“ಕಲಾವಿದರು, ಕಾರ್ಮಿಕರು, ತಂತ್ರಜ್ಞರು ದಿನದಿಂದ ದಿನಕ್ಕೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡೇ ಹೋಗುತ್ತಿದ್ದಾರೆ. ಯಾರೋ ಮೂರು ಜನ ನಿರ್ಮಾಪಕರು, ಸಂಸ್ಥೆಗಳು ಕೇಳಿದಷ್ಟು ಹಣ ಕೊಟ್ಟು ಅಭ್ಯಾಸ ಮಾಡಿವೆ. ಅದನ್ನೇ ಎಲ್ಲರಿಂದ ಬಯಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಎನ್ನುವ ಅಮಲು ಎಲ್ಲರನ್ನೂ ಹಳ್ಳ ಹಿಡಿಸುತ್ತಿದೆ. ಚಿತ್ರರಂಗದಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರದೇಹೋದರೆ ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ನಿರ್ಮಾಪಕರು ನೇಣು ಹಾಕಿಕೊಂಡು ಸಾಯಬೇಕಾಗುತ್ತದೆ…” – ಎರಡು ದಿನಗಳ ಹಿಂದಷ್ಟೇ ಸಿನಿಮಾ ಪತ್ರಕರ್ತರೊಂದಿಗೆ ಮಾತಾಡುತ್ತಾ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಆಡಿದ್ದ ಮಾತುಗಳಿವು… ಅದಾಗಿ ದಿನ ಕಳೆಯೋ ಹೊತ್ತಿಗೆ ಕನ್ನಡ ಕಿರುತೆರೆಯ ಶಕ್ತಿಶಾಲಿ ನಿರ್ಮಾಪಕ ಕಂ ನಿರ್ದೇಶಕ, ಅಶೋಕ ಬ್ಲೇಡ್ ಸಿನಿಮಾದ ಡೈರೆಕ್ಟರ್ ಕೂಡಾ ಆದ ವಿನೋದ್ ಧೋಂಡಾಳೆ ಕುತ್ತಿಗೆ ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ.
ಯಾರು ಇದಕ್ಕೆ ಕಾರಣ?
cinibuzz ಸಿನಿಮಾರಂಗದ ಸಣ್ಣ ಸಣ್ಣ ಸೂಕ್ಷ್ಮಗಳನ್ನೂ ಹೇಳುತ್ತಲೇ ಬಂದಿದೆ. ಈ ಕ್ಷೇತ್ರದಲ್ಲಿ ನಿರ್ಮಾಪಕ ಒಬ್ಬನನ್ನು ಬಿಟ್ಟು ಮಿಕ್ಕೆಲ್ಲರೂ ಕ್ಷೇಮವಾಗಿದ್ದಾರೆ. ಸುಭೀಕ್ಷವಾಗಿದ್ದಾರೆ. ಸಿನಿಮಾ ಅಂತಾ ಆರಂಭವಾಗುವ ಮುಂಚೆ ನಿರ್ದೇಶಕರು ಸೇರಿದಂತೆ ಒಂದಷ್ಟು ಮಂದಿ ನಿರ್ಮಾಪಕರಿಗೆ ಹೇಳೋದೇ ಬೇರೆ… ನಂತರ ಶೂಟಿಂಗ್ ಶುರುವಾಗುತ್ತಿದ್ದಂತೆ ಆಗೋದೇ ಬೇರೆ. ಹೇಳಿದ ಬಜೆಟ್ಟು ಅರ್ಧ ಚಿತ್ರೀಕರಣಕ್ಕೇ ಮುಗಿದುಹೋಗಿರುತ್ತೆ. ಶುರು ಮಾಡಿಬಿಟ್ಟಿದ್ದೇವಲ್ಲಾ ಅಂತಾ ಎಲ್ಲೆಲ್ಲಿಂದಲೋ ಹಣ ಹೊಂಚಿಕೊಂಡು ತಂದು ಸಿನಿಮಾ ಮುಗಿಸುತ್ತಾರೆ. ಇಲ್ಲಿ ನೋಡಿದರೆ ವ್ಯಾಪಾರವೆಲ್ಲಾ ಎಕ್ಕುಟ್ಟಿಹೋಗಿದೆ. ಓಟಿಟಿ ಸಂಸ್ಥೆಗಳು ಆರಂಭದಲ್ಲಿ ಆಸೆ ಹುಟ್ಟಿಸಿ ಈಗ ನಿರಾಸೆ ಮಾಡುತ್ತಿವೆ. ಟೀವಿ ವಾಹಿನಿಗಳು ಅಷ್ಟೊಂದು ಹಣ ಕೊಟ್ಟು ಸಿನಿಮಾ ಮಾಡೋದಕ್ಕಿಂತಾ ನಮ್ಮದೇ ಯಾವುದಾದರೂ ಕಂಟೆಂಟ್ ಕ್ರಿಯೇಟ್ ಮಾಡೋಣ ಅಂತಾ ಸುಮ್ಮನಾಗಿದ್ದಾರೆ. ಇನ್ನು ಥೇಟರ್ ಕಲ್ಚರ್ ಅಂತೂ ಬಹುತೇಕ ಸಾವನ್ನಪ್ಪಿದೆ. ಏನೇ ತಿಪ್ಪರಲಾಗ ಹಾಕಿದರೂ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳಾದರೂ ಬಂದರೆ ಒಳ್ಳೇದಾಗಬಹುದು ಅಂತಾ ಕಾದರೆ, ಇಲ್ಲಿರೋ ಮೂರು ಮತ್ತೊಂದು ಜನ ಸಿನಿಮಾ ಮಾಡೋದೇ ಮೂರು ವರ್ಷಕ್ಕೊಂದು!
ಒಂದು ಕಡೆ ವ್ಯಾಪಾರವಿಲ್ಲದೆ, ಸಿನಿಮಾ ನೋಡೋರಿಲ್ಲದೆ ಚಿತ್ರರಂಗ ಸೊರಗಿದೆ. ಮತ್ತೊಂದು ಕಡೆ ಕಾರ್ಮಿಕರು ತಂತ್ರಜ್ಞರ ಸಂಬಳ ಕಾಲ್ ಶೀಟು, ಕೈ ಶೀಟುಗಳ ಲೆಕ್ಕದಲ್ಲಿ ಏರುತ್ತಲೇ ಇದೆ. ವಾಣಿಜ್ಯ ಮಂಡಳಿಯಲ್ಲಿ ಹಾಲಿ ಕುಂತಿರುವ ಅಧ್ಯಕ್ಷ ಎನ್ನೆಮ್ ಸುರೇಶು ತಮ್ಮ ಪಟಾಲಮ್ಮನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಮಜಾ ಮಾಡಿಸೋದು, ಬಡಿದಾಡಿಸೋದು, ಯಾರೋ ಎಲೆಕ್ಷನ್ನಿಗೆ ನಿಂತರೆ ಹೋಗಿ ಪ್ರಚಾರ ಮಾಡಿಸೋದು, ಇನ್ಯಾವನೋ ಕೊಲೆಯಾಗಿ ಸತ್ತರೆ ಅವನ ಮನೆಗೆ ಹೋಗಿ ಚೆಕ್ಕು ವಿತರಿಸೋದು… ಹೀಗೆ ಬೇಡದ ಕೆಲಸಗಳನ್ನು ಮಾಡಿಕೊಂಡು ತಿರುಗುತ್ತಿದ್ದಾರೆ. ಐಸಿಯೂ ಬೆಡ್ಡಲ್ಲಿರುವ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಉಳಿಸಿಕೊಳ್ಳಲು ಯಾರೂ ಗಂಭೀರವಾಗಿ ಚಿಂತಿಸುತ್ತಿಲ್ಲ. ವೃತ್ತಿಪರ ನಿರ್ಮಾಪಕರು ಈಗಲಾದರೂ ಎದ್ದುನಿಲ್ಲಬೇಕು. ಸದ್ಯ ಬೆಳಿಗ್ಗೆ 8 ರಿಂದ ರಾತ್ರಿ 8ರ ತನಕದ ಕಾಲ್ ಶೀಟ್ ಮಾಡಬೇಕು. ಕೇರಳ ಮಾದರಿಯ ನಿಯಮಗಳನ್ನು ಜಾರಿಗೆ ತರಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದೆಲ್ಲಾ ಯಾವಾಗ ಕಾರ್ಯರೂಪಕ್ಕೆ ಬರುತ್ತವೋ ಗೊತ್ತಿಲ್ಲ. ಇನ್ನಷ್ಟು ಜನ ನಿರ್ಮಾಪಕರು ಜೀವ ಕಳೆದುಕೊಳ್ಳುವ ಮುಂಚೆ ನಿರ್ಮಾಪಕಸ್ನೇಹಿ ನಿಯಮಗಳು ಜಾರಿಯಾಗಲಿ…
-ಅರುಣ್
No Comment! Be the first one.