ಅದೇನು ಕೇಡುಗಾಲವೋ ಗೊತ್ತಿಲ್ಲ. ಜನವರಿ ತಿಂಗಳು ಬರುತ್ತಿದ್ದಂತೇ ಕೊರೋನಾ ವೈರಸ್ಸು ಹಾವಳಿ ಶುರು ಮಾಡುತ್ತದೆ. ಕಳೆದ ಎರಡು ವರ್ಷ ಜನ ಪಡಬಾರದ ಪಾಡು ಪಟ್ಟಿದ್ದಾರೆ. ಈಗ ಮತ್ತೆ ಅದೇ ಆತಂಕ ಶುರುವಾಗಿದೆ. ಸಿನಿಮಾವನ್ನು ನಂಬಿದವರ ಎದೆಯಲ್ಲಂತೂ ಪುಕ ಪುಕಾ ಅನ್ನುತ್ತಿದೆ.

ನಡುವೆ ಓಟಿಟಿಯ ಬಂಡವಾಳ ಶಾಹಿಗಳು ಸ್ಟಾರ್ ಸಿನಿಮಾಗಳ ಬೆನ್ನು ಬಿದ್ದಿದ್ದಾರೆ. ಹೊಸಬರು ಎಷ್ಟೇ ಒಳ್ಳೇ ಸಿನಿಮಾ ಮಾಡಿದ್ದರು ಓಟಿಟಿ ಕಂಪೆನಿಗಳು ಮೂಸಿ ಕೂಡಾ ನೋಡೋದಿಲ್ಲ. ಸ್ಟಾರ್ ಹೀರೋಗಳ ಸಿನಿಮಾಗಳನ್ನು ಕೊಡಲ್ಲ ಅಂದರೂ ಬಿಡೋದಿಲ್ಲ. ಸದ್ಯ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಕಿಚ್ಚ ಸುದೀಪ ಅವರ ವಿಕ್ರಾಂತ್ ರೋಣ ಸಿನಿಮಾವನ್ನು ಖರೀದಿಸಲು ಎರಡು ಕಂಪೆನಿಗಳು ತುದಿಗಾಲಲ್ಲಿ ನಿಂತಿವೆಯಂತೆ.  ಬರೋಬ್ಬರಿ ನೂರು ಕೋಟಿ ರುಪಾಯಿಗಳ ಆಫರ್ ಕೂಡಾ ಮಾಡಿವೆಯಂತೆ.

ಹಿಂದೆ ನಿರ್ಮಾಪಕ ಜಾಕ್ ಮಂಜು ಹೇಳಿಕೊಂಡಿದ್ದಂತೆ ಸಿನಿಮಾದ ಖರ್ಚೇ ಹತ್ತಿರತ್ತಿರ ನೂರು ಕೋಟಿ ತಲುಪಿದೆ. ಡಬ್ಬಿಂಗು, ಟೀವಿ ರೈಟ್ಸು, ಡಿಜಿಟಲ್ಲು ಅಂತೆಲ್ಲಾ ಬಿಡಿಬಿಡಿಯಾಗಿ ಮಾರಬಹುದು. ನಂತರ ಥೇಟರಲ್ಲಿ ರಿಲೀಸ್ ಮಾಡಿದರೆ ಎಲ್ಲಾ ಸೇರಿ ಏನಿಲ್ಲವೆಂದರೂ ನೈರೈವತ್ತು ಕೋಟಿಗೂ ಮೀರಿ ವಿಕ್ರಾಂತ್ ರೋಣ ವ್ಯವಹಾರ ಮಾಡ್ತಾನೆ. ಹೀಗಿರುವಾಗ ಬರೀ ನೂರು ಕೋಟಿಗೆ ಜುಟ್ಟು ಜನಿವಾರ ಎಲ್ಲವನ್ನೂ ಕೊಟ್ಟು ಸುಮ್ಮನಾಗಲು ಕಿಚ್ಚ ಸುದೀಪ ಒಪ್ತಾರಾ?

ಹಣಕಾಸಿನ ವಿಚಾರ ಪಕ್ಕಕ್ಕಿರಲಿ. ವಿಕ್ರಾಂತ್ ರೋಣ ಚಿತ್ರಕ್ಕೆ ಇಷ್ಟೊಂದು ಖರ್ಚಾಗಲು ಕಾರಣ 3 ಡಿ ತಂತ್ರಜ್ಞಾನ. ಚಿತ್ರವನ್ನು ಥೇಟರಿನಲ್ಲಿ ನೋಡಿದರಷ್ಟೇ ಪ್ರೇಕ್ಷಕರಿಗೆ ಮಜಾ ಸಿಗಲು ಸಾಧ್ಯ. ಒಂದು ವೇಳೆ ರೋಣನನ್ನು ಓಟಿಟಿಗೆ ಮಾರಿದರೆ, ಇಷ್ಟೆಲ್ಲಾ ಶ್ರಮ  ವಹಿಸಿ 3ಡಿ ಮಾಡಿಸಿದ್ದು ಸಂಪೂರ್ಣ ವೇಸ್ಟ್ ಅನ್ನಿಸಿಕೊಂಡುಬಿಡುತ್ತದೆ. ಎಲ್ಲದಕ್ಕಿಂತಾ ಹೆಚ್ಚಾಗಿ ಕಿಚ್ಚ ಸುದೀಪ್ ಅವರಿಗೆ ಚಿತ್ರ ಜಗತ್ತಿನಾದ್ಯಂತ ಥೇಟರಿನಲ್ಲಿ ರಿಲೀಸ್ ಆಗಬೇಕು. ಮೂಲಕ ತಮ್ಮ ಮಾರ್ಕೆಟನ್ನು ವಿಸ್ತರಿಸಿಕೊಳ್ಳಬೇಕು ಎನ್ನುವ ಬಯಕೆ ಇದೆ. ಓಟಿಟಿಯಲ್ಲಿ ರಿಲೀಸ್ ಮಾಡಿದರೆ ಇವೆಲ್ಲಾ ಸಾಧ್ಯವಾ ಅನ್ನೋದೇ ಸದ್ಯದ ಪ್ರಶ್ನೆ..!

ಹರೀಶ ವಯಸ್ಸು 36 ಚಿತ್ರದಲ್ಲಿ ಪುನೀತ್ ಹಾಡು

Previous article

ಭಾನುವಾರದ‌ ಮಹಾ ಮನರಂಜನೆ :  ಸುವರ್ಣ ಕಾಮಿಡಿ ಉತ್ಸವ

Next article

You may also like

Comments

Leave a reply

Your email address will not be published.