ಕರ್ನಾಟಕ ರಾಜ್ಯಕ್ಕೆ ಜಲ ಕಂಟಕವಿರಬೇಕು. ಕಳೆದ ವರ್ಷ ಇದೇ ಸಮಯಕ್ಕೆ ಕೊಡಗು ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗಿದ್ದರೆ ಈ ವರ್ಷ ಉತ್ತರ ಕರ್ನಾಟಕವೇ ನೀರಿಗಾಹುತಿಯಾಗಿದೆ. ಪ್ರವಾಹಕ್ಕೆ ಸಿಲುಕಿ ತಮ್ಮ ಜೀವವನ್ನು ಬಿಗಿ ಹಿಡಿದುಕೊಂಡು ಬದುಕಿದ ಜೀವನದ ಗತಿಯನ್ನೇ ಕಳೆದುಕೊಂಡ ಲಕ್ಷಾಂತರ ಮಂದಿ ಸಹಾಯದ ನಿರೀಕ್ಷೆಯಲ್ಲಿ ನರಳುತ್ತಿದ್ದಾರೆ. ಅವರ ಮೊರೆಯನ್ನು ಕೇಳಿದ ಸಾವಿರಾರು ಮಂದಿ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಲೇ ಇದ್ದಾರೆ. ಸೈನಿಕರು, ಕನ್ನಡದ ನಟ, ನಟಿಯರು, ಎನ್ ಜಿ ಓಗಳು, ಸಂಘ ಸಂಸ್ಥೆಗಳು ನೆರೆ ಸಂತ್ರಸ್ಥರ ಪರ ನಿಂತಿದ್ದಾರೆ. ಅಲ್ಲದೇ ಸರ್ಕಾರದ ಜತೆಗೆ ಕೈ ಜೋಡಿಸಿ ಅಸ್ತವ್ಯಸ್ಥಗೊಂಡ ಜನ ಜೀವನ ಮೊದಲು ಗತಿಗೆ ಬರಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ನಡು ನಡುವೆ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಯುವ ರಾಜ್ ಕುಮಾರ್ ಉತ್ತರ ಕರ್ನಾಟಕದ ಪ್ರವಾಹದ ಕುರಿತು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು ಈ ಕೆಳಗಿನಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಆಲೋಚನೆ : ನಮ್ಮ ಕರ್ನಾಟಕದ ಎಷ್ಟೋ ಜಿಲ್ಲೆಗಳಲ್ಲಿ ಜಲಪ್ರಳಯದ ಪರಿಣಾಮ ಲಕ್ಷಾಂತರ ಜನರು ನಷ್ಟದಲ್ಲಿದಾರೆ .. ಅವರಲ್ಲಿ ನೂರಾರು ಜನರು ನಿರಾಶ್ರಿತರಾಗಿದ್ದಾರೆ , ಆಹಾರವಿಲ್ಲ , ಮೂಲಭೂತ ಸೌಕರ್ಯಗಳಿಲ್ಲ .. ನಾವು ಕನ್ನಡಿಗರು , ಇಲ್ಲಿನ ಸಂಘ ಸಂಸ್ಥೆಗಳು , ಸೇನೆ ದಳಗಳು , ಕರ್ನಾಟಕ ಸರ್ಕಾರ ಎಲ್ಲರೂ ಒಂದಾಗಿ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನ ಪಡುತ್ತಿದ್ದೇವೆ . ಆದರೆ , ಎಲ್ಲಾ ಹೊರಗಿನ ಸೆಲೆಬ್ರಿಟಿಗಳು / ಸ್ಟಾರ್ಗಳು / ರಾಜಕಾರಣಿಗಳು ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು , ತಮ್ಮ ಬ್ರಾಂಡ್ ಅನ್ನು ಉತ್ತೇಜಿಸಲು , ನಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು , ಮತ ಕೇಳಲು ಕರ್ನಾಟಕಕ್ಕೆ ಬರುವವರು ಎಲ್ಲಿದ್ದಾರೆ .? ಇಲ್ಲಿ ಬರೋದು , ಸಹಾಯ ಮಾಡೋದ್ ಇರಲಿ , ನನಗೆ ಯಾರ ಟ್ವೀಟ್ , ಪೋಸ್ಟ್ ನೋಡಿದ ನೆನಪು ಆಗುತ್ತಿಲ್ಲ ! ಅಂದ ಹಾಗೆ , ಸಹಾಯ ಮಾಡಲು ಮುಂದೆ ಬಂದಿರುವ ಎಲ್ಲರಿಗೂ ನಮ್ಮ ಕೋಟಿ ವಂದನೆಗಳು .. ನಾನು ಏನಾದರೂ ತಪ್ಪು ಹೇಳುತ್ತಿದ್ದೇನೆಯೇ .? ತಪ್ಪಿದರೆ ಕ್ಷಮೆ ಇರಲಿ .. ಯಾರೇ ಬರಲಿ ಬಿಡಲಿ ನಮ್ಮವರ ಜೊತೆ , ಎಲ್ಲರ ಜೊತೆ ನಾವು ಇರೋಣ .. ಯುವರಾಜ್ ಕುಮಾರ್ ಹೇಳಿರುವ ಈ ವಿಚಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ..