ದಿ ವಿಲನ್: ಎಲ್ಲ ರಸಗಳನ್ನೂ ಬೆರೆಸಿ ತಯಾರಿಸಿದ ಪ್ರೇಮ್ಮೇಡ್ ಕಷಾಯ!
ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಥೇಟು ಗಜಪ್ರಸವದ ಮಾದರಿಯಲ್ಲಿಯೇ ಕಡೆಗೂ ಬಿಡುಗಡೆಯಾಗಿದೆ. ಒಂದು ಚಿತ್ರ ಆರಂಭಿಸಿದರೆಂದರೆ ಮೊದಲು ಪ್ರಚಾರ ಆಮೇಲೆ ಕೆಲಸ ಎಂಬ ಸೂತ್ರವನ್ನೇ ನೆಚ್ಚಿಕೊಂಡು ಬಂದಿರೋ ಪ್ರೇಮ್ ಈ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸಿದ್ದರು. ಆದರೆ ಪ್ರೇಕ್ಷಕರ ಅಸಹನೆಯನ್ನೂ ಕಡೇ ಘಳಿಗೆಯಲ್ಲಿ ಕೊತ ಕೊತನೆ ಕುಡಿಯುವ ಕುತೂಹಲವಾಗಿಸಿದ್ದ ಪ್ರೇಮ್ ಜಾಣ್ಮೆ ಎಂಬುದರಲ್ಲಿ ಎರಡು ಮಾತಿಲ್ಲ. ಸುದೀಪ್ ಮತ್ತು ಶಿವಣ್ಣ ಈ ಇಬ್ಬರಲ್ಲಿ ಯಾರು ರಾಮ ಮತ್ತು ಯಾರು ರಾವಣ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ!
ಪ್ರೇಮ್ ಚಿತ್ರವೆಂದ ಮೇಲೆ ಹಳ್ಳಿ ಚಿತ್ರಣ, ಮದರ್ ಸೆಂಟಿಮೆಂಟ್ ಇರೋದು ವಾಡಿಕೆ. ಈ ಚಿತ್ರವೂ ಕೂಡಾ ಹಳ್ಳಿಯೊಂದರ ನಾಟಕ ಪ್ರದರ್ಶನದ ಮೂಲಕವೇ ತೆರೆದುಕೊಳ್ಳುತ್ತೆ. ಈ ಚಿತ್ರಣದಲ್ಲಿ ಶಿವಣ್ಣ ಹಳ್ಳಿಗಾಡಿನ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಆ ತಾಯಿಗೆ ತನ್ನ ಮಗ ರಾಮ ಶ್ರೀರಾಮ ಚಂದ್ರನಂತೆಯೇ ಬಾಳಿ ಬದುಕಬೇಕೆಂಬೋ ಆಸೆ. ಆದ್ದರಿಂದ ರಾಮನ ಆದರ್ಶಗಳನ್ನೇ ಧಾರೆ ಎರೆದು ಬೆಳೆಸುತ್ತಾಳೆ. ಆದರೆ ವಿಪರೀತ ನಾಟಕದ ಹುಚ್ಚಿನ ರಾಮನ ಜನ್ಮದಾತನಿಗೆ ರಾವಣನ ಮೇಲೆ ಬಲು ಪ್ರೀತಿ. ನಾಟಕದಲ್ಲಿಯೂ ಪಟ್ಟು ಹಿಡಿದು ರಾವಣನಾಗೋ ಗಂಡನ ಮೇಲೆ ರಾಮನ ತಾಯಿಗೆ ಕೆಂಡದಂಥಾ ಸಿಟ್ಟು. ಕಡೆಗೂ ಆಕೆ ತನ್ನ ಗಂಡ ನಾಟಕದಲ್ಲಿ ಧರಿಸಿ ಮೆರೆಯುವ ರಾವಣ ಕಿರೀಟಕ್ಕೆ ಬೆಂಕಿಯಿಡುತ್ತಾಳೆ. ಆ ಬೆಂಕಿಯ ಜೊತೆಗೇ ಅಸಲೀ ಕಥಾನಕ ತೆರೆದುಕೊಳ್ಳುತ್ತೆ!
ಅವ್ವನ ರಾಮನಾಮಸ್ಮರಣೆಯನ್ನೇ ಕಿವಿಗೆ ಎರಕ ಹೊಯ್ದುಕೊಂಡಂತೆ ಬೆಳೆದ ರಾಮನ ಕತ್ತಿನಲ್ಲೊಂದು ಬೆಳ್ಳಿಯ ಸರ. ಆದರೆ ರಾಮ ಒಂದು ಫೈಟಿಂಗ್ ಸೀನಿನಲ್ಲಿದ್ದಾಗ ಆ ಸರ ಮಾಯವಾಗುತ್ತೆ. ಹಾಗೆ ಮಾಯವಾದ ಸರದ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಲ್ಲಿ ಕೈಸರ್ ರಾಮ್ ಆಗಿ ಸುದೀಪ್ ಭರ್ಜರಿ ಎಂಟ್ರಿ ಕೊಡುತ್ತಾರೆ. ರಾಮ ಕೈಸರ್ ರಾಮನ ಬೆಂಬಿದ್ದು, ಬಡಿದಾಟವಾಗಿ, ಅದಕ್ಕೊಂದು ಉಪಕಥೆ, ಆ ಕಥೆಗೆ ಮತ್ತೊಂದು ಕೊಂಬೆ ಕೋವೆ… ಬಹುಶಃ ನಿರ್ದೇಶಕ ಪ್ರೇಮ್ ಎರಡು ವರ್ಷಗಳ ಕಾಲ ಯಾವುದ್ಯಾವುದೋ ಕಥೆಯನ್ನು ಚೆನ್ನಾಗಿ ಕಲೆಸಿ, ಕಲಸುಮೇಲೋಗರ ಮಾಡಿ ದೃಷ್ಯ ಕಟ್ಟಿದ್ದಾರೇನೋ ಎಂಬ ಸಂಶಯ ಮೂಡುವಂತೆ ಗೋಜಲಿನ ವಾತಾವರಣವೂ ಸೃಷ್ಟಿಯಾಗುತ್ತೆ.
ಥ್ರ್ರಿಲ್ಲರ್, ಆಕ್ಷನ್ ಮತ್ತು ಸೆಂಟಿಮೆಂಟುಗಳನ್ನು ಸೇರಿಸಿ ಪ್ರೇಮ್ ಕಥೆ ಹೊಸೆದಿದ್ದಾರೆ. ಅದು ಪ್ರೇಕ್ಷಕರಿಗೆ ಅಲ್ಲಲ್ಲಿ ಕಾಮಿಡಿ ಮತ್ತು ಹಾರರ್ ಅನುಭವವನ್ನೂ ನೀಡೋದು ಈ ಚಿತ್ರದ ಹೆಚ್ಚುಗಾರಿಕೆಯೋ, ಕೊರತೆಯೋ ಎಂಬ ಗೊಂದಲವೂ ಕಾಡುತ್ತೆ. ಆದರೆ ಕಥೆ ಸಿಕ್ಕಿನಾಚೆಗೆ ಇಡೀ ಚಿತ್ರವನ್ನು ಪ್ರೇಮ್ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ರಾಮ ಮತ್ತು ಕೈಸರ್ ರಾಮ್ ಪಾತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಅಕ್ಷರಶಃ ವಿಜೃಂಭಿಸಿದ್ದಾರೆ. ಅವರಿಬ್ಬರದ್ದೂ ಪರಕಾಯ ಪ್ರವೇಶ. ಅವರ ಬಾಯಿಂದ ಹೊರ ಬೀಳೋ ಪ್ರತೀ ಡೈಲಾಗುಗಳಿಗೂ ಶಿಳ್ಳೆ ಕೇಕೆಗಳು ಮೊರೆಯುತ್ತವೆ. ಆದರೆ ಪ್ರೇಮ್ ವ್ಯಕ್ತಿತ್ವದಂತೆಯೇ ಗಡಿಬಿಡಿ, ಗಜಿಬಿಜಿಗಳೇ ಕಥೆಯ ವಿಚಾರದಲ್ಲಿ ಮಿಜಿಗುಡುತ್ತವೆ. ಇಡೀ ಸಿನಿಮಾ ನೋಡಿದಾಗ ಸುದೀಪ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆಯಾ ಎಂದು ಅನಿಸದೇ ಇರದು. ಹಾಗೆ ನೋಡಿದರೆ ಒಂದು ಸಣ್ಣ ಎಳೆಯಲ್ಲಿ ಸಲೀಸಾಗಿ ಹೇಳಿಬಿಡಬಹುದಾಗಿದ್ದ ಕತೆಯನ್ನು ರೋಚಕಗೊಳಿಸುವ ಉಮೇದಿಗೆ ಬಿದ್ದು ಎಲ್ಲಿಂದ ಎಲ್ಲಿಗೋ ಟ್ರಾವೆಲ್ ಮಾಡಿಸಿದ್ದಾರೆ. ಬ್ರಿಟಿಷರು ಭಾರತವನ್ನು ಆಳಿದ್ದ ಸೇಡಿಗೆ ಒಬ್ಬ ವ್ಯಕ್ತಿ ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲ್ಲಾಡಿಸಲು ಅಂಡರ್ ವರ್ಲ್ಡ್ ಡಾನ್ ರೂಪದಲ್ಲಿ ಎದ್ದುನಿಲ್ಲೋದನ್ನು ನಿಜಕ್ಕೂ ಹಾಸ್ಯಾಸ್ಪದವಾಗಿದೆ!
ಎಲ್ಲಾ ರಸಗಳನ್ನೂ ಒಂದೇ ಚಿತ್ರದಲ್ಲಿ ಸೇರಿಸಿದರೆ ರುಚಿಯಾದ ರಸಾಯನವೇ ಆಗುತ್ತದೆಂದೇನೂ ಗ್ಯಾರಂಟಿಯಿಲ್ಲ. ಅದು ಒಗರೊಗರು ಕಷಾಯವಾಗೋ ಅಪಾಯವೂ ಇದೆ. ಆ ಅಪಾಯವನ್ನು ಪ್ರೇಮ್ ಮನಗಂಡಿಲ್ಲ ಎಂಬುದೇ ಈ ಚಿತ್ರದ ದೊಡ್ಡ ಹಿನ್ನಡೆ. ಶಿವಣ್ಣ ಮತ್ತು ಸುದೀಪ್ ಪಾತ್ರಗಳ ಖದರ್ ಇಡೀ ಕಥೆಯಲ್ಲಿಯೂ ಇದ್ದಿದ್ದರೆ, ಹುಟ್ಟಿಕೊಂಡಿದ್ದ ಕ್ರೇಜಿನಲ್ಲಿ ವಿಲನ್ ಎಲ್ಲಿಯೋ ಹೋಗಿ ಬಿಡುತ್ತಿದ್ದ. ಆದರೆ ವಿಲನ್ನು ನಿರ್ದೇಶಕ ಪ್ರೇಮ್ ಗಡಿಬಿಡಿಯ ನಡುವೆ ಅಕ್ಷರಶಃ ಬಸವಳಿದಿದ್ದಾನೆ!
ಫೈನಲಿ, ಇಡೀ ಕಥೆ ಮದರ್ ಸೆಂಟಿಮೆಂಟಿನಲ್ಲಿ ವಿಲೀನವಾಗುತ್ತದೆ. ಅದನ್ನು ನೋಡುಗರ ಕಣ್ಣಾಲಿಗಳು ತುಂಬಿ ಬರುವಂತೆ ಶಶಕ್ತವಾಗಿಯೂ ಪ್ರೇಮ್ ರೂಪಿಸಿದ್ದಾರೆ. ಆದರೆ ಕಣ್ಣುಗಳು ಹನಿಗೂಡಿದ್ದು ಮೂರು ಘಂಟೆ ಚಿತ್ರ ನೋಡಿದ ಪರಿಣಾಮದಿಂದಲಾ, ಅಥವಾ ಅದಕ್ಕೆ ಕ್ಷೈಮ್ಯಾಕ್ಸ್ ಕಾರಣವಾ ಎಂಬ ಯಕ್ಷ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತದೆ. ಇದೆಲ್ಲದರಾಚೆಗೆ ಇಡೀ ಚಿತ್ರವನ್ನು ಅದ್ದೂರಿಯಾಗಿ ರೂಪಿಸೋ ಪ್ರೇಮ್ ಹಂಬಲ ಎದ್ದು ಕಾಣಿಸುತ್ತೆ. ಕೆಲವೆಡೆ ಅದರಲ್ಲವರು ಯಶಸ್ವಿಯೂ ಆಗುತ್ತಾರೆ. ಗಿರೀಶ್ ಗೌಡ ಛಾಯಾಗ್ರಹಣವೂ ಚೇತೋಹಾರಿಯಾಗಿದೆ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆಯಲ್ಲೂ ಖದರ್ ಇದೆ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳೂ ಚಿತ್ರಕ್ಕೆ ಪೂರಕವಾಗಿ ಇಷ್ಟವಾಗುತ್ತವೆ.
ಆದರೆ ಎಲ್ಲಾ ಇದೆ, ಮತ್ತೇನೋ ಇಲ್ಲ ಎಂಬ ಗೊಂದಲದ ಛಾಯೆಯೊಂದು ಕ್ಲೈಮ್ಯಾಕ್ಸ್ ಜೊತೆಗೇ ಪ್ರೇಕ್ಷಕರ ಮನಸಿಗೂ ಇಳಿದುಕೊಳ್ಳುತ್ತೆ ಎಂಬಲ್ಲಿಗೆ ವಿಲನ್ ಅಬ್ಬರ ಸಮಾಪ್ತಿಯಾಗುತ್ತೆ!
#
No Comment! Be the first one.