಷರ್ ತನ್ನ ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿಸಿಕೊಂಡಿದ್ದಾರೆ. ಈತ ಮಾಡಿಕೊಂಡಿಕೊಂಡಿರೋ ತಯಾರಿ, ಕ್ರಿಯೇಟಿವಿಟಿ ನಿಜಕ್ಕೂ ಮೆಚ್ಚಿಕೊಳ್ಳುವಂತಿದೆ. ಈ ತಯಾರಿಗೆ ಸಾಕ್ಷಿಯೆಂಬಂತೆ ಅಕ್ಷರ್ ರೂಪಿಸಿರೋ ಡಿಜಿಟಲ್ ಕ್ಯಾಲೆಂಡರ್ನ ವೀಡಿಯೋ ವರ್ಷನ್ ಇಂದು ಸಂಜೆ ಬಿಡುಗಡೆಯಾಗಲಿದೆ. ಇದನ್ನು ಅಕ್ಷರ್ ತಮಿಳಿನಲ್ಲಿಯೂ ಸಿದ್ಧಗೊಳಿಸಿದ್ದಾರೆ. ತಮಿಳಿನಲ್ಲಿ ಇದನ್ನು ಬಿಹೈಂಡ್ ವುಡ್ಸ್ ಬಿಡುಗಡೆ ಮಾಡಲಿದೆ.
ಅಕ್ಷರ್ ಈ ಕ್ಯಾಲೆಂಡರ್ ಮೂಲಕ ಯುವ ಪೀಳಿಗೆಯನ್ನು ಪ್ರತಿನಿಧಿಸುವಂಥಾ ಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಇಂಥಾ ಕ್ಯಾಲೆಂಡರ್ ಮಾಡೋದೆಂದರೆ, ನೀಟಾಗಿ ಫೋಟೋ ಶೂಟ್ ಮಾಡಿಸಿ ಅದನ್ನು ಹನ್ನೆರಡು ತಿಂಗಳ ಎದೆಗೆ ತಗುಲಿ ಹಾಕೋದು ಮಾಮೂಲು. ಆದರೆ ಅಕ್ಷರ್ ರೂಪಿಸಿರೋ ಈ ಕ್ಯಾಲೆಂಡರ್ ಭಿನ್ನವಾಗಿದೆ. ಹನ್ನೆರಡು ತಿಂಗಳ ಪುಟಗಳಲ್ಲಿ ಒಂದೆರಡು ಅರ್ಥವತ್ತಾದ ಸಾಲುಗಳಲ್ಲಿಯೇ ಒಟ್ಟಾರೆ ಕಥೆಯ ಥೀಮ್ ಅನ್ನು ಜಾಹೀರು ಮಾಡಿದ್ದಾರೆ. ಅಂಥಾ ಸಾಲುಗಳ ಭಾವಕ್ಕೆ ಪೂರಕವಾದ ತನ್ನದೇ ವಿಶಿಷ್ಟ ಫೋಟೋಗಳ ಮೂಲಕ ಹನ್ನೆರಡು ತಿಂಗಳುಗಳನ್ನೂ ಒಂದು ಕಥೆಯ ಬಗ್ಗೆ ಕ್ಯೂರಿಯಾಸಿಟಿ ಬಿಲ್ಡ್ ಮಾಡೋ ರೀತಿಯಲ್ಲಿ ಈ ಕ್ಯಾಲೆಂಡರ್ ಅನ್ನು ರೂಪಿಸಿದ್ದಾರೆ.
ಹನ್ನೆರಡು ತಿಂಗಳ ಈ ಕ್ಯಾಲೆಂಡರ್ಗಾಗಿ ಅಕ್ಷರ್ ಮತ್ತವರ ತಂಡ ಶ್ರಮಿಸಿರೋದು ಬರೋಬ್ಬರಿ ಐದು ತಿಂಗಳುಗಳು. ಗಡ್ಡ ಬಿಡಲು, ಸಣ್ಣ ಆಗಲು, ಮತ್ತೆ ದಪ್ಪ ಆಗಲು, ಲುಕ್ಗಳನ್ನು ಬದಲಿಸಲು ಇಷ್ಟು ದಿನ ತೆಗೆದುಕೊಳ್ಳಬೇಕಾಯಿತಂತೆ. ಒಂದು ಕ್ಯಾಲೆಂಡರಿಗೇ ಇಷ್ಟು ಪ್ಲಾನ್ ಮಾಡಿ, ಶ್ರಮ ವಹಿಸಿರುವ ಅಕ್ಷರ್ ಮುಂದೆ ಬರಲಿರುವ ಸಿನಿಮಾಗಾಗಿ ಏನೆಲ್ಲಾ ಕನಸಿಟ್ಟುಕೊಂಡಿದ್ದಾರೋ ಈಗಲೇ ಹೇಳೋದು ಕಷ್ಟ.
ಸಾಮಾನ್ಯವಾಗಿ ಸ್ಟಾರ್ಗಳ ಪುತ್ರರು, ಸಂಬಂಧಿಕರು ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಾ ಲಾಂಚ್ ಆದರೂ ಯಾವ ತಯಾರಿಯನ್ನೂ ಮಾಡಿಕೊಂಡಿರೋದಿಲ್ಲ. ನೇರವಾಗಿ ಸೆಟ್ಟಿಗೆ ಬಂದಿಳಿದು ಕೈ ಕಾಲು ಆಡಿಸಿ ಹೋಗೋದನ್ನೇ ನಟನೆ ಅಂತಲೂ ಅಂದುಕೊಂಡುಬಿಟ್ಟಿರುತ್ತಾರೆ. ಇಂಥಾ ಆಸಾಮಿಗಳ ನಡುವೆ ಬೆಂಕೋಶ್ರೀ ಪುತ್ರ ಅಕ್ಷರ್ ನಿಜಕ್ಕೂ ಭಿನ್ನವಾಗಿ ಕಾಣಿಸುತ್ತಾರೆ. ಈ ಹುಡುಗ ಸಿನಿಮಾ ಕನಸನ್ನು ಧ್ಯಾನವಾಗಿಸಿಕೊಂಡು ಅದಕ್ಕೆ ತಯಾರಾಗಲು ಶುರು ಮಾಡಿ ವರ್ಷಗಳೇ ಕಳೆದಿವೆ. ತಾನೇ ನಾಯಕನಾಗಿ ಲಾಂಚ್ ಆಗುವ ಸಂದರ್ಭ ಬಂದಾಗ ಅದಕ್ಕೂ ಅಷ್ಟೇ ಶ್ರದ್ಧೆಯಿಂದ ಅಣಿಗೊಂಡಿದ್ದಾನೆ. ಅದರ ಸೊಗಸೇನೆಂಬುದು ಈ ಕ್ಯಾಲೆಂಡರ್ ಮೂಲಕವೇ ಜಾಹೀರಾಗಿದೆ.
ಅಕ್ಷರ್ ಚಿಕ್ಕಂದಿನಿಂದಲೂ ತಂದೆಯ ಸಿನಿಮಾ ವಾತಾವರಣದಲ್ಲಿಯೇ ಬೆಳೆದವರು. ತಾವೇ ಕಿರುಚಿತ್ರಗಳನ್ನೂ ಮಾಡಿ ಅಚ್ಚರಿ ಹುಟ್ಟಿಸಿದ್ದವರು. ಮಗನ ಆಸಕ್ತಿ ಗಮನಿಸಿದ ಬೆಂಕೋಶ್ರೀ ಆತ ನಟನಾಗಿ ನೆಲೆಗೊಳ್ಳಲು ಬೇಕಾದ ಎಲ್ಲ ಸಾಥ್ ಅನ್ನೂ ನೀಡಿದ್ದರು. ಅದರ ಫಲವಾಗಿ ಅಕ್ಷರ್ ರಂಗಭೂಮಿಯಲ್ಲಿಯೂ ನಟನಾಗಿ ಪಳಗಿಕೊಂಡಿದ್ದಾರೆ. ಡಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡಿದ್ದಾರೆ. ಹೀಗೆ ತಮ್ಮ ಮಗ ನಟನಾಗಲು ಎಲ್ಲ ಅರ್ಹತೆಗಳನ್ನು ಪಡೆದ ಮೇಲೆಯೇ ಬೆಂಕೋಶ್ರೀ ಆತನನ್ನು ಹೀರೋ ಆಗಿ ಲಾಂಚ್ ಮಾಡಲು ನಿರ್ಧರಿಸಿದ್ದಾರೆ.
ಅಕ್ಷರ್ ಮೊದಲ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆಂಬುದೂ ಸೇರಿದಂತೆ ಎಲ್ಲ ವಿವರಗಳನ್ನು ಬೆಂಕೋಶ್ರೀ ಇಷ್ಟರಲ್ಲಿಯೇ ಕೊಡಲಿದ್ದಾರಂತೆ. ಮಗನನ್ನು ಏಕಾಏಕಿ ಹೀರೋ ಆಗಿ ಲಾಂಚ್ ಮಾಡದೆ, ವರ್ಷಾಂತರಗಳ ಕಾಲ ಆತ ಪಳಗುವಂತೆ ಮಾಡಿ ಆತ ಹೀರೋ ಆಗೋ ಅರ್ಹತೆ ಪಡೆದಿದ್ದಾನೆ ಅನ್ನಿಸಿದ ಮೇಲಷ್ಟೇ ಬೆಂಕೋಶ್ರೀ ಆ ಬಗ್ಗೆ ಮುಂದಡಿ ಇಟ್ಟಿದ್ದಾರೆ. ಅದಕ್ಕೆ ಸರಿಯಾಗಿಯೇ ಅಕ್ಷರ್ ಕೂಡಾ ರೆಡಿಯಾಗಿದ್ದಾರೆ. ಎಲ್ಲದರಲ್ಲಿಯೂ ಪಳಗಿಕೊಂಡು ಸ್ಪಷ್ಟವಾದ ಕನ್ನಡವನ್ನೂ ರೂಢಿಸಿಕೊಂಡು ಅಕಾಡಕ್ಕಿಳಿದಿರೋ ಅಕ್ಷರ್ ಹೊಸಾ ಸಂಚಲನವೊಂದಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ. ಅದಕ್ಕೆ ಅವರೇ ರೂಪಿಸಿರೋ ಈ ಕ್ಯಾಲೆಂಡರ್ ಸಾಕ್ಷಿಯಾಗುತ್ತದೆ!
#
No Comment! Be the first one.