2019ರ ಸಕ್ಸಲ್ ಪುಲ್ ಅಂಡ್ ಸ್ಯಾಟಿಸ್ಫೈಡ್ ನಟರ ಪೈಕಿ ವಿಜಯ್ ಸೇತುಪತಿ ಪ್ರಮುಖರಾದವರು. ಕಳೆದ ಜನವರಿಯಲ್ಲಿ ರಿಲೀಸ್ ಆದ ಬ್ಲಾಕ್ ಬಸ್ಟರ್ ಸಿನಿಮಾ ಪೆಟ್ಟಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ವಿಜಯ್ ಸೇತುಪತಿ ನಟಿಸಿದ್ದರು. ತದನಂತರ ಸೂಪರ್ ಡಿಲಕ್ಸ್ ಎನ್ನುವ ವೈವಿಧ್ಯಮಯ ಸಿನಿಮಾವನ್ನು ಒಪ್ಪಿ ಭೇಷ್ ಎನ್ನುವಷ್ಟರ ಮಟ್ಟಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ನಪುಂಸಕನಾಗಿ ನಟಿಸಿರುವುದು ವಿಶೇಷವಾಗಿದೆ. ಸೂಪರ್ ಡಿಲಕ್ಸ್ ಸಿನಿಮಾವನ್ನು ತ್ಯಾಗರಾಜನ್ ಕುಮಾರರಾಜ ಎಂಬುವವರು ನಿರ್ದೇಶನ ಮಾಡಿದ್ದರು. ಸದ್ಯ ಹೊಸ ವಿಚಾರವೊಂದು ಹೊರ ಬಿದ್ದಿದ್ದು, ವಿಜಯ್ ಸೇತುಪತಿ ತಮ್ಮ ಮುಂದಿನ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲಿದ್ದಾರೆ. ಹೌದು ಪಂಜಾ ವೈಷ್ಣವ್ ಅವರನ್ನು ಪರಿಚಯಿಸುತ್ತಿರುವ ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಆಗಲಿದ್ದಾರೆ. ಪಂಜಾ ವೈಷ್ಣವ್ ಮೂಲತಃ ಮೆಗಾಸ್ಟಾರ್ ಚಿರಂಜೀವಿಯವರ ಸೋದರಳಿಯ. ಇತ್ತೀಚಿಗೆ ಈ ಸಿನಿಮಾದ ವೆಲ್ ಕಮ್ ಫೋಸ್ಟರ್ ರಿಲೀಸ್ ಆಗಿದ್ದು ವಿಜಯ್ ಸೇತುಪತಿ ರವರು ಸಾಲ್ಟ್ ಅಂಡ್ ಪೆಪ್ಪರ್ ಗೆಟಪ್ ನಲ್ಲಿ ಝಗಮಗಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾವನ್ನು ಬುಚಿ ಬಾಬು ಸನ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ನಲ್ಲಿ ಜಂಟಿಯಾಗಿ ನಿರ್ಮಾಣ ಮಾಡಲಾಗುತ್ತಿದೆ.
ಸೂಪರ್ ಡಿಲಕ್ಸ್ ನಂತರದಲ್ಲಿ ವಿಜಯ್ ಸೇತುಪತಿ ರಿಲೀಸ್ ಗೆ ರೆಡಿಯಾಗಿರುವ ಸಿಂಧೂಬಾದ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇವರಿಗೆ ಅಂಜಲಿ ನಾಯಕಿಯಾಗಿ ಜತೆಯಾಗಿದ್ದು, ಅರುಣ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.
ಪ್ರಯೋಗಾತ್ಮಕ ಮತ್ತು ಸವಾಲಿನ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ವಿಜಯ್ ಸೇತುಪತಿ ಬರೀ ಸ್ಟಾರ್ ಡಮ್, ಬಿಲ್ಡಪ್ ಗಳಿಗೆ ತಮ್ಮನ್ನು ತಗುಲಿಕೊಂಡಿರುವ ಬಹಳಷ್ಟು ನಟ ನಟಿಯರಿಗೆ ಮಾದರಿಯಾಗಿರುವುದು ಎಲ್ಲರೂ ಖುಷಿ ಪಡುವ ಸಂಗತಿ.