ವರ್ಷಗಳ ಹಿಂದೆ ಮುದ್ದು ಮನಸೇ ಹೆಸರಿನ ಸಿನಿಮಾವೊಂದು ಬಂದಿತ್ತು. ಅನಂತ್ ಶೈನ್ ನಿರ್ದೇಶನದ ಆ ಸಿನಿಮಾದ ಮೂಲಕ ಅರುಗೌಡ ಎಂಬ ಪಕ್ಕಾ ಕಮರ್ಷಿಯಲ್ ಹೀರೋ ಚಿತ್ರರಂಗಕ್ಕೆ ದಕ್ಕಿದ್ದರು. ಈಗ ಅದೇ ಅನಂತ್ ಶೈನ್ ಮತ್ತು ಅರು ಗೌಡ ಒಂದಾಗಿ ವಿರಾಟಪರ್ವ ರೂಪಿಸಿದ್ದಾರೆ. ಈಗಾಗಲೇ ಹೊರಬಂದಿರುವ ವಿರಾಟಪರ್ವ ಚಿತ್ರದ ಪೋಸ್ಟರುಗಳು ಸಾಕಷ್ಟು ಜನರನ್ನು ಸೆಳೆದಿವೆ. ಸ್ಕೆಚ್ ಆರ್ಟ್ಗಳ ಮೂಲಕವೇ ಸೃಷ್ಟಿಸಿರುವ ಈ ಪೋಸ್ಟರುಗಳು ಹೊಸ ಬಗೆಯಲ್ಲಿ ಮೂಡಿಬಂದಿರುವುದು ಅದಕ್ಕೆ ಕಾರಣ. ಈ ಸಿನಿಮಾದಲ್ಲಿ ಅರು ಗೌಡ ಅವರ ಜೊತೆಗೆ ಯಶ್ ಶೆಟ್ಟಿ, ಹೇಮಂತ್ ಸುಶೀಲ್, ಸಿದ್ದು ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬರೂ ಪ್ರತಿಭಾವಂತ ಕಲಾವಿದರೇ ಆಗಿದ್ದಾರೆ. ಹರಿವು ಮತ್ತು ನಾತಿಚರಾಮಿ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಆ ಮೂಲಕ ಕನ್ನಡ ಚಿತ್ರಗಳನ್ನು ಮತ್ತೊಂದು ಲೆವೆಲ್ಲಿಗೆ ತೆಗೆದುಕೊಂಡುಹೋಗಬಲ್ಲ ನಿರ್ದೇಶಕ ಎನಿಸಿಕೊಂಡಿರುವ ಮಂಸೋರೆ ಕೂಡಾ ವಿರಾಟಪರ್ವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಚೈತ್ರ ಕೊಟೂರು, ಪ್ರಕಾಶ್ ಹೆಗ್ಗೋಡು, ರಮೇಶ್ ಪಂಡಿತ್, ಪುಂಗ, ಅನ್ವಿತಾ ಸಾಗರ್, ವಿನಾಯಕ ಜೋಷಿ ಮುಂತಾದ ಸಾಕಷ್ಟು ಕಲಾವಿದರು ವಿರಾಟಪರ್ವದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸಂದೀಪ್ ಬಿ.ಹೆಚ್. ಮತ್ತು ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಸಂಬಂಧಗಳು ಶಿಥಿಲವಾದಾಗ ಅದನ್ನು ಗಟ್ಟಿಗೊಳಿಸಿಕೊಳ್ಳಲು ಏನೆಲ್ಲಾ ಮಾಡಬೇಕು ಅನ್ನೋದು ಚಿತ್ರದ ತಿರುಳು.
ಈಗ ರಿಲೀಸ್ ಆಗಿರುವ ಟೀಸರನ್ನು ನೋಡಿದರೆ ಗೊತ್ತಾಗುತ್ತದೆ, ಕನ್ನಡದ ಮಟ್ಟಿಗೆ ಇದೊಂದು ಮೈಲಿಗಲ್ಲು ಸೃಷ್ಟಿಸುವ ಸಿನಿಮಾವಾಗುತ್ತದೆ ಎಂದು. ಇತ್ತೀಚೆಗೆ ಬರುತ್ತಿರುವ ಸದಭಿರುಚಿಯ ಸಿನಿಮಾಗಳಲ್ಲಿ ಕೆಲಸ ಮಾಡಿದ ಸಾಕಷ್ಟು ಜನ ತಂತ್ರಜ್ಞರು ಮತ್ತು ಕಲಾವಿದರೆಲ್ಲಾ ಇಲ್ಲಿ ಒಂದೆಡೆ ಸೇರಿದ್ದಾರೆ. ಯಾವ್ಯಾವುದೋ ಸಿನಿಮಾಗಳಲ್ಲಿ ಗುರುತಿಸಿಕೊಳ್ಳಲು ಒಪ್ಪದ ಪ್ರತಿಭಾವಂತರೆಲ್ಲಾ ಇಲ್ಲಿ ಒಂದೇ ತಕ್ಕಡಿಯಲ್ಲಿ ನಿಂತಿರುವುದರಿಂದ ವಿರಾಟಪರ್ವದ ತೂಕ ಹೆಚ್ಚಾಗಿದೆ. ಅದು ತೆರೆ ಮೇಲೆ ಕೂಡಾ ಸಾಬೀತಾಗಬೇಕಿದೆ ಅಷ್ಟೇ.
ಎಸ್.ಆರ್. ಮೀಡಿಯಾ ಲಾಂಛನದಲ್ಲಿ ಸುನೀಲ್ ರಾಜ್ ನಿರ್ಮಿಸಿರುವ ಈ ಚಿತ್ರಕ್ಕೆ ಬೇಸಿಗೆ, ಚಳಿ ಮತ್ತು ಮಳೆಗಾಲಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅರವತ್ತಕ್ಕೂ ಹೆಚ್ಚು ಕಲಾವಿದರನ್ನು ಬಳಸಿಕೊಂಡು ೧೩೦ಕ್ಕಿಂತಾ ಅಧಿಕ ಲೊಕೇಶನ್ನುಗಳಲ್ಲಿ ಶೂಟಿಂಗ್ ನೆರವೇರಿದೆ. ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಯೋಗರಾಜ್ ಭಟ್ಟರು ಹಾಡುಗಳನ್ನು ಬರೆದಿದ್ದಾರೆ. ಯು.ಡಿ.ವಿ. ವೆಂಕಿ ಸಂಕಲನ, ವಿಕ್ರಮ್ ಮೋರ್ ಮತ್ತು ಮಾಸ್ ಮಾದ ಸಾಹಸ, ಮೋಹನ್ ಕೊರಿಯೋಗ್ರಫಿ ಇರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತವಿದೆ.
ಅನಂತ್ ಶೈನ್ ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಾರೆ ಅನ್ನೋದು ಮುದ್ದು ಮನಸೇ ಚಿತ್ರದಲ್ಲೇ ಗೊತ್ತಾಗಿತ್ತು. ಈಗ ವಿರಾಟಪರ್ವ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎನ್ನುವ ವಿಚಾರವನ್ನು ಈಗಷ್ಟೇ ಅನಾವರಣಗೊಂಡಿರುವ ಟೀಸರು ಸಾರಿ ಹೇಳುತ್ತಿದೆ.
No Comment! Be the first one.