ನಗುವಾಗ ಎಲ್ಲ ನೆಂಟರು … ಅಳುವಾಗ ಯಾರೂ ಇಲ್ಲ… ಗೀತಪ್ರಿಯ ಬರೆದ ಈ ಸಾಲು ಅಕ್ಷರಶಃ ಅನ್ವಯವಾಗಿರೋದು ನಿರ್ಮಾಪಕ ಬಿ. ವಿಜಯ್ ಕುಮಾರ್ ಅವರ ದುರಂತ ಬದುಕಿಗೆ!
ಒಂದು ಕಾಲಕ್ಕೆ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿ ಗುರುತಿಸಿಕೊಂಡು, ಕ್ರಮೇಣ ಅವರ ಬಲಗೈ ಬಂಟನ ಸ್ಥಾನ ಪಡೆದವರು ವಿಜಯ್ ಕುಮಾರ್. ನಾಗರಹಾವು ಚಿತ್ರವನ್ನು ಬರೋಬ್ಬರಿ ನೂರ ಎಂಟು ಸಲ ನೋಡಿ ದಾಖಲೆ ನಿರ್ಮಿಸಿದ್ದರು. ವಿಷ್ಣುವರ್ಧನ್ ಅವರಿಗೆ ಭಾರೀ ಗಾತ್ರದ ಹಾರ ಹಾಕಿದವರು. ಅಭಿಮಾನದ ಕಾರಣದಿಂದ ವಿಷ್ಣು ವಿಶ್ವಾಸ ಗಳಿಸಿದ್ದ ವಿಜಯ್ ಕುಮಾರ್ ಮುಂದೆ ಇದೇ ವಿಷ್ಣು ಅವರ ಪಾಲುದಾರರೂ ಆದದ್ದು ಈಗ ಇತಿಹಾಸ.
ಬರೋಬ್ಬರಿ ಮೂವತ್ತೆಂಟು ವರ್ಷಗಳ ಕಾಲ ವಿಷ್ಣುವರ್ಧನ್ ಅವರ ಜೊತೆಗಿದ್ದು, ಅವರ ದೇಖರೇಖಿ ನೋಡಿಕೊಂದವರು ವಿಜಯ್ ಕುಮಾರ್. ಮೂಲತಃ ಬೆಂಗಳೂರಿನ ನಾಗವಾರದ ಕಡೆಯವರಾದ ವಿಜಯ್ ಕುಮಾರ್ ತಂದೆ ತಾಯಿಗೆ ಹುಟ್ಟಿದ ಹನ್ನೆರಡು ಜನ ಮಕ್ಕಳಲ್ಲಿ ಒಂಭತ್ತನೆಯವರು. ವಿಷ್ಣು ಅಭಿಮಾನಕ್ಕೇ ಬದುಕು ಮೀಸಲಿಟ್ಟ ವಿಜಯ್ ಕುಮಾರ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವರು.
ಆಗೆಲ್ಲಾ ಸಿನಿಮಾದ ನೆಗೆಟೀವ್ ಪಡೆದು ಫೈನಾನ್ಸ್ ನೀಡುವ ವ್ಯವಹಾರವಿತ್ತು. ವಿಜಯ್ ಕುಮಾರ್ ನೂರಕ್ಕೂ ಅಧಿಕ ಸಿನಿಮಾಗಳ ನೆಗೆಟೀವ್ ಹಕ್ಕಿನ ಮೇಲೆ ಸಾಲ ನೀಡಿದ್ದರು. ಮೌನ ಗೀತೆಯಿಂದ ಆರಂಭಿಸಿ, ಲಯನ್ ಜಗಪತಿ ರಾವ್, ಅವತಾರ ಪುರುಷ, ಜಗದೇಕ ವೀರ, ಸಿಂಹಾದ್ರಿಯ ಸಿಂಹ ಮತ್ತು ಸ್ವಚ್ಚ ಭಾರತ ಸಿನಿಮಾಗಳನ್ನು ವಿಜಯ್ ಕುಮಾರ್ ನಿರ್ಮಿಸಿದ್ದರು. ಕೆ.ಎಸ್.ಐ.ಸಿ ಛೇರ್ಮನ್ ಆಗಿದ್ದುಕೊಂಡೇ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಏಕಕಾಲದಲ್ಲಿ ಸೇವೆ ಸಲ್ಲಿಸಿದ ಮೊದಲಿಗರಿವರು.
ಮನೆಯಿಂದ ಹೊರಗೆ ಹೊರಟರೆ ಜೇಬಲ್ಲಿ ಮಿನಿಮಮ್ ಐವತ್ತು ಸಾವಿರದಷ್ಟು ದುಡ್ಡಿರಬೇಕು, ಕಾರಲ್ಲಿ ನಾಲ್ಕೈದು ಲಕ್ಷದ ಹಣದ ಕಂತೆಗಳಿರಬೇಕು ಎನ್ನುತ್ತಿದ್ದವರು ವಿಜಯ್. ಸದಾ ಇವರ ಸುತ್ತ ಜನ ಗಿಜಿಗುಡುತ್ತಿದ್ದರು. ಮೀಡಿಯಾದವರೊಂದಿಗೂ ಒಳ್ಳೇ ಬಾಂಧವ್ಯ ಇರಿಸಿಕೊಂಡಿದ್ದ ವಿಜಯ್ ಕುಮಾರ್ ಕೂಡಾ ಸ್ಟಾರ್ ಥರಾ ಪ್ರಚಾರವನ್ನೂ ಪಡೆಯುತ್ತಿದ್ದದ್ದು ನಿಜ. ಕೋಟ್ಯಂತರ ರುಪಾಯಿ ರಿಯಲ್ ಎಸ್ಟೇಟ್ ವ್ಯವಹಾರ, ಸಿನಿಮಾ ವಹಿವಾಟು, ಫೈನಾನ್ಸು, ಅಧಿಕಾರ… ಹೀಗೆ ಬದುಕಿದ್ದ ವಿಜಯ್ ಕುಮಾರ್ ಮೇಲೆ ಅದ್ಯಾರ ಕಣ್ಣು ಬಿತ್ತೋ? ಅಥವಾ ಸ್ವಯಂಕೃತ ಅಪರಾಧಗಳೇ ಉರುಳಾಯಿತೋ ಗೊತ್ತಿಲ್ಲ. ನೋಡನೋಡುತ್ತಿದ್ದಂತೇ ವಿಜಯ್ ಕಟ್ಟಿನಿಲ್ಲಿಸಿದ್ದ ಕೋಟೆ ದೊಪದಪನೆ ನೆಲಕ್ಕುರುಳಿತು.
ಸಾಹಸಸಿಂಹ ವಿಷ್ಣುವರ್ಧನ್ ಅವರು ಸಾಕ್ಸ್ ಇಂಡಸ್ಟ್ರಿ ಆರಂಭಿಸಿದ್ದರಲ್ಲಾ ಅದರಲ್ಲಿ ವಿಜಯ್ ಕುಮಾರ್ ಕೂಡಾ ಪಾಲುದಾರರಾಗಿದ್ದರು. ಆದರೆ ಆ ಉದ್ಯಮ ಮೇಲೇಳದಂತೆ ನೆಲಕಚ್ಚಿತು. ನಂದ ಥೇಟರ್ ಬಳಿ ದೊಡ್ಡ ಜಾಗ ಖರೀದಿಸಿ ಅಲ್ಲಿ ಬೃಹತ್ ಕಮರ್ಷಿಯಲ್ ಕಟ್ಟಡ ಕಟ್ಟುವ ಪ್ಲಾನು ಮಾಡಿದರು. ಅದರಲ್ಲಿ ವಿಷ್ಣು, ಭಾರತಿ, ಅಂಬರೀಶ್, ಸುಮಲತಾ, ರಮೇಶ್ ಭಟ್ ತಲಾ ಎಪ್ಪತ್ತೈದು ಲಕ್ಷ ರುಪಾಯಿ ಇನ್ವೆಸ್ಟ್ ಮಾಡಿದ್ದರು. ಆದರೆ ಅದೇನೋ ಲಿಟಿಗೇಷನ್ ಆಗಿ ನೀರಿನ ಜೊತೆಗೆ ಚೊಂಬೂ ಹೋಯಿತು ಎನ್ನುವಂತೆ ಹಾಕಿದ ಬಂಡವಾಳದಲ್ಲಿ ನಾಲ್ಕಾಣೆಯೂ ವಾಪಸ್ಸು ಬರಲಿಲ್ಲ. ನಂಬಿದ್ದವರೆಲ್ಲಾ ಮುನಿಸಿಕೊಳ್ಳಲು ಇದು ಕಾರಣವಾಯಿತು. ಹೇಗಾದರೂ ಮಾಡಿ ಮೇಲೇಳಬೇಕು ಅಂತಾ ಫೈನಾನ್ಸ್ ಸಂಸ್ಥೆಯೊಂದನ್ನು ಆರಂಭಿಸಿದರು. ಅದು ಬ್ಲೇಡ್ ಕಂಪನಿ ಅಂತಾ ಸಾಬೀತಾಗಿ ಮಾಧ್ಯಮದಲ್ಲಿ ಸುದ್ದಿಯಾಯಿತು. ಅಲ್ಲಿಗೆ ವಿಜಯ್ ಕುಮಾರ್ ಎಂದಿಗೂ ಎದ್ದು ನಿಲ್ಲಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅಕ್ಷರಶಃ ಬರ್ಬಾದಾಗಿದ್ದರು. ಸಾಯಿಪ್ರಕಾಶ್ ಅವರ ನೂರನೇ ಸಿನಿಮಾವನ್ನು ನಿರ್ಮಿಸಬೇಕು ಎನ್ನುವ ಅವರ ಕನಸು ಕೂಡಾ ನನಸಾಗಲಿಲ್ಲ.
ಇಷ್ಟೆಲ್ಲಾ ಲುಕ್ಸಾನು ಅನುಭವಿಸಿ, ನಂಬಿಕೆ ಕೆಡಿಸಿಕೊಂಡೆ ಎನ್ನುವ ನೋವಿನಲ್ಲಿದ್ದ ವಿಜಯ್ ಕುಮಾರ್ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದುಬಿಟ್ಟರು. ಸದಾ ವೈಟ್ ಅಂಡ್ ವೈಟ್ನಲ್ಲಿ, ಜೇಬಿನ ತುಂಬಾ ನೋಟು ತುಂಬಿಕೊಂಡು ಓಡಾಡುತ್ತಿದ್ದ ವಿಜಯ್ ಕುಮಾರ್ ನಿಜಕ್ಕೂ ಬರಿಗೈ ದಾಸನಾದರು. ಬಟ್ಟೆ ಮಾತ್ರವಲ್ಲದೆ, ಮನಸ್ಥಿತಿ, ಪರಿಸ್ಥಿತಿಗಳೂ ಸುಕ್ಕುಗಟ್ಟಿದವು. ಇದ್ದಾಗ ದಾನ ಧರ್ಮ ಮಾಡಿದ ಕೈಗೆ ಬಹಿರಂಗವಾಗಿ ದೇಹಿ ಅನ್ನಲು ಮನಸ್ಸಾಗಲಿಲ್ಲ. ತೀರಾ ಆಪ್ತರ ಬಳಿ ಕಷ್ಟ ಹೇಳಿಕೊಂಡು ಐದು-ಹತ್ತು ಸಾವಿರಕ್ಕೂ ಅಂಗಲಾಚುವ ಸಂದರ್ಭಗಳು ಎದುರಾದವು.
ದೊಡ್ಡವರ ಸಹವಾಸ, ಕೋಟಿಗಟ್ಟಲೆ ವ್ಯವಹಾರ, ಅರಸೊತ್ತಿಗೆಯನ್ನು ಕಂಡಿದ್ದ ವಿಜಯ್ ಕುಮಾರ್ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ…