18 ಕೋಟಿಯ ಭೀಮ ಎಷ್ಟು ಬಾಚಬಹುದು?
ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಪಾಲಿಗೆ ಲಕ್ಕಿ ಚಾರ್ಮ್ ಇದ್ದಂತೆ ಅಂತಾ CINIBUZZ ಭೀಮ ಬಿಡುಗಡೆಗೂ ಮುಂಚೆಯೇ ಹೇಳಿತ್ತು. ಈಗ ಅದು ಅಕ್ಷರಶಃ ನಿಜವಾಗಿದೆ. 2024ರ ಆರಂಭದಿಂದ ಇಲ್ಲಿಯವರೆಗೂ ಸೋಲಿನಿಂದ ಸೊರಗಿ ಮಲಗಿದ್ದ ಕನ್ನಡ ಚಿತ್ರರಂಗವನ್ನು ಸ್ಯಾಂಡಲ್ ವುಡ್ ಸಲಗ ವಿಜಯ್ ಅನಾಮತ್ತಾಗಿ ಮೇಲಕ್ಕೆತ್ತಿ ನಿಲ್ಲಿಸಿದ್ದಾರೆ. ಭೀಮ, ಕೃಷ್ಣಂಪ್ರಣಯ ಸಖಿ, ಗೌರಿ, ಮ್ಯಾಕ್ಸ್ ಮತ್ತು ಮಾರ್ಟಿನ್ ಥರದ ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಮರುಜೀವ ಬರಬೇಕು ಅಂತಾ ಉದ್ಯಮ ಮಾತಾಡುತ್ತಿತ್ತು. ಮೊದಲ ಹೆಜ್ಜೆಯಾಗಿ ಭೀಮ ಭರ್ಜರಿಯಾಗಿ ಗಳಿಕೆ ಮಾಡಿ ಗೆಲುವಿನ ಖಾತೆ ತೆರೆದಿದ್ದಾನೆ.
ಖರ್ಚು ವೆಚ್ಛ ಇತ್ಯಾದಿಗಳನ್ನೆಲ್ಲಾ ಸೇರಿಸಿ ಹದಿನೆಂಟು ಕೋಟಿ ಬಜೆಟ್ಟಿನಲ್ಲಿ ಹೊರಬಂದಿರುವ ಚಿತ್ರ ಭೀಮ. ರಿಲೀಸಾದ ಮೊದಲ ದಿನವೇ ಎಂಟು ಕೋಟಿ ಕಲೆಕ್ಷನ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಪ್ರಕಾರವಾಗಿ ಎಲ್ಲಾ ಖರ್ಚು ಕಳೆದರೆ ಬರೋಬ್ಬರಿ ನಾಲ್ಕೂವರೆ ಕೋಟಿ ಶೇರ್ ಬರುತ್ತದೆ. ಎರಡನೇ ದಿನ ಐದು ಕೋಟಿ ಮತ್ತು ಭಾನುವಾರದ ಕಲೆಕ್ಷನ್ ಸೇರಿದರೆ ಹದಿನೈದು ಕೋಟಿ ತಲುಪುವ ಸಾಧ್ಯತೆ ಇದೆ. ಇನ್ನು ಅಂದುಕೊಂಡಂತೇ ಗಳಿಕೆ ಗುರಿ ಮುಟ್ಟಿದರೆ ಹಾಕಿದ ಬಂಡವಾಳ ಒಂದು ವಾರದಲ್ಲೇ ವಾಪಾಸು ಬರುತ್ತದೆ. ಇದಲ್ಲದೇ ಬಿಡುಗಡೆ ಪೂರ್ವದಲ್ಲೇ ಸಿನಿಮಾಗೆ ಏರಿಯಾಗೆ ಇಷ್ಟು ಅಂತಾ ಕೊಟ್ಟು ಖರೀದಿಸಿದ್ದಾರೆ. ಇದರ ಮೊತ್ತ ಕೂಡಾ ಹತ್ತು ಕೋಟಿಯಷ್ಟಾಗಿದೆ. ಈಗಿರುವ ಅಂದಾಜಿನ ಪ್ರಕಾರ ಒಂದು ವಾರಕ್ಕೆಲ್ಲಾ ನಿರ್ಮಾಪಕರಿಗೆ ಹಾಕಿದ ಬಂಡವಾಳಕ್ಕಿಂತಾ ಅಧಿಕ ಮೊತ್ತದ ನಿವ್ವಳ ಲಾಭ ಕೈ ಸೇರುತ್ತದೆ. ಹಾಗೆ ನೋಡಿದರೆ, ಆಡಿಯೋ ಒಂದನ್ನು ಬಿಟ್ಟು ಓಟಿಟಿ, ಸ್ಯಾಟಲೈಟ್ ಡಬ್ಬಿಂಗ್ ಸೇರಿದಂತೆ ಯಾವುದನ್ನೂ ಈ ಕ್ಷಣಕ್ಕೂ ವ್ಯಾಪಾರ ಮಾಡಿಲ್ಲ. ಸಿನಿಮಾದ ಕಲೆಕ್ಷನ್ ಆಧಾರದಲ್ಲಿ ಅದು ಕೂಡಾ ಒಳ್ಳೇ ವ್ಯಾಪಾರವನ್ನೇ ನಡೆಸುತ್ತದೆ. ಭೀಮನ ರಿಪೋರ್ಟು ನೋಡಿದ ವಾಹಿನಿಗಳು ಅದಾಗಲೇ ಪರ್ಚೇಸು ಮಾಡಲು ನಾನು-ನೀನು ಅಂತಾ ಮುಂದೆ ಬಂದಿವೆ. ʻಸಲಗʼಗಿಂತಾ ಭೀಮ ಒಂದು ಹಿಡಿ ಹೆಚ್ಚೇ ಲಾಭ ಕಾಣುವ ವಾತಾವರಣವನ್ನು ʻಭೀಮʼ ನಿರ್ಮಿಸಿದ್ದಾನೆ.
2024ರಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡರೆ ಭೀಮ ಗೆಲುವಿನ ಮೂಲಕ ದುನಿಯಾ ವಿಜಯ್ ಸ್ಯಾಂಡಲ್’ವುಡ್ಡಿನ ನಂ.1 ಸ್ಥಾನವನ್ನು ಹಿಡಿದಿದ್ದಾರೆ.
ಈ ಹಿಂದೆ ಮುಂಗಾರುಮಳೆ ಮತ್ತು ದುನಿಯಾ ಎರಡೂ ಸಿನಿಮಾ ಒಂದರ ಹಿಂದೊಂದು ರಿಲೀಸಾಗಿ ಐತಿಹಾಸಿಕ ಗೆಲುವು ಕಂಡಿದ್ದವು. ಗಳಿಕೆಯಲ್ಲಿ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಲೂಟಿ ಮಾಡಿ ಸರಿಸಮನಾದ ಲಾಭ ಕಂಡಿದ್ದವು. ಈಗ ಭೀಮ ತೆರೆಗೆ ಬಂದು ಒಂದು ಒಂದು ವಾರದ ಗ್ಯಾಪಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೃಷ್ಣಂ ಪ್ರಣಯ ಸಖಿ ತೆರೆಗಪ್ಪಳಿಸುತ್ತಿದೆ. ಸ್ಟುಡಿಯೋ ರಿಪೋರ್ಟುಗಳ ಪ್ರಕಾರ ಪ್ರಣಯ ಸಖಿ ಕೂಡಾ ನೆಕ್ಸ್ಟ್ ಲೆವೆಲ್ಲಿನಲ್ಲಿ ಮೂಡಿಬಂದಿದೆಯಂತೆ. ಈ ಹಿನ್ನೆಲೆಯಲ್ಲಿ ಗಣೇಶ್ ಮತ್ತೊಮ್ಮೆ ಬಾಕ್ಸಾಫೀಸ್ ದೋಚುವುದು ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದು ನಿಜವಾಗಿದ್ದೇ ಆದಲ್ಲಿ, ವಿಜಯ್ ಮತ್ತು ಗಣೇಶ್ ಅವರ ನಡುವೆ ಸ್ನೇಹಯುತ ಸ್ಪರ್ಧೆ ಏರ್ಪಡಲಿದೆ. ಈಗಾಗಲೇ ಕಲೆಕ್ಷನ್ನಲ್ಲಿ ದಾಖಲೆ ಬರೆಯುವತ್ತ ನುಗ್ಗುತ್ತಿರುವ ಭೀಮನ ಮುಂದೆ ಪ್ರಣಯ ಸಖಿ ಪೈಪೋಟಿ ಶುರುವಾಗಲಿದೆ. ಕನ್ನಡ ಚಿತ್ರರಂಗದ ಹಿತದೃಷ್ಟಿಯಲ್ಲಿ ಇಂಥದ್ದೊಂದು ಬ್ಯೂಟಿಫುಲ್ ಚಾಲೆಂಜು ಏರ್ಪಡುವುದಕ್ಕಿಂತಾ ಖುಷಿಯ ವಿಚಾರ ಬೇರೊಂದಿಲ್ಲ!
No Comment! Be the first one.