ಸಾಮಾನ್ಯವಾಗಿ ಒಂದೇ ತಂಡ, ನಾಯಕ ಮತ್ತು ನಿರ್ದೇಶಕರು ಒಂದರ ಹಿಂದೆ ಮತ್ತೊಂದು ಚಿತ್ರದಲ್ಲಿ ಜೊತೆಯಾಗೋದು ವಿರಳ. ಎಷ್ಟೋ ಸಲ ಒಂದು ಸಿನಿಮಾ ಮುಕ್ತಾಯಕ್ಕೂ ಮುನ್ನವೇ ತಂಡದೊಳಗಿನ ವಿಶ್ವಾಸವೂ ಸಮಾಪ್ತಿಗೊಂಡಿರುತ್ತದೆ. ಆದರೆ ಪರದೇಸಿ ಕೇರಾಫ್ ಲಂಡನ್ ವಿಚಾರದಲ್ಲದು ಪಕ್ಕಾ ತದ್ವಿರುದ್ಧ!
ಪರದೇಸಿ ಕೇರಾಫ್ ಲಂಡನ್ ಮೂಲಕ ನಿರ್ದೇಶಕ ರಾಜಶೇಖರ್ ಮತ್ತು ವಿಜಯ್ ರಾಘವೇಂದ್ರ ಎರಡನೇ ಸಲ ಒಂದಾಗಿದ್ದಾರೆ. ಈ ಹಿಂದೆ ಇದೇ ಜೋಡಿ ರಾಜ ಲವ್ಸ್ ರಾಧೆ ಚಿತ್ರದ ಮೂಲಕ ಗೆಲುವು ದಾಖಲಿಸಿತ್ತು. ಈಗ ಹೆಚ್ಚೂ ಕಮ್ಮಿ ಅದೇ ತಂಡವೇ ಸೇರಿಕೊಂಡು ಪರದೇಸಿ ಕೇರಾಫ್ ಲಂಡನ್ ಚಿತ್ರವನ್ನು ರೂಪಿಸಿದೆ.
ರಾಜ ಲವ್ಸ್ ರಾಧೆ ಚಿತ್ರ ಅಂತಿಮ ಹಂತ ತಲುಪೋ ಮುನ್ನವೇ ನಿರ್ದೇಶಕ ರಾಜಶೇಖರ್ ಹೊಸಾ ಕಥೆಯೊಂದಕ್ಕೆ ಕಾವು ಕೊಟ್ಟಿದ್ದರು. ಅದಕ್ಕೆ ವಿಜಯ್ ರಾಘವೇಂದ್ರ ಅವರೇ ನಾಯಕ ಎಂದೂ ಫಿಕ್ಸಾಗಿದ್ದರು. ಆ ಘಳಿಗೆಯಲ್ಲಿಯೇ ರಾಜಶೇಖರ್ ವಿಜಯ್ ರಾಘವೇಂದ್ರ ಅವರ ಜೊತೆ ಮತ್ತೊಂದು ಚಿತ್ರ ಮಾಡೋದಾಗಿಯೂ ಘೋಶಿಸಿದ್ದರು.
ಆ ಮಾತಿಗೆ ತಕ್ಕುದಾಗಿಯೇ ಪರದೇಸಿ ಕೇರಾಫ್ ಲಂಡನ್ ಅನ್ನು ರೂಪಿಸಿ ಬಿಡುಗಡೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ.
ವಿಜಯ್ ರಾಘವೇಂದ್ರರ ನಟನಾ ಚಾತುರ್ಯದ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಈವರೆಗೂ ಅವರು ಥರ ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯನ್ನೂ ಜಾಹೀರು ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ವಿಜಯ್ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅವತರಿಸಲಿದ್ದಾರೆ ಅಂತ ರಾಜಶೇಖರ್ ಆರಂಭದಲ್ಲಿಯೇ ಹೇಳಿದ್ದಾರೆ. ಪರದೇಸಿ ಕೇರಾಫ್ ಲಂಡನ್ ಬಗ್ಗೆ ಈ ಪಾಟಿ ನಿರೀಕ್ಷೆ ಮೂಡಿರೋದಕ್ಕೆ ಅದೂ ಕೂಡಾ ಪ್ರಮುಖ ಕಾರಣ. ಅಂಥಾ ವಿಶೇಷತೆ ಏನಿದೆ ಎಂಬುದು ಈ ತಿಂಗಳ ಕಡೇಯ ಹೊತ್ತಿಗೆಲ್ಲ ಅನಾವರಣಗೊಳ್ಳಲಿದೆ.
#
No Comment! Be the first one.