ಕಣ್ಣಿಗೆ ಕಾಣದ ಕರೋನಾ ವೈರಸ್ಸು ಭೂಮಂಡಲವನ್ನೇ ನಡುಗಿಸಿದೆ. ಮನೆಯೊಳಗಿರುವವರೂ ಮಾಸ್ಕಿನಿಂದ ಮುಖ ಮುಚ್ಚಿಕೊಳ್ಳುವಂತಾ ಪರಿಸ್ಥಿತಿ ಎದುರಾಗಿದೆ. ಸಾಕಷ್ಟು ಸಲ ಕಣ್ಣಮುಂದೆಯೇ ಬಿದ್ದು ಕೊಳೆಯುವ ಕಸದಿಂದ ಜನ ರಸ್ತೆಯಲ್ಲಿ ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ಅದು ಸೃಷ್ಟಿಸುವ ರೋಗಗಳ ಬಗ್ಗೆ ಯಾರೂ ಚಿಂತಿಸೋದೇ ಇಲ್ಲ. ಯುವ ಪ್ರತಿಭೆ ಶರತ್ ಸೃಷ್ಟಿಸಿರುವ ವೇಷ ಕಿರುಚಿತ್ರ ಅಂತಾ ವಿಚಾರಗಳತ್ತ ಬೆಳಕು ಚೆಲ್ಲಿದೆ.
ನಮ್ಮ ಸುತ್ತಲಿನ ಪರಿಸರವನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಳ್ಳಬೇಕು ಅಂತಾ ಬಯಸಿದರೂ ಕೆಲವರ ಸೋಮಾರಿತನ, ದುರ್ಬುದ್ದಿ, ತಿಮಿರುಗಳಿಂದ ಅವರ ತಲೆಯಲ್ಲಿ ತುಂಬಿಕೊಂಡಂತೇ ರಸ್ತೆಗಳಲ್ಲಿ ಪ್ಲಾಸ್ಟಿಕ್ಕು, ಕಸ ಬಿದ್ದು ಇಟ್ಟಾಡುತ್ತಿರುತ್ತದೆ. ಪರಿಸರ ಪ್ರೇಮಿಗಳು, ಪ್ರಜ್ಞಾವಂತ ನಾಗರಿಕರು ಎಷ್ಟೇ ಬಾಯಿ ಬೊಡಕೊಂಡರೂ ಜನರನ್ನು ತಿದ್ದಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಸಲ ರೋಡನ್ನು ಶುದ್ಧವಾಗಿಟ್ಟುಕೊಳ್ಳಲು ಸಂಘಟಿತ ಹೋರಾಟವಾಗಬೇಕು, ಪ್ರತಿಭಟನೆಯ ದನಿ ಏಳಬೇಕು ಅಂತೆಲ್ಲಾ ಅಂದುಕೊಂಡಿರುತ್ತೇವೆ. ಯಾರೋ ಒಂದಿಬ್ಬರ ಪ್ರತಿರೋಧದಿಂದ ಜಗತ್ತು ಬದಲಾಗೋದಿಲ್ಲ. ಹಾಗಂತಾ ಸುಮ್ಮನಿರಲೂ ಸಾಧ್ಯವಿಲ್ಲ. ನಗರ ನೈರ್ಮಲ್ಯ ಕಾಪಾಡಬೇಕಾದರೆ ಕ್ರಾಂತಿಯಾಗಬೇಕು. ಈಗ ರಿಲೀಸಾಗಿರುವ ವೇಷ ಎಂಬ ಕಿರುಚಿತ್ರ ನಿಜಕ್ಕೂ ಕ್ರಾಂತಿಕಾರಕ ಪಾತ್ರಗಳ ಮೂಲಕ ಅಚ್ಛರಿ ಮೂಡಿಸಿದೆ.
ಸಾಯಿಪ್ರಕಾಶ್ ಅವರ ಪುತ್ರ ಮತ್ತು ಸಿನಿಮಾ ಪ್ರಚಾರಕಲೆಯ ಮೂಲಕ ದೊಡ್ಡ ಹೆಸರು ಮಾಡಿರುವ ಸಾಯಿ ನಿರ್ದೇಶನದಲ್ಲಿ ’ಕ’ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಅದರಲ್ಲಿ ಆರು ಜನ ಹೀರೋಗಳು. ಅದರಲ್ಲಿ ಒಬ್ಬರಾಗಿ ನಟಿಸಿದ್ದ ಹುಡುಗ ಶರತ್. ತೀರಾ ಇತ್ತೀಚೆಗೆ ಮಳೆಬಿಲ್ಲು ಎನ್ನುವ ಚಿತ್ರ ಕೂಡಾ ತೆರೆಗೆ ಬಂದಿತ್ತು. ಸಂಜನಾ ಆನಂದ್ ನಟನೆಯ ಮೊದಲ ಚಿತ್ರವದು. ದಾವಣಗೆರೆ ಮೂಲದ ಶರತ್ ‘ಕ’ದಲ್ಲಿ ಪಾತ್ರ ನಿರ್ವಹಿಸಿದಾಗ ಸಿನಿಮಾ ಅಂದರೇನು? ಕ್ಯಾಮೆರಾ ಎಲ್ಲಿಡುತ್ತಾರೆ? ಅದರ ಮುಂದೆ ಹೇಗೆ ನಟಿಸಬೇಕು ಅನ್ನೋ ಯಾವ ವಿವರಗಳೂ ತಿಳಿದಿರಲಿಲ್ಲ. ದಾವಣಗೆರೆಯಲ್ಲಿ ಬಿಬಿಎಂ ಮುಗಿಸಿ ಕೆಲಸಕ್ಕೆ ಅಂತಾ ಬೆಂಗಳೂರಿಗೆ ಬಂದವರು ಒಂದು ತಿಂಗಳ ಮಟ್ಟಿಗೆ ಕಂಪೆನಿಯೊಂದರಲ್ಲಿದ್ದು, ನಂತರ ಅವಕಾಶಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆ ಸಂದರ್ಭದಲ್ಲೇ ಸಾಯಿಯ ಕಣ್ಣಿಗೆ ಬಿದ್ದು ಕ ಚಿತ್ರದಲ್ಲಿ ನಟಿಸುವಂತಾಯಿತು. ಅದಾದ ನಂತರ ಬಂದ ಮಳೆಬಿಲ್ಲು ಬಗ್ಗೆ ಶರತ್ ಸಿಕ್ಕಾಪಟ್ಟೆ ಭರವಸೆ ಇಟ್ಟುಕೊಂಡಿದ್ದರೂ, ಅದು ಥಿಯೇಟರಿನಲ್ಲಿ ನಿಲ್ಲಲಿಲ್ಲ. ಇಷ್ಟೆಲ್ಲಾ ಓದಿದ ಮಗ ಅದಕ್ಕೆ ಸಂಬಂಧಿಸಿದ ಕೆಲಸ ಇಷ್ಟಪಡದೇ ಸಿನಿಮಾ ಸಾವಾಸಕ್ಕೆ ಬಿದ್ದರೂ ಶರತ್ ಮನೆಯಲ್ಲಿ ಯಾವತ್ತಿಗೂ ಬೇಸರಿಸಿಕೊಂಡಿಲ್ಲ. ಈ ಕ್ಷೇತ್ರದಲ್ಲಿ ಶರತ್ ಗೆದ್ದು ತೋರಿಸುತ್ತಾರೆ ಅನ್ನೋ ನಂಬಿಕೆಯಲ್ಲಿದ್ದಾರೆ. ಮನೆಯವರು ಕೊಟ್ಟ ಸ್ವಾತಂತ್ರವೆನ್ನೋದು ವ್ಯರ್ಥವಾಗಬಾರದು ಎನ್ನುವ ಭಯ ಶರತ್ ಮನಸ್ಸಲ್ಲೂ ಇದೆ. ಈ ಕಾರಣಕ್ಕೇ ಇಂತಿಷ್ಟು ಸಮಯವನ್ನು ನಿಗಧಿಮಾಡಿಕೊಂಡು ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಈ ಹೊತ್ತಿನಲ್ಲಿ ಸಿನಿಮಾ ಬಗ್ಗೆ ಏನೆಲ್ಲಾ ಪ್ರಯೋಗ ಮಾಡಬೇಕೋ? ಅವನ್ನೆಲ್ಲಾ ಮಾಡಿದ್ದಾರೆ. ಅದರ ಪ್ರತಿಫಲವೆನ್ನುವಂತೆ ಈಗ ’ವೇಷ’ ಕಿರುಚಿತ್ರ ರೂಪುಗೊಂಡು ಬಿಡುಗಡೆಯಾಗಿದೆ.
ಶರತ್ ಸ್ವತಃ ತಾವೇ ಕಥೆ ತಯಾರು ಮಾಡಿ, ನಿರ್ದೇಶಿಸಿ, ನಟಿಸಿರುವ ವೇಷ ಚಿತ್ರ ಎಂಥವರಿಗೂ ಕಾಡುತ್ತದೆ. ವಿವೇಚನೆಯಿಲ್ಲದೆ ರಸ್ತೆಯಲ್ಲಿ ಕಸ ಸುರಿಯೋ ಮಂದಿ ಈ ಕಿರುಚಿತ್ರವನ್ನು ನೋಡಿದರಂತೂ ಗಲೀಜು ಮಾಡೋ ಕೆಲಸವನ್ನು ಕಡಿಮೆ ಮಾಡುತ್ತಾರೆ.
ಶಾರ್ಟ್ ಮೂವಿಗಳೆಂದರೆ, ಬಹುತೇಕ ಮೊಬೈಲು ಅಥವಾ ಸಣ್ಣಪುಟ್ಟ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಿರುತ್ತಾರೆ. ಆದರೆ ಹತ್ತು ನಿಮಿಷದ ವೇಷ ಕಿರುಚಿತ್ರವನ್ನು ದೊಡ್ಡ ಸಿನಿಮಾ ರೀತಿಯಲ್ಲೇ ಶೂಟ್ ಮಾಡಿರುವುದು ಗಮನಾರ್ಹ. ಸಿನಿಮಾವೊಂದು ಹೇಗೆಲ್ಲಾ ಚಿತ್ರೀಕರಣಗೊಂಡು, ತೆರೆಗೆ ಬರುತ್ತದೋ ಹಾಗೆಯೇ ‘ವೇಷ’ವನ್ನೂ ಕಟ್ಟಿದ್ದಾರೆ. ಛಾಯಾಗ್ರಹಣ, ಧ್ವನಿಗ್ರಹಣ, ಸೇರಿದಂತೆ ಡಿಐ, ಪೋಸ್ಟರ್ ವಿನ್ಯಾಸದ ತನಕ ಪ್ರೊಫೆಷನಲ್ಲಾಗಿ ರೂಪಿಸಲಾಗಿದೆ. ಜಿ ಸ್ಟುಡಿಯೋ ಮೂಲಕ ಎ. ನಾರಾಯಣ್ ರಾವ್ ನಿರ್ಮಿಸಿರುವ ವೇಷ ಕಿರುಚಿತ್ರಕ್ಕೆ ಭುಪಿಂದರ್ ಪಾಲ್ ಸಿಂಗ್ ರೈನಾ ಛಾಯಾಗ್ರಹಣ ಮತ್ತು ಸಂಕಲನ, ರಾಹುಲ್ ರಾಘವನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ದೀಪಕ್ ಶೆಟ್ಟಿ, ಮೇಘನಾ ರಾಜು, ಚಿರಂಜೀವಿ ಸಹಾಯಕ ನಿರ್ದೇಶನ, ಪವನ್ ನಾಯಕ್ ನಿರ್ಮಾಣ ನಿರ್ವಹಣೆಯಿದೆ. ಆರ್. ಕ್ರಿಯೇಟೀವ್ ಚೆಂದದ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ. ಮಂತ್ರಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಪ್ರತಿಭಾವಂತ ನಟಿ ಪಲ್ಲವಿ ರಾಜು ವೇಷದ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ನಿಜಕ್ಕೂ ಪ್ರತಿಭೆ ಹೊಂದಿರುವ ಶರತ್ ನಿರ್ದೇಶನ ಮತ್ತು ನಟನೆ ಎರಡನ್ನೂ ನಿಭಾಯಿಸಬಲ್ಲ ಟ್ಯಾಲೆಂಟು ಹೊಂದಿದ್ದಾರೆ. ತಾನು ಸಿನಿಮಾ ಕ್ಷೇತ್ರದಲ್ಲಿಯೇ ಮುಂದುವರೆಯಬೇಕು ಅಂತಾ ತೀರ್ಮಾನಿಸಿದಾಗಲೇ ಬಾಂಬೆಗೆ ಹೋಗಿ ಸೌರಭ್ ಸಚ್ದೇವ್ ಅವರ ಶಾಲೆಗೆ ಸೇರಿಕೊಂಡು ಹೀರೋ ಆಗಲು ಬೇಕಿರುವ ಎಲ್ಲ ವಿದ್ಯೆಯನ್ನೂ ಕಲಿತುಬಂದಿದ್ದಾರೆ. ಈಗ ‘ವೇಷ’ದ ಮೂಲಕ ಶರತ್ ದೊಡ್ಡ ಸಿನಿಮಾಗಳಲ್ಲಿ ಸಾಕಷ್ಟು ಅವಕಾಶ ಪಡೆಯುವಂತಾಗಲಿ.
No Comment! Be the first one.