ನನ್ನ ಪ್ರಕಾರ ವಿನಯ್ ಲೈಫ್ ಸ್ಟೋರಿ!
ಚಿತ್ರರಂಗದಲ್ಲೇ ಕೆಲಸ ಮಾಡಿಕೊಂಡು, ವರ್ಷಗಟ್ಟಲೆ ಕನಸು ಕಂಡರೂ ಸಿನಿಮಾ ನಿರ್ದೇಶಕನಾಗಬೇಕೆನ್ನುವ ಆಸೆ ಹಲವರಿಗೆ ಈಡೇರೋದೇ ಇಲ್ಲ. ಆದರೆ ಬರೀ ಕನಸು ಕಾಣೋದು ಮಾತ್ರವಲ್ಲ, ಎಲ್ಲೂ ಆಯಾಸಗೊಳ್ಳದೇ ಶ್ರಮಿಸಿದರೆ ಮಾತ್ರ ಗುರಿ ತಲುಪಲು ಸಾಧ್ಯ ಅನ್ನೋದು ಆಗಾಗ ಕಣ್ಣೆದುರು ಕಾಣಿಸುತ್ತಿರುತ್ತದೆ. ಇಪ್ಪತ್ಮೂರು ವರ್ಷಕ್ಕೆಲ್ಲಾ ಸಿನಿಮಾ ನಿರ್ದೇಶಕನೆನಿಸಿಕೊಳ್ಳೋದು ಸುಲಭದ ಮಾತಲ್ಲ. ‘ನನ್ನ ಪ್ರಕಾರ’ ಸಿನಿಮಾದ ನಿರ್ದೇಶಕ ವಿನಯ್ ಅದನ್ನು ಸಾಧ್ಯವಾಗಿಸಿದವರು. ಈಗವರಿಗೆ ವಯಸ್ಸು ಇಪ್ಪತ್ತೈದು. ಈ ಚಿತ್ರ ಶುರುವಾಗೋ ಹೊತ್ತಿಗಿನ್ನೂ ವಿನಯ್ ಇಪ್ಪತ್ಮೂರರ ಹುಡುಗ!
ಮೊದಲಿಗೆ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ ಕಮ್ಯುನಿಕೇಶನ್ಸ್ ಓದಿಕೊಂಡಿದ್ದರಾದರೂ ಒಂದೆರಡು ಸಬ್ಜೆಕ್ಟ್ ಉಳಿದುಕೊಂಡಿತ್ತು. ಮನೆಯಲ್ಲಿ ಬೇರೆ ಕಷ್ಟ. ಹೀಗಾಗಿ ಕೆಲ ದಿನಗಳ ಕಾಲ ಕನ್ನಿಂಗ್ ಹ್ಯಾಮ್ ರಸ್ತೆಯ ಕಛೇರಿಯೊಂದರಲ್ಲಿ ಆಫೀಸ್ ಬಾಯ್ ಆಗಿಯೂ ಕೆಲ ಮಾಡಿದ್ದರು. ಆಗಲೇ ಕಣ್ಣಿಗೆ ಕಂಡದ್ದನ್ನು ಯಥಾವತ್ತು ಹಾಗೆಯೇ ಪೇಪರಿನ ಮೇಲೆ ಬಿಡಿಸುವ ಕಲೆ ವಿನಯ್’ಗಾಗಲೇ ಕರಗತವಾಗಿತ್ತು. ಹೇಳಿ ಕೇಳಿ ವಿನಯ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಬೇರೆ. ಕೂತ ಜಾಗದಲ್ಲೆಲ್ಲಾ ವಿಷ್ಣು ಸರ್ ಫೋಟೋಗಳ ಸ್ಕೆಚ್ ಮಾಡುತ್ತಿದ್ದರು. ಈ ಹೊತ್ತಿನಲ್ಲೇ ಯೂ ಟ್ಯೂಬ್ ಟ್ಯಟೋರಿಯಲ್ಸ್ ನೋಡಿಕೊಂಡೇ ವಿಡಿಯೋ ಎಡಿಟಿಂಗನ್ನೂ ಕಲಿತಿದ್ದರು. ಆ ಸಂದರ್ಭದಲ್ಲಿ ‘ನಾನ್ಯಾಕೆ ಇದೇ ಸಬ್ಜೆಕ್ಟಲ್ಲಿ ಡಿಗ್ರಿ ಮಾಡಬಾರದು?’ ಅನಿಸಿತ್ತು. ಮುಂದೆ ಬ್ಯಾಂಕಲ್ಲಿ ಸಾಲ ಮಾಡಿ ಮಲ್ಲೇಶ್ವರಂನಲ್ಲೇ ಇದ್ದ, ಮುಂಬೈ ಯೂನಿವರ್ಸಿಟಿಯಿಂದ ಮಾನ್ಯತೆ ಪಡೆದಿದ್ದ ‘ಜ಼ೀ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟೀವ್ ಆರ್ಟ್’ಗೆ ಸೇರಿದರು. ಕೋರ್ಸು ಮುಗಿಯುತ್ತಿದ್ದಂತೇ ಮುಂಬೈನ ಹೆಸರಾಂತ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ದೊರೆಯಿತು. ಹಾಗೇ ಕೆಲಸ ಕೂಡಾ ಮುಂದುವರೆಸಿದರು. ಅಲ್ಲಿ ‘ಅಡ್ವಾನ್ಸ್ ಸಿನಿಮಾ ಅಂದರೆ ಏನು’ ಎನ್ನುವುದರ ಬಗೆಗೇ ವಿನಯ್ ಸಾಕಷ್ಟು ಕಲಿತಿದ್ದರು. ಬಾಂಬೆಯಲ್ಲಿದ್ದ ಕೆಲಸ ಬಿಟ್ಟು ಬೆಂಗಳೂರಿಗೆ ವಾಪಾಸಾದವರೇ ಇಂಡಿಪೆಂಡೆಂಟಾಗಿ ವಿ.ಎಫ್.ಎಕ್ಸ್ ಆರ್ಟಿಸ್ಟ್ ಆಗಿ ಕೆಲಸ ಆರಂಭಿಸಿದರು. ಸೀತಾರಾಮಕಲ್ಯಾಣ ಸಿನಿಮಾದ ಸಂಕಲನಕಾರ ಗಣೇಶ್ ಅವರ ಬಳಿ ಸ್ಟಾಟ್ ಎಡಿಟಿಂಗ್ ಕೆಲಸವನ್ನೂ ಮಾಡಿದರು. ನಂತರ ಫಸ್ಟ್ Rank ರಾಜು ನಿರ್ದೇಶಕ ನರೇಶ್ ವಿನಯ್ ಅವರನ್ನು ತಮ್ಮ ಬಳಿ ಕರೆಸಿಕೊಂಡರು. ಈ ನಡುವೆಯೇ ಕ್ಯಾಮೆರಾಗಳ ಬಗ್ಗೆ ತಿಳಿಯುತ್ತಾ, ಶಾರ್ಟ್ ಸಿನೆಮಾಗಳನ್ನೂ ನಿರ್ದೇಶಿಸಿದರು. ಈ ನಡುವೆ ಶಾರ್ಟ್ ಸಿನಿಮಾವೊಂದರ ತಯಾರಿಯಲ್ಲಿದ್ದಾಗ ‘ನನ್ನ ಪ್ರಕಾರ’ ಸಿನಿಮಾದ ಕಥೆ ಹುಟ್ಟಿಕೊಂಡು, ಅದು ದೊಡ್ಡ ಚಿತ್ರವಾಗಿ ಮಾರ್ಪಟ್ಟಿತು!
ವಿನಯ್ ಅವರ ತಂದೆ ವಿಲ್ಸ್ ಸಂಸ್ಥೆಯಲ್ಲಿ ಮ್ಯಾನೇಜರಾಗಿದ್ದವರು. ತಾಯಿ ಹೌಸ್ ವೈಫ್. ಅಣ್ಣ ಸಾಫ್ಟ್ ವೇರ್ ಸಂಸ್ಥೆಯ ಉದ್ಯೋಗಿ. ಸಾಮಾನ್ಯಕ್ಕೆ ಮನೆಯವರ ಬೆಂಬಲವಿಲ್ಲದೆ ಇಷ್ಟು ಸಣ್ಣ ವಯಸ್ಸಿಗೇ ನಿರ್ದೇಶಕನಾಗಿ ನಿಲ್ಲೋದು ಕಷ್ಟ. ಈ ನಿಟ್ಟಿನಲ್ಲಿ ವಿನಯ್ ನಿಜಕ್ಕೂ ಅದೃಷ್ಟವಂತ. ಇವರು ಬಯಸಿದ ಎಲ್ಲದಕ್ಕೂ ಮನೆಯವರು ಸಹಕರಿಸಿದ್ದಾರೆ. ಅನಿಮೇಷನ್, ಗ್ರಾಫಿಕ್ಸ್, ಕ್ಯಾಮೆರಾದಂಥ ವಿಭಾಗಗಳಲ್ಲಿ ನೈಪುಣ್ಯತೆ ಪಡೆದು ನಿರ್ದೇಶಕನ ಸ್ಥಾನ ಅಲಂಕರಿಸಿರೋದು ವಿನಯ್ ಹೆಚ್ಚುಗಾರಿಗೆ ಎನ್ನಬಹುದು. ಇನ್ನು ನಿರ್ದೇಶಕ ವಿನಯ್ ಅವರಿಗೆ ನನ್ನ ಪ್ರಕಾರ ತಂಡದಲ್ಲಿ ಹುಲಿರಾಯ ಖ್ಯಾತಿಯ ಸಂಗೀತ ನಿರ್ದೇಶಕ ಅರ್ಜುನ್ ರಾಮ್, ಸಂಭಾಷಣೆಕಾರರಾಗಿ ಮನ್ವರ್ಷಿ, ಛಾಯಾಗ್ರಹಕರಾಗಿ ಮನೋಹರ್ ಜೋಷಿ, ಸಂಕಲನಕಾರರಾಗಿ ಸತೀಶ್, ಸಾಹಸ ನಿರ್ದೇಶಕರಾಗಿ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ನೃತ್ಯ ಸಂಯೋಜಕರಾಗಿ ಮದನ್, ಹರಿಣಿ, ನಾಗೇಶ್ ಸಾಥ್ ನೀಡಿದ್ದಾರೆ. ನನ್ನ ಪ್ರಕಾರ ಸಿನಿಮಾ ಇದೇ 23ಕ್ಕೆ ಬಿಡುಗಡೆಯಾಗಲಿದ್ದು, ಈ ಸಿನಿಮಾದ ಮೂಲಕ ವಿನಯ್ ಕನ್ನಡ ಚಿತ್ರರಂಗದ ಯಶಸ್ವೀ ನಿರ್ದೇಶಕನಾಗಿ ನೆಲೆಗೊಳ್ಳಲಿ ಅನ್ನೋದು ನಮ್ಮ ಆಶಯ.
No Comment! Be the first one.