ಯಾರೋ ಕಂಡ ಕನಸನ್ನು ಕೂಡಾ ನನಸು ಮಾಡಿಕೊಡುತ್ತಿದ್ದ ಆ ಕಣ್ಣುಗಳು ಶಾಶ್ವತವಾಗಿ ಮುಚ್ಚಿ ಮಲಗಿವೆ. ಛಾಯಾಗ್ರಾಹಕ ಕೆ.ಎಂ. ವಿಷ್ಣುವರ್ಧನ್ ವಿಧಿವಶರಾಗಿದ್ದಾರೆ. ಕಳೆದ ಏಳೆಂಟು ತಿಂಗಳಿನಿಂದ ಬಾಧಿಸುತ್ತಿದ್ದ ಕ್ಯಾನ್ಸರ್ ಮಾರಿ ಅವರನ್ನು ಬಲಿ ತೆಗೆದುಕೊಂಡಿದೆ.
ತುಮಕೂರಿನ ಕುದೂರು ಮೂಲದ ವಿಷ್ಣುವರ್ಧನ್ ಎಸ್.ಜೆ. ಪಾಲಿಟೆಕ್ನಿಕ್ ಕಾಲೇಜಿನ 1991-93ರ ಬ್ಯಾಚ್’ನಲ್ಲಿ ಛಾಯಾಗ್ರಹಣ ತರಬೇತಿ ಪಡೆದವರು. ನಂತರ ವಿಷ್ಯುಯಲ್ ವರ್ಲ್ಡ್ ಎಂಬ ವಿಡಿಯೋ ಕಾರ್ಪೊರೇಟ್ ಸಂಸ್ಥೆಯಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಪ್ರಾರಂಭಿಸಿದ್ದರು. ಆದರೆ ಸಿನಿಮಾ ಛಾಯಾಗ್ರಾಹಕರಾಗಬೇಕೆನ್ನುವ ತುಡಿತದಿಂದ ಇದ್ದ ಕಾರ್ಪೊರೇಟ್ ಕೆಲಸವನ್ನು ಬಿಟ್ಟುಬಂದು ಕನ್ನಡ ಚಿತ್ರರಂಗದಲ್ಲಿ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಲು ಶುರು ಮಾಡಿದರು. ಆರ್.ಮಂಜುನಾಥ್. ಬಿ.ಎಸ್. ಮಂಜುನಾಥ್ ಮತ್ತು ಆರ್.ಗಿರಿ ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿಕೊಂಡೇ ಕ್ರಮೇಣ ಸ್ವತಂತ್ರ ಛಾಯಾಗ್ರಾಹಕರಾಗಿಯೂ ಅವಕಾಶ ಪಡೆದರು. ವಿಷ್ಣುವರ್ಧನ್ ಅವರು ಕ್ಯಾಮೆರಾ ಕೆಲಸ ನಿಭಾಯಿಸಿದ್ದ ‘ನೀನ್ಯಾರೆ?’ ಸಿನಿಮಾದ ಅದ್ಭುತ ಛಾಯಾಗ್ರಹಣಕ್ಕೆ ರಾಜ್ಯಪ್ರಶಸ್ತಿಯೂ ಲಭಿಸಿತ್ತು. ಈ ಚಿತ್ರದಲ್ಲಿ ಚಲಿಸುವ ಮೋಡಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಮೂಲಕ ತೆರೆಮೇಲೆ ಹಿಡಿದು ನಿಲ್ಲಿಸಿದ್ದ ವಿಷ್ಣು ಅವರ ಕ್ಯಾಮೆರಾ ಮೋಡಿಗೆ ನೋಡಿದವರೆಲ್ಲಾ ಫಿದಾ ಆಗಿದ್ದರು. ನಂತರ ಓಂ ಪ್ರಕಾಶ್ ರಾವ್ ಟೀಮಿನಲ್ಲಿ ಗುರುತಿಸಿಕೊಂಡಿದ್ದರು. ಯೋಧ, ಹುಬ್ಬಳ್ಳಿ, ರಾಜಾಹುಲಿ ಸೇರಿದಂತೆ ಸರಿಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಿಗೆ ವಿಷ್ಣುವರ್ಧನ್ ಛಾಯಾಗ್ರಹಣವಿದೆ. ಸದ್ಯ ವಿಜಯ ಪ್ರಸಾದ್ ಅವರ ತೋತಾಪುರಿ ಚಿತ್ರಕ್ಕೂ ಕಾರ್ಯನಿರ್ವಹಿಸುತ್ತಿದ್ದ ವಿಷ್ಣು ದಿಢೀರನೆ ತಮ್ಮ ಕ್ಯಾಮೆರಾ ಕಣ್ಣನ್ನು ಮುಚ್ಚಿ ಎದ್ದು ಹೊರಟಿದ್ದಾರೆ.
ಆಗಸ್ಟ್ 23, 1974ರಲ್ಲಿ ಜನಿಸಿದ್ದ ವಿಷ್ಣುವರ್ಧನ್ ಅವರಿಗೀಗ ನಲವತ್ನಾಲ್ಕು ವರ್ಷ ವಯಸ್ಸು. ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿದ್ದ ವಿಷ್ಣುವರ್ಧನ್ ಕಷಡುಕಷ್ಟದಿಂದ ಮೇಲೆ ಬಂದವರು. ಛಾಯಾಗ್ರಹಣದ ಕುರಿತು ಆಳವಾದ ಅಧ್ಯಯನ ನಡೆಸುತ್ತಾ, ಸಾಕಷ್ಟು ಪ್ರಯೋಗಗಳನ್ನು ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿದ್ದವರು. ಚಿತ್ರೀಕರಣದ ಸಂದರ್ಭದಲ್ಲಿ ಯಾವ ಗೊಂದಲಗಳಿಗೂ ಬೀಳದೆ ತೀರಾ ಕಾನ್ಫಿಡೆಂಟ್ ಆಗಿ ಶೂಟ್ ಮಾಡುತ್ತಿದ್ದವರು. ವಿಷ್ಣುವರ್ಧರಂಥಾ ಪ್ರತಿಭಾವವಂತ ಛಾಯಾಗ್ರಾಹಕ ನಿಜಕ್ಕೂ ಕನ್ನಡ ಚಿತ್ರರಂಗದ ಆಸ್ತಿ. ಅವರು ಇಲ್ಲವಾಗಿರುವುದರ ಬಗ್ಗೆ ಅವರ ಸಹಪಾಠಿಯೂ ಆದ ಛಾಯಾಗ್ರಾಹಕ ಸುಜ್ಞಾನ್, ಸುರೇಶ್ ಬಾಬು, ಜಗದೀಶ್ ವಾಲಿ, ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಕಿರಣ್ ಹಂಪಾಪುರ ಮತ್ತು ವಿಷ್ಣು ಅವರೊಟ್ಟಿಗೆ ಸಹಾಯಕನಾಗಿ ಕೆಲಸ ಮಾಡಿ ಇವತ್ತು ‘ಟಕ್ಕರ್’ ಚಿತ್ರದ ಮೂಲಕ ನಾಯಕನಟನಾಗಿ ಪರಿಚಯಗೊಳ್ಳುತ್ತಿರುವ ಮನೋಜ್, ಕಾರಂಜಿ ಶ್ರೀಧರ್ ಸೇರಿದಂತೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
#
No Comment! Be the first one.