ಪರಭಾಷಾ ನಟಿಯದ ಕೊಬ್ಬಿನ ಕಥೆಗಳು ಸಾಕಷ್ಟಿದ್ದರೂ ಅದೇಕೋ ಅಂಥವರಿಗೇ ಮಣೆ ಹಾಕೋ ಚಾಳಿ ಬೆಳೆದುಕೊಂಡಿದೆ. ಆರಂಭದಲ್ಲಿ ಬಳುಕುತ್ತಾ ಬರುವ ಇಂಥಾ ನಟಿಯರು ಆ ನಂತರ ಗುನ್ನ ಕೊಟ್ಟೇ ವಾಪಾಸುಹೋಗೋದೂ ಮಾಮೂಲು. ಸದ್ಯ ವಿಲನ್ ಚಿತ್ರದ ನಾಯಕಿ ಆಮಿ ಜಾಕ್ಸನ್ ಕೂಡಾ ಅಂಥಾದ್ದೇ ನಡವಳಿಕೆಯಿಂದ ಸುದ್ದಿಯಲ್ಲಿದ್ದಾಳೆ!
ಆಮಿ ಜಾಕ್ಸನ್ ವಿಲನ್ ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿಯಾಗಿ ನಟಿಸಿದ್ದಾಳೆ. ಆದರೆ ಇಷ್ಟು ದೊಡ್ಡ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದರೂ ಕೂಡಾ ಈಕೆ ಪ್ರಮೋಶನ್‌ಗೂ ತನಗೂ ಸಂಬಂಧವೇ ಇಲ್ಲದಂತಿದ್ದಾಳೆಂಬುದು ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ಸಿಟ್ಟಿಗೆ ಕಾರಣವಾಗಿದೆ.
ಚಿತ್ರತಂಡದ ಸಿಟ್ಟಿಗೂ ಕಾರಣವಿದೆ. ಚಿತ್ರೀಕರಣ ಮುಗಿಸಿಕೊಂಡು ಕಣ್ಮರೆಯಾದ ಆಮಿ ಮತ್ತೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇತ್ತೀಚೆಗೆ ಸುದೀಪ್ ಅವರ ಜೊತೆಗೊಂದು ಹಾಡಿನ ಚಿತ್ರೀಕರಣಕ್ಕೆ ಹಾಜರಾಗಿದ್ದ ಆಮಿ ಲಕ್ಷಣವಾಗಿ ಅದನ್ನು ಮುಗಿಸಿ ಎದ್ದು ಹೋಗಿದ್ದಳು. ಇಂಥಾ ನಟಿ ಈ ಹಿಂದೆ ವಿದೇಶದಲ್ಲಿ ನಡೆದಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಳು. ಆದರೆ ಆ ನಂತರ ಒಂದೇ ಒಂದು ಕಾರ್ಯಕ್ರಮಗಳಲ್ಲಿಯೂ ಆಕೆಯ ಪತ್ತೆಯಿಲ್ಲ.
ಈ ಬಗ್ಗೆ ಪ್ರೇಮ್‌ಗೆ ಆರಂಭದಿಂದಲೂ ಸಿಟ್ಟಿತ್ತಾದರೂ ಆ ಬಗ್ಗೆ ಹೇಳಿಕೊಂಡು ಏನೂ ಪ್ರಯೋಜನ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಇನ್ನು ಮುಂದೆ ಪರಭಾಷಾ ನಟಿಯರ ಹಿಂದೆ ಬೀಳುವವರಿಗೂ ಆಮಿ ಜಾಕ್ಸನ್ ಪಾಠದಂತಿದ್ದಾಳೆ!
#