ಗಾಲಿ ಜನಾರ್ಧನರೆಡ್ಡಿ ಮಗ ಕಿರೀಟಿ ನಟಿಸುತ್ತಿರುವ ಜೂನಿಯರ್ ಚಿತ್ರದ ಚಿತ್ರೀಕರಣ ಪ್ಲಾನಿನಂತೇ ಸಾಗುತ್ತಿದೆ. ಈ ಚಿತ್ರಕ್ಕಾಗಿ ಕನ್ನಂಬಾಡಿ ಬಳಿಯ ಚಿಕ್ಕರಾಯಹಳ್ಳಿಯನ್ನು ವಿಜಯನಗರವನ್ನಾಗಿ ಮಾರ್ಪಡಿಸುತ್ತಿದ್ದಾರೆ. ಇಡೀ ಹಳ್ಳಿಯಲ್ಲಿ ಒಮ್ಮೆ ತಿರುಗಿದರೆ, ಯಾವುದು ನಿಜವಾದ ಮನೆ, ಯಾವುದು ಸೆಟ್ ಅಂತಲೇ ಗೊತ್ತಾಗುವುದಿಲ್ಲ. ಆಮಟ್ಟಿಗೆ ಖರ್ಚು ಮಾಡಿ ಹಳೆಯ ಗ್ರಾಮವನ್ನಾಗಿ ಪರಿವರ್ತಿಸಿದ್ದಾರೆ. ಬಾಹುಬಲಿ ಚಿತ್ರಕ್ಕೆ ಕಲಾನಿರ್ದೇಶನ ಮಾಡಿರುವ ಮನು ಜಗಧ್ ಈ ಸಿನಿಮಾಗೂ ಆರ್ಟ್ ಡೈರೆಕ್ಷನ್ ಮಾಡುತ್ತಿದ್ದಾರೆ. ಬರಿಯ ತೊಟ್ಟಿಮನೆ ನಿರ್ಮಾಣಕ್ಕೆ ಏನಿಲ್ಲವೆಂದರೂ ಕೋಟಿ ರುಪಾಯಿ ವ್ಯಯಿಸಿದ್ದಾರೆ.
ಈ ಹಳ್ಳಿಯಲ್ಲಿ ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳಿನ ಸಾಕಷ್ಟು ಸಿನಿಮಾಗಳು ಇದೇ ಜಾಗದಲ್ಲಿ ಚಿತ್ರೀಕರಣಗೊಂಡಿವೆ. ಕಾಟೇರ ಚಿತ್ರಕ್ಕೂ ಇಲ್ಲಿ ಶೂಟಿಂಗ್ ನಡೆಸಲಾಗಿದೆ. ಈಗ ಜೂನಿಯರ್ ತಂಡ ಕನ್ನಂಬಾಡಿಯ ಈ ಅದ್ಭುತ ತಾಣದಲ್ಲಿ ಬೀಡುಬಿಟ್ಟಿದೆ.
ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರವಿದು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್. ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಗೆಯೇ ಚಿತ್ರದ ತಾಂತ್ರಿಕ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.
ಟೀಸರ್ ಝಲಕ್ ನಲ್ಲೇ ಎಲ್ಲರ ಗಮನ ಸೆಳೆದಿರೋ ಕಿರೀಟಿ ಮೊದಲ ಚಿತ್ರದ ಮೂಲಕ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.
No Comment! Be the first one.