ಕೆಂಡ ಸಂಪಿಗೆ ಖ್ಯಾತಿಯ ನಟ ವಿಕ್ಕಿ ಬಗ್ಗೆ ಇತ್ತೀಚೆಗಷ್ಟೇ ಸಿನಿಬಜ಼್’ನಲ್ಲಿ ಸಣ್ಣದೊಂದು ಟಿಪ್ಪಣಿ ಪ್ರಕಟಿಸಲಾಗಿತ್ತು. ಯಾವುದೇ ಒಬ್ಬ ನಟ ಅಥವಾ ತಂತ್ರಜ್ಞರ ಮನನೋಯಿಸುವುದು ಸಿನಿಬಜ಼್’ನ ಉದ್ದೇಶವಲ್ಲ. ಒಬ್ಬರ ನಡೆಯಲ್ಲಿ ಸರಿ-ತಪ್ಪುಗಳೇನೇ ಕಾಣಿಸಿದರೂ ಅದನ್ನು ನೇರವಾಗಿಯೇ ಬರೆಯುವುದು ನಮ್ಮ ರೂಢಿ.
ನಟ ವಿಕ್ಕಿ ಕುರಿತಾಗಿ ಬರೆದ ನಂತರ ಸಿನಿಬಜ಼್’ಗೆ ಸಾಕಷ್ಟು ಜನ ಹಿತೈಷಿಗಳು ಕರೆ ಮಾಡಿದ್ದಾರೆ. ಬಹುತೇಕರು ‘ವಿಕ್ಕಿ ತುಂಬಾ ನೊಂದುಕೊಂಡಿದ್ದಾನೆ’ ಅನ್ನೋದನ್ನೇ ಹೇಳಿದ್ದಾರೆ. ತೀರಾ ನೊಂದುಕೊಳ್ಳುವ, ಬೇಸರಿಸಿಕೊಂಡು ಕೂರುವಷ್ಟರ ಮಟ್ಟಿಗೆ ಏನೂ ಆಗಿಲ್ಲ. ಈಗಿನ್ನೂ ಎರಡು ಸಿನಿಮಾಗಳಲ್ಲಷ್ಟೇ ನಟಿಸಿರುವ ವಿಕ್ಕಿ ಬೆಳೆಯಬೇಕಾದ ಎತ್ತರ, ತಲುಪಬೇಕಿರುವ ದೂರ ಸಾಕಷ್ಟಿದೆ. ಸಣ್ಣ ಟೀಕೆಗಳಿಂದ ಎಚ್ಚೆತ್ತುಕೊಂಡು ಮುನ್ನಡೆಯುವುದರತ್ತ ಮಾತ್ರ ಗಮನ ಕೊಡಬೇಕು.
ಅಂದಹಾಗೆ ವಿಕ್ಕಿ ಮತ್ತೆ ‘ಕಾಲೇಜ್ ಕುಮಾರ್’ ನಿರ್ದೇಶಕ ಹರಿ ಸಂತು ಜೊತೆ ಸೇರಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ. ಮೊದಲ ಸಿನಿಮಾದಲ್ಲೇ ಸೂರಿಯಂತಾ ಕಸುಬುದಾರ ಡೈರೆಕ್ಟರ್ ಅಡಿಯಲ್ಲಿ ಕೆಲಸ ಮಾಡಿದ ಅನುಭವ ವಿಕ್ಕಿಗೂ ಇದೆ. ಸೂರಿ ಸಿನಿಮಾದಲ್ಲಿ ಸೈ ಅನ್ನಿಸಿಕೊಂಡಮೇಲೆ ಬೇರೆ ಯಾರ ಬಳಿಯಾದರೂ ಬದುಕಿ ಬೆಳೆಯಬಹುದು. ತನಗೊಪ್ಪುವ ಪಾತ್ರದ ಆಯ್ಕೆ ಮಾಡಿಕೊಂಡು, ಅಚ್ಚುಕಟ್ಟಾಗಿ ನಟಿಸಿ ಎದ್ದುನಿಲ್ಲುವ ಪ್ರಯತ್ನವನ್ನು ವಿಕ್ಕಿ ಮಾಡಲಿ… ಆಲ್ ದಿ ಬೆಸ್ಟ್ ವಿಕ್ಕಿ!