ಬಾಲಿವುಡ್ ಆಕ್ಷನ್ ಹೀರೋ, ಮಾರ್ಷಿಯಲ್ ಆಟ್ರ್ಸ್ ಪರಿಣತ ವಿದ್ಯುತ್ ಜಾಮ್ವಾಲ್ ಅಭಿನಯದ ನೂತನ ಹಿಂದಿ ಸಿನಿಮಾ ‘ಜಂಗ್ಲೀ’ ಟ್ರೈಲರ್ ಬಿಡುಗಡೆಯಾಗಿದೆ. ‘ಕಮ್ಯಾಂಡೋ’ ಹಿಂದಿ ಚಿತ್ರದಲ್ಲಿ ಭರ್ಜರಿ ಹೆಸರು ಮಾಡಿದ್ದ ವಿದ್ಯುತ್ ತಮಿಳು, ತೆಲುಗು ಚಿತ್ರಗಳಲ್ಲಿ ಖಳನಾಗಿ ಗುಡುಗಿದ್ದರು. ಎಯ್ಟ್ ಪ್ಯಾಕ್ ಆಬ್ಸ್ನ ಈ ನಟನ ಇಮೇಜಿಗೆ ಹೊಂದುವಂತಹ ‘ಜಂಗ್ಲೀ’ ಹಿಂದಿ ಚಿತ್ರವೀಗ ತೆರೆಗೆ ಸಿದ್ಧವಾಗಿದೆ. ಅಮೆರಿಕ ಮೂಲದ ಚಿತ್ರನಿರ್ದೇಶಕ ಚಕ್ ರಸ್ಸೆಲ್ ‘ಜಂಗ್ಲೀ’ ಸಾರಥ್ಯ ವಹಿಸಿದ್ದಾರೆ ಎನ್ನುವುದು ವಿಶೇಷ. ‘ದಿ ಮಾಸ್ಕ್’, ‘ಎರೇಸರ್’, ‘ದಿ ಸ್ಕಾರ್ಪಿಯನ್ ಕಿಂಗ್’ ಇಂಗ್ಲಿಷ್ ಚಿತ್ರಗಳನ್ನು ನಿರ್ದೇಶಿಸಿರುವ ರಸ್ಸೆಲ್ ‘ಜಂಗ್ಲೀ’ ಮೂಲಕ ಬಾಲಿವುಡ್ ಪ್ರವೇಶಿದ್ದಾರೆ.
ಆನೆಗಳ ರಕ್ಷಿತಾರಣ್ಯದಲ್ಲಿ ಬೆಳೆದ ರಾಜ್ಗೆ (ವಿದ್ಯುತ್) ‘ಭೋಲಾ’ ಆನೆ ಆಪ್ತ ಗೆಳೆಯ. ಇಬ್ಬರೂ ಒಟ್ಟಿಗೇ ಬೆಳೆದವರು. ಈ ಮಧ್ಯೆ ಆನೆಗಳ ಮೇಲೆ ಖಳರ (ಅತುಲ್ ಕುಲಕರ್ಣಿ ಗ್ಯಾಂಗ್) ಕಣ್ಣು ಬೀಳುತ್ತದೆ. ಪಶುವೈದ್ಯನಾದ ರಾಜ್ ಆನೆಗಳ ರಕ್ಷಣೆಗೆ ನಿಲ್ಲುತ್ತಾನೆ. ದುಷ್ಟರನ್ನು ಸದೆಬಡೆಯುವ ಹಾದಿಯಲ್ಲಿ ಭರಪೂರ ಆಕ್ಷನ್, ಸ್ಟಂಟ್ ದೃಶ್ಯಗಳನ್ನು ಸಂಯೋಜಿಸಲಾಗಿದೆ. ಆಶಾ ಭಟ್ ಮತ್ತು ಪೂಜಾ ಸಾವಂತ್ ಚಿತ್ರದ ಇಬ್ಬರು ನಾಯಕಿಯರು. ಪೊಲೀಸ್ ಅಧಿಕಾರಿ ಹಾಗೂ ನಾಯಕನ ಸ್ನೇಹಿತನ ಪಾತ್ರದಲ್ಲಿ ಅಕ್ಷಯ್ ಒಬೆರಾಯ್ ನಟಿಸಿದ್ದಾರೆ. ಥೈಲ್ಯಾಂಡ್ನಲ್ಲಿ ಚಿತ್ರಿಸಿರುವ ಚಿತ್ರ ಏಪ್ರಿಲ್ 5ರಂದು ತೆರೆಕಾಣಲಿದೆ.
No Comment! Be the first one.