ವರ್ಷದ ಹಿಂದೆ ತಮಿಳಿನಲ್ಲಿ ಕನ್ನಡಿಗ ಸಾಧಕ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕನ್ನು ಆಧರಿಸಿ ಸೂರರೈ ಪೊಟ್ರು ಹೆಸರಿನ ಸಿನಿಮಾ ಬಿಡುಗಡೆಯಾಗಿ ಅಪಾರ ಜನಪ್ರಿಯತೆ ಪಡೆದಿತ್ತು. ಈ ನೆಲದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಹೆಸರು ಮಾಡಿದ ಇನ್ನೂ ಸಾಕಷ್ಟು ಜನ ಸಾಧಕರಿದ್ದಾರೆ. ಅವರಲ್ಲಿ ಡಾ. ವಿಜಯ ಸಂಕೇಶ್ವರ ಕೂಡಾ ಒಬ್ಬರು. ಏನೇನೂ ಇಲ್ಲದೆ, ಶೂನ್ಯ ಬಂಡವಾಳದಿಂದ ಉದ್ಯಮ ಆರಂಭಿಸಿ ಇವತ್ತು ಸಂಕೇಶ್ವರರು ಬೆಳೆದು, ಸಂಸ್ಥೆಯನ್ನು ಕಟ್ಟಿನಿಲ್ಲಿಸಿರುವ ಪರಿ ನಿಜಕ್ಕೂ ಅದ್ಭುತ. ಇಷ್ಟೆಲ್ಲಾ ಸಾಧನೆಯ ಹಿಂದೆ ಕಡುಗಷ್ಟದ ಕಥೆಯಿದೆ. ಅಗಣಿತ ಜನಕ್ಕೆ ದಾರಿದೀಪವಾಗಬಲ್ಲ ಬದುಕಿನ ಪಾಠವಿದೆ. ಅದು ಸಿನಿಮಾ ರೂಪದಲ್ಲಿ ಈ ವಾರ ತೆರೆ ಮೇಲೆ ಮೂಡಲಿದೆ…

ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ವಿಜಯ ಸಂಕೇಶ್ವರರ ಪುತ್ರರಾದ ಆನಂದ ಸಂಕೇಶ್ವರ ಅವರು ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ ಪದ್ಮಶ್ರೀ ಡಾ. ವಿಜಯ ಸಂಕೇಶ್ವರರ ಜೀವನಾಧಾರಿತ – ಚಿತ್ರವಾಗಿದೆ. 1976 ನೇ ಇಸವಿಯಲ್ಲಿ ಒಂದು ಟ್ರಕ್ ನಿಂದ ಶುರುವಾಗಿ, ಇವತ್ತಿಗೆ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗು ಮಾಧ್ಯಮ ರಂಗದಲ್ಲಿ ನಡೆದು ಬಂದ ಡಾ.ವಿಜಯ ಸಂಕೇಶ್ವರರ ಅಧ್ಭುತ ಹಾಗು ರೋಚಕ ಕಥೆಯನ್ನು ಆಧರಿಸಿ, ಕನ್ನಡ ಚಿತ್ರ ರಂಗದ ಮೊದಲ ಅಫಿಷಿಯಲ್ ಹಾಗೂ ಕಮರ್ಷಿಯಲ್ ಬೈಯೋಪಿಕ್ ಮೂಡಿ ಬಂದಿದೆ.

ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ ಸಂಕೇಶ್ವರ ಅವರು ನಿರ್ಮಿಸಿರುವ “ವಿಜಯಾನಂದ” ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ ೮ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನೆಮಾ ಹಾಗೂ ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವವನ್ನು ಹೊಂದಿರುವ ರಿಷಿಕಾ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ. ವಿ . ಅಯ್ಯರ್ ಅವರ ಸಂಭಂದಿಕರು ಕೂಡಾ.

ಈ ಹಿಂದೆ “ಟ್ರಂಕ್” ಎಂಬ ಕನ್ನಡದ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ಮಹಿಳಾ ನಿರ್ದೇಶಕಿ ರಿಷಿಕಾ ಶರ್ಮ. ಆ ಚಿತ್ರದ ಮೇಕಿಂಗ್ ಹಾಗು ನಿರ್ದೇಶನಕ್ಕೆ ಅಪಾರ ಮೆಚ್ಚುಗೆ ಪಡೆದಿದ್ದರು. ಇದೇ ಟ್ರಂಕ್ ಸಿನಿಮಾಗೆ ಬಣ್ಣ ಹಚ್ಚಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ನಾಯಕ ನಟರಾದ ನಿಹಾಲ್ ರಂಗಭೂಮಿ ಹಿನ್ನಲೆ ಇಂದ ಬಂದು ಭಾರತಿ ಮತ್ತು ಗಂಗಾ ಸೀರಿಯಲ್ ಗಳಲ್ಲಿ , ಚೌಕ ಮತ್ತು ಟ್ರಂಕ್ ಸಿನೆಮಾದಲ್ಲಿ ನಟಿಸಿದ್ದವರು. ಟ್ರಂಕ್ ಚಿತ್ರದಲ್ಲಿನ ನಟನೆಗೆ ಅಪಾರ ಮೆಚ್ಚುಗೆಯನ್ನು ಪಡೆದಿದ್ದರು. ಇದೀಗ “ವಿಜಯಾನಂದ” ಸಿನಿಮಾಗೆ ಡಾ. ವಿಜಯ ಸಂಕೇಶ್ವರರ ಪಾತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚಿದ್ದಾರೆ.

ಈ ಚಿತ್ರದಲ್ಲಿ ಸಂಕೇಶ್ವರರ ಯಶೋಗಾಥೆ ಮಾತ್ರ ದೃಶ್ಯ ರೂಪದಲ್ಲಿ ಮೂಡಿಬಂದಿಲ್ಲ. ಅವರ ಗೆಲುವಿನ ಹಿಂದೆ ಇರುವ ಕಡುಗಷ್ಟದ ಹಾದಿ ಎಂಥದ್ದು ಅನ್ನೋದು ಕೂಡಾ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ಇದೇ ಡಿಸೆಂಬರ್ 9ಕ್ಕೆ ದೇಶಾದ್ಯಂತ ಚಿತ್ರ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.