ಕಾಲಿವುಡ್ನ ಜನಪ್ರಿಯ ನಟ ವಿಜಯ್ ಸೇತುಪತಿ ಸಿನಿಮಾ ಹೊರತಾಗಿ ಸಮಾಜದ ಆಗುಹೋಗುಗಳ ಕುರಿತೂ ಮಾತನಾಡುತ್ತಿರುತ್ತಾರೆ. ಇದು ತಮ್ಮ ಜವಾಬ್ದಾರಿ ಎಂದು ಅವರೊಮ್ಮೆ ಹೇಳಿಕೊಂಡಿದ್ದರು. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ.. ಸೇರಿದಂತೆ ಕೆಲವು ಹೇಳಿಕೆಗಳೂ ಅವರ ಕಡೆಯಿಂದ ಬಂದಿದ್ದವು. ಇದೆಲ್ಲವನ್ನೂ ನೋಡಿದವರು ವಿಜಯ್ ರಾಜಕೀಯದೆಡೆ ಹೊರಳುವ ಮಾತನಾಡಿದ್ದರು. ಇದಕ್ಕೆ ಇಂಬು ನೀಡುವಂತೆ ಅವರ ನೂತನ ಸಿನಿಮಾ ರಾಜಕೀಯ ಕಥಾವಸ್ತು ಹೊಂದಿದೆ.
ಸೇತುಪತಿ ಹೊಸ ತಮಿಳು ಸಿನಿಮಾ ’ತುಘಲಕ್’ ರಾಜಕೀಯ ಸಿನಿಮಾ ಎನ್ನಲಾಗಿದೆ. ಚಿತ್ರದಲ್ಲಿ ಅವರು ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನೆಯ ಅಂಶಗಳ ಜೊತೆಗೆ ರಾಜಕಾರಣದ ಮೇಲೆ ಬೆಳಕು ಚೆಲ್ಲಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಡೆಲ್ಲಿ ಪ್ರಸಾದ್. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ವಿಜಯ್ ಸೇತುಪತಿ ಮತ್ತು ತ್ರಿಷಾ ಅಭಿನಯದ ಸೂಪರ್ಹಿಟ್ ’96’ ಸಿನಿಮಾದ ಶತದಿನೋತ್ಸವ ಸಂದರ್ಭದಲ್ಲಿ ’ತುಘಲಕ್’ ಘೋಷಣೆಯಾಗಿದೆ. ’96’ ಸಿನಿಮಾಗೆ ಸಂಗೀತ ಸಂಯೋಜಿಸಿದ್ದ ಗೋವಿಂದ್ ವಸಂತ್ ಹೊಸ ಚಿತ್ರದ ಸಂಗೀತದ ಹೊಣೆ ಹೊತ್ತಿದ್ದಾರೆ.
’96’ ಸಿನಿಮಾದ ಶತದಿನೋತ್ಸವ ಸಮಾರಂಭದಲ್ಲಿ ಮತ್ತೊಂದು ಘಟನೆಯೂ ನಡೆಯಿತು. ಪ್ರೇಮ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ವಿಜಯ್ ಮತ್ತು ನಾಯಕಿ ತ್ರಿಷಾ ಒಮ್ಮೆಯೂ ಅಪ್ಪಿಕೊಳ್ಳೋಲ್ಲ. ಶತದಿನೋತ್ಸವ ಸಮಾರಂಭದಲ್ಲಿ ಇಬ್ಬರೂ ವೇದಿಕೆ ಮೇಲೆ ಪರಸ್ಪರ ಅಪ್ಪಿಕೊಳ್ಳಲಿ ಎಂದು ನಿರೂಪಕ ಪಾರ್ಥಿವನ್ ಹೇಳಿದರು. ಎಲ್ಲರ ಒತ್ತಾಯದ ಮೇರೆಗೆ ವೇದಿಕೆಗೆ ಬಂದ ವಿಜಯ್ ಮತ್ತು ತ್ರಿಷಾ ಅಪ್ಪಿಕೊಂಡು ಸಿನಿಮಾದಲ್ಲಿಲ್ಲದ ಹೊಸ ಕ್ಲೈಮ್ಯಾಕ್ಸ್ಗೆ ಸಾಕ್ಷಿಯಾದರು!
#
No Comment! Be the first one.