ಸಿದ್ದಾರ್ಥ ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ರನ್ ಆಂಟನಿ ಎನ್ನುವ ಸಿನಿಮಾ ವಿನಯ್ ರಾಜ್ ಕುಮಾರ್ ವೃತ್ತಿ ಬದುಕಿಗೆ ಭಯಾನಕ ಏಟು ಕೊಟ್ಟುಬಿಟ್ಟಿತು. ದೊಡ್ಮನೆಯ ಬ್ಯಾನರಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಕಡೆಯ ಸಿನಿಮಾವೊಂದು ಈ ಮಟ್ಟದಲ್ಲಿರುತ್ತದೆ ಅಂತಾ ಯಾರೂ ಅಂದಾಜಿಸಿರಲಿಲ್ಲ. ಆ ಚಿತ್ರದ ನಿರ್ದೇಶಕ ರಘುಶಾಸ್ತ್ರಿಯ ಮಾತಿನಲ್ಲಿದ್ದ ನಿಯತ್ತು ಕೃತಿಯಲ್ಲಿರಲಿಲ್ಲ. ಇದು ವಿನಯ್ ಕೆರಿಯರನ್ನು ಡ್ಯಾಮೇಜು ಮಾಡಿದ್ದು ನಿಜ. ಇದೇ ಹೊತ್ತಲ್ಲಿ ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಸಿನಿಮಾದ ಕಂಟೆಂಟು ಎಲ್ಲರನ್ನೂ ಆಕರ್ಷಿಸಿತು. ಆದರೆ ನಿರ್ಮಾಪಕರ ಅಕಾಲಿಕ ಮರಣದಿಂದ ಬಿಡುಗಡೆಯಾಗದೇ ಉಳಿಯಿತು. ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣದ ʻಟೆನ್ʼ ಎನ್ನುವ ಸಿನಿಮಾದ ಕೂಡಾ ಬಿಡುಗಡೆ ತಡವಾಯಿತು.
ನಿರೀಕ್ಷೆಗಳೆಲ್ಲಾ ಕಮರಿಹೋಗಿದ್ದಾಗ ನಿಜಕ್ಕೂ ವಿನಯ್ ರಾಜ್ ಕುಮಾರ್ ಕೈ ಹಿಡಿದು ಮೇಲೆತ್ತಿದ್ದು. ಸುಧೀರ್ ಶ್ಯಾನುಭೋಗ್ ನಿರ್ದೇಶನದ ʻಅನಂತು v/s ನುಸ್ರತ್ʼ ಎನ್ನುವ ಬ್ಯೂಟಿಫುಲ್ ಸಿನಿಮಾ. ವಿನಯ್ ಅವರಿಗಂತಲೇ ಸೃಷ್ಟಿಸಿದ ಸಿನಿಮಾ ಅದಾಗಿತ್ತು. ಕೆ.ಜಿ.ಎಫ್ನ ಅಬ್ಬರದ ಅಲೆಯ ನಡುವೆ ಕಳೆದುಹೋಯ್ತು ಅನ್ನೋದನ್ನು ಬಿಟ್ಟರೆ, ಈ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿದರು. ವಿಮರ್ಶಕರು ಕೊಂಡಾಡಿದ್ದರು. ʻಅನಂತುʼ ಬಂದ ಮೇಲಷ್ಟೇ ಪ್ರಜ್ಞಾವಂತ ನಿರ್ದೇಶಕರ ಕಣ್ಣು ವಿನಯ್ ಮೇಲೆ ಬಿದ್ದಿದ್ದೇ ಆಗ.
ಶ್ರೀಲೇಶ್ ನಾಯರ್ ನಿರ್ದೇಶನದ ʻಪೆಪೆʼ ಚಿತ್ರದ ಟೀಸರು, ಪೋಸ್ಟರು ಹೊರಬರುತ್ತಿದ್ಧಂತೇ ವಿನಯ್ ಬೇಡಿಕೆ ಹೆಚ್ಚಾಯಿತು. ಕೀರ್ತಿ ಡೈರೆಕ್ಷನ್ನಿನಲ್ಲಿ ʻಅದೊಂದಿತ್ತು ಕಾಲʼ ಸೆಟ್ಟೇರಿತು. ಈಗ ಪೆಪೆ ಮತ್ತು ಅದೊಂದಿತ್ತು ಕಾಲ ರಿಲೀಸಿಗೆ ಮೊದಲೇ ವಿನಯ್ ಸಾಕಷ್ಟು ಸಿನಿಮಾಗಳಿಗೆ ಬುಕ್ ಆಗಿದ್ದಾರೆ. ಎಲ್ಲಕ್ಕಿಂತಾ ಮುಖ್ಯವಾಗಿ ಸಿಂಪಲ್ ಸುನಿ ಎನ್ನುವ ಕಸುಬುದಾರ ನಿರ್ದೇಶಕ ಈ ಸಲ ವಿನಯ್ಗಾಗಿ ಸಿಸಿನಿಮಾ ಆರಂಭಿಸಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯನ ಪಾತ್ರದಲ್ಲಿ ವಿನಯ್ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪೋಸ್ಟರು ನೋಡಿದರೇನೆ ಈ ಸಿನಿಮಾ ಎಲ್ಲ ಜನಸಾಮಾನ್ಯರ ಮನಸು ಗೆಲ್ಲುವುದರ ಜೊತೆಗೆ ವಿನಯ್ಗೆ ಒಳ್ಳೇಕಾಲ ಬಂತೆನ್ನುವ ಸೂಚನೆ ಕಾಣುತ್ತಿದೆ. ಭರವಸೆ ನಿಜವಾಗಲಿ….
No Comment! Be the first one.