ಹೆಸರು, ಕೀರ್ತಿ, ಯಶಸ್ಸು ಈ ಯಾವುದನ್ನೂ ಅವರು ಯೋಗದಿಂದ ಪಡೆದಿದ್ದಲ್ಲ. ಯೋಗ್ಯತೆಯಿಂದ ಪಡೆದಿದ್ದು. ಬೆವರೇ ಅವರ ಬದುಕಿನ ಸಾರಥಿ, ಛಲ ಅನ್ನೋದು ಅವರ ಜೀವನದ ಆಸ್ತಿ. ಯಾವತ್ತೂ ಇನ್ನೊಬ್ಬರ ಕಾರ್ಬನ್ ಕಾಪಿ ಆಗದೇ, ಸಮಸ್ಯೆಗಳನ್ನು ಎದುರಿಸಿ, ಸವಾಲುಗಳನ್ನು ಮಣಿಸಿ ಈ ಹಾದಿಯಲ್ಲಿ ಇಷ್ಟು ದೂರ ಬಂದವರು ಅವರು. ಸೋತವರಿಗೆ ಸ್ಪೂರ್ತಿ ನೀಡುವ, ಗೆಲ್ಲಲು ಹೊರಟವರಿಗೆ ಮಾದರಿಯಾದ ಅಪರೂಪದ ವ್ಯಕ್ತಿ ಡಾ. ವಿಜಯ ಸಂಕೇಶ್ವರ. ಅವರದ್ದೇ ಬದುಕಿನ ಹಾದಿಯನ್ನು ಆಧರಿಸಿ ದೃಶ್ಯರೂಪದಲ್ಲಿ ಬಿಚ್ಚಿಡಲಾಗಿದೆ. ಅದು ʻವಿಜಯಾನಂದʼ ಎನ್ನುವ ಸಿನಿಮಾ ಮೂಲಕ.
ಯಾವುದೇ ಒಬ್ಬ ವ್ಯಕ್ತಿಯ ಬಯೋಗ್ರಫಿಯನ್ನು ತೆರೆಗೆ ತರೋದು ತ್ರಾಸದ ಕೆಲಸ. ಬರಿಯ ಸಾಧನೆಯನ್ನಷ್ಟೇ ಅಲ್ಲದೆ, ಅನುಭವಿಸಿದ ಯಾತನೆಗಳನ್ನು, ಎದುರಾದ ಸವಾಲುಗಳನ್ನು ಮತ್ತು ಅದಕ್ಕೆ ಕಾರಣವಾದ ಪಾತ್ರಗಳನ್ನು ಯಥಾವತ್ತಾಗಿ ತೋರಿಸೋದು ಬಲುಕಷ್ಟ. ಸ್ವಲ್ಪ ಯಾಮಾರಿದರೂ ಇನ್ಯಾರೋ ತಕರಾರು ತೆಗೆಯುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ನೋಡಿದರೆ, ಒಂದಿಷ್ಟು ಪಾತ್ರಗಳ ಹೆಸರುಗಳನ್ನು ಬದಲಿಸಿ, ನಡೆದ ಆ ಎಲ್ಲ ಘಟನೆಗಳನ್ನೂ ಯಾವುದೇ ಸುಳ್ಳು, ಕಲ್ಪನೆಗಳನ್ನು ಬೆರೆಸದಂತೆ ʻವಿಜಯಾನಂದʼದಲ್ಲಿ ತೆರೆಗೆ ತಂದಿದ್ದಾರೆ.
ವಿಜಯ್ ಅವರ ತಂದೆ ಬಿ.ಜಿ. ಸಂಕೇಶ್ವರ ಅವರು ನಿಘಂಟಿನ ಕೈಪಿಡಿಯನ್ನು ಪ್ರಕಟಿಸುತ್ತಿದ್ದವರು. ತೀರಾ ಹಳೇ ಮಾದರಿಯ ಮುದ್ರಣ ಯಂತ್ರದ ಜಾಗಕ್ಕೆ ವಿಕ್ಟೋರಿಯಾ ಎನ್ನುವ ಹೊಸ ಪ್ರಿಂಟಿಂಗ್ ಮಷೀನನ್ನು ಆಮದು ಮಾಡಿ ತಂದು ಕೂರಿಸುವುದರೊಂದಿಗೆ ವಿಜಯ್ ಅವರ ಪ್ರಯತ್ನ ಪ್ರಯೋಗಗಳು ಆರಂಭವಾಗುತ್ತವೆ. ಒಂದು ಉದ್ಯಮ ಕೈಹಿಡಿಯುತ್ತಿದ್ದಂತೇ ಅದೇ ಕೆಲಸದಲ್ಲಿ ಮುಂದುವರೆಯೋದು ಮಾಮೂಲು. ಆದರೆ, ಕೈಲಿರೋದನ್ನು ಬಿಟ್ಟು ಮತ್ತೊಂದರ ಆವಿಷ್ಕಾರಕ್ಕೆ, ಸಾಹಸಗಳಿಗೆ ಕೈ ಇಡೋದು ನಿಜವಾದ ಸಾಧಕನ ಗುಣ. ಅದನ್ನು ವಿಜಯ್ ಸಂಕೇಶ್ವರ್ ಅನುದಿನವೂ ಮೈಗೂಡಿಸಿಕೊಂಡವರು.
ತಂದೆ ಆರಂಭಿಸಿದ್ದ ಪ್ರೆಸ್ಸನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದ ವಿಜಯ್ ತಮಗೆ ಅನುಭವವೇ ಇರದ ಲಾರಿಯನ್ನು ಕೊಂಡು ಸರಕು ಸಾಗಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಸ್ವತಃ ತಾವೇ ಲಾರಿ ಚಾಲಕರಾಗಿ ಕೆಲಸ ಆರಂಭಿಸುತ್ತಾರೆ. ಅಡ್ಡಗಾಲುಗಳ ನಡುವೆಯೂ ಎದ್ದು ನಿಲ್ಲುತ್ತಾರೆ. ಒಂದು ಲಾರಿ ನಾಲ್ಕಾಗುತ್ತದೆ. ಅಷ್ಟರಲ್ಲಿ ಕಿಡಿಗೇಡಿಗಳ ವಕ್ರದೃಷ್ಟಿ ವಿಜಯ್ ಸಂಕೇಶ್ವರರ ಆ ವರೆಗಿನ ಶ್ರಮ-ಸಂಪಾದನೆಯನ್ನೆಲ್ಲಾ ಪದಶಃ ಬೂದಿ ಮಾಡಿ ಬಿಸಾಕುತ್ತದೆ. ವಿಜಯ್ ಅವರ ಅಸಲೀ ಪಯಣ ಶುರುವಾಗೋದೇ ಅಲ್ಲಿಂದ. ಅಪ್ಪನ ಅನುಮಾನವೇ ನಿಜವಾಯ್ತು. ಇನ್ನು ಬದುಕಿನಲ್ಲಿ ಏನೇನೂ ಉಳಿದಿಲ್ಲ. ತಲೆಯೆತ್ತಿ ನಿಲ್ಲೋದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗುತ್ತದೆ. ಆ ನಂತರ ಏನೇನು ನಡೆಯುತ್ತದೆ ಅನ್ನೋದು ʻವಿಜಯಾನಂದʼದಲ್ಲಿ ವಿವರಿಸಿದ್ದಾರೆ.
ಮೊದಲ ಭಾಗದಲ್ಲಿನ ಪ್ರಿಂಟಿಂಗ್ ವ್ಯವಹಾರ, ಲಾರಿ ಸಂಚಾರಗಳೆಲ್ಲಾ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ. ಎರಡನೇ ಭಾಗದಲ್ಲಿ ಪತ್ರಿಕೋದ್ಯಮಿಯಾದಮೇಲೆ ಯಾಕೋ ಕತೆ ಎಳೆದಾಡಿಬಿಡುತ್ತದೆ. ಪತ್ರಿಕೋದ್ಯಮದ ಒಳಸುಳಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಂಕೇಶ್ವರರಿಗೆ ರಾಮ್ ರಾವ್ ಎನ್ನುವ ಪತ್ರಕರ್ತ ಆಗ ಕೊಟ್ಟ ಕಾಟ ಹೇಗೆ ಪತ್ರಿಕೆ ಹುಟ್ಟಿಗೆ ಕಾರಣವಾಯಿತು ಎನ್ನುವುದನ್ನು ತೋರಿಸಿದ್ದಾರೆ. ತಾವೇ ಹುಟ್ಟುಹಾಕಿದ ಪತ್ರಿಕೆಯನ್ನು ಮತ್ತೊಬ್ಬರಿಗೆ ಮಾರಲೇಬೇಕಾದ ಅನಿವಾರ್ಯತೆ ಏನಿತ್ತು ಅನ್ನೋದನ್ನು ಬಹುಶಃ ಮರೆಮಾಚಿದ್ದಾರೆ. ಒಟ್ಟಾರೆ ಪತ್ರಿಕೋದ್ಯಮದ ಪಾರ್ಟು ಸಾಮಾನ್ಯ ಪ್ರೇಕ್ಷಕರಿಗೆ ಅಂತಾ ಮಜಾ ಕೊಡೋದಿಲ್ಲ.
ಇವರೇ ವಿಜಯ ಸಂಕೇಶ್ವರ ಅನ್ನೋ ಮಟ್ಟಿಗೆ ನಿಹಾಲ್ ನಟಿಸಿದ್ದಾರೆ. ರವಿಚಂದ್ರನ್ ಬಂದು ವಿಜಯ್ ಅವರಿಗೆ ಮಾತ್ರವಲ್ಲ, ಸಿನಿಮಾಗೂ ಪುಷ್ಟಿ ನೀಡಿ ಹೋಗುತ್ತಾರೆ. ಅನಂತ್ ನಾಗ್ ಅವರನ್ನು ಬಿ.ಜಿ. ಸಂಕೇಶ್ವರರ ಪಾತ್ರದಲ್ಲಿ ನೋಡೋದೇ ಚೆಂದ. ಸಿನಿಮಾಗೆ ಬಳಸಿರುವ ಸೆಟ್ ಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿದಂತೆ ತಾಂತ್ರಿಕ ಕೆಲಸಗಳು ಅತ್ಯುತ್ತಮ ಗುಣಮಟ್ಟದಲ್ಲಿವೆ.
ಮಹಾನ್ ಸಾಧಕನ ಬದುಕಿನ ಹಾದಿಯನ್ನು ನಿರ್ದೇಶಕಿ ರಿಷಿಕಾ ಶರ್ಮಾ ಶ್ರದ್ಧೆ, ಭಕ್ತಿಯಿಂದ ಸಿನಿಮಾ ರೂಪಕ್ಕಿಳಿಸಿದ್ದಾರೆ. ಇದು ವಿಜಯ ಸಂಕೇಶ್ವರ್ ಅವರ ಸಾಧನೆಯ ಡಾಕ್ಯುಮೆಂಟರಿಯಾಗಿ ಮಾತ್ರ ಉಳಿಯುವುದಿಲ್ಲ. ಅವರ ಪುತ್ರ ಆನಂದ್ ಸಂಕೇಶ್ವರರ ಶ್ರಮ ಮತ್ತು ಗೆಲುವಿನ ರಹಸ್ಯಗಳನ್ನೂ ದಾಖಲು ಮಾಡಿವೆ. ಮುಟಿಕಿಯಷ್ಟು ಧೈರ್ಯದ ಜೊತೆ ಚಿಟಿಕೆಯಷ್ಟು ಅಂಜಿಕೆ ಇಲ್ಲದ ಹುಂಬನಂತೆ ಕಾಣುವ ಹಡುಗನೊಬ್ಬ ವಿ.ಆರ್.ಎಲ್. ಎನ್ನುವ ಸಾಮ್ರಾಜ್ಯ ಕಟ್ಟಿ ಮೆರೆದ ಇಂಚಿಂಚೂ ವಿಚಾರಗಳನ್ನು ತಿಳಿಯಲು ವಿಜಯಾನಂದ ನೋಡಿ…
No Comment! Be the first one.