2017 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ ನಟ ವಿಶೃತ್ ನಾಯಕ್ ಮಾಧ್ಯಮದ ಮುಂದೆ ತಮ್ಮ ಸಿನಿ ಪಯಣದ ಬಗ್ಗೆ ಮಾಹಿತಿ ನೀಡಿ , ತಮಗೆ ನೆರವಾದವರಿಗೆ ಅಭಿನಂದನೆ ಸಲ್ಲಿಸಿದರು. ನಾನು ಮೂಲತಃ ಕುಣಿಗಲ್ ನ ಹೊಸಕೆರೆಯವನು. ಅಲ್ಲಿಂದ ಬೆಂಗಳೂರಿಗೆ ಬಂದೆ. ಟ್ರಾವೆಲ್ ಒಂದರ ಓನರ್ ಆದೆ. ಕಾರಣಾಂತರದಿಂದ ಅದನ್ನು ಮಾರಿದೆ. ನಂತರ ಮುಂದೇನು? ಯೋಚಿಸುತ್ತಿದಾಗ, ನನ್ನ ಹೆಂಡತಿ ನನ್ನನ್ನು ಕಾನ್ಫಿಡಾಗೆ ಸೇರಿಸಿದಳು. ಅಲ್ಲಿ ಹಿರಿಯ ನಿರ್ದೇಶಕರಾದ ಸಿದ್ದಲಿಂಗಯ್ಯ, ನಾಗಾಭರಣ, ಕೋಡ್ಲು ರಾಮಕೃಷ್ಣ  ಅವರಂತಹ ದಿಗ್ಗಜರ ಮಾರ್ಗದರ್ಶನ ದೊರೆಯಿತು. ನಂತರ ನಿರ್ದೇಶಕನಾದೆ. ನನಗೆ ಬರವಣಿಗೆಯಲ್ಲಿ ಆಸಕ್ತಿ ಹೆಚ್ಚು. ಓದುವ ಹವ್ಯಾಸ ನನಗೆ ಬೆಳೆದಿದ್ದು, ರವಿ ಬೆಳಗೆರೆ ಅವರಿಂದ.

ಆ ನಂತರ ನನ್ನ ನಿರ್ದೇಶನದ  “ಮಂಜರಿ” ಚಿತ್ರ ಆರಂಭವಾಯಿತು. ಮೊದಲು ನಾನು ನಿರ್ದೇಶನ ಮಾತ್ರ ಮಾಡುವುದೆಂದು ತೀರ್ಮಾನವಾಗಿತ್ತು. ನನ್ನ ಅಭಿನಯದ ಪಾತ್ರ ಬೇರೊಬ್ಬರು ಮಾಡಬೇಕಿತ್ತು. ಕೆಲವು ಕಾರಣದಿಂದ ಅವರು ಮಾಡುವುದು ತಪ್ಪಿ ಹೋಯಿತು. ಆಗ ನಿರ್ಮಾಪಕ ಶಂಕರ್ ಅವರು ಆ ಪಾತ್ರವನ್ನು ನನಗೆ ಮಾಡಲು ಹೇಳಿದರು.ನಾನೇ ಅಭಿನಯಿಸಿದೆ. ಆಗ ಕನಸಿನಲ್ಲೂ ನನಗೆ ಪ್ರಶಸ್ತಿ ಬರುತ್ತದೆ ಎಂದು ಅಂದು ಕೊಂಡಿರಲಿಲ್ಲ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅನಂತು ಎಂಬುವರು ನನ್ನ ಕರೆದು, ರಾಜ್ಯ ಪ್ರಶಸ್ತಿಗೆ ನೊಂದಾಯಿಸಿದ್ದೀರಾ?  ಅಂದರು. ಇಲ್ಲ ಅಂದೆ. ಮೊದಲು ನೊಂದಾಯಿಸಿ ಎಂದರು. ನಾನು ಪ್ರಶಸ್ತಿಗೆ ಅಪ್ಲೈ ಮಾಡುವಾಗ ಕೂಡ ನನಗೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಟಿ ರೂಪಿಕಾ ಅವರಿಗೂ ಅಥವಾ ಬೇರೆ ಯಾರಿಗೋ ಬರುತ್ತದೆ ಅಂದುಕೊಂಡೆ. ನಂತರ ಆತ್ಮೀಯರೊಬ್ಬರ ಮೂಲಕ ನನಗೆ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಸಂತೋಷವಾಯಿತು. ವಿಭಿನ್ನ  ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಹೆಚ್ಚಿತ್ತು. ಈ ಪ್ರಶಸ್ತಿ ಬರಲು ಕಾರಣರಾದ ನಿರ್ಮಾಪಕರೂ ಸೇರಿದಂತೆ ನನ್ನ ತಂಡಕ್ಕೆ ಹಾಗೂ ನನ್ನ ಹೆಂಡತಿಗೆ ಧನ್ಯವಾದ. ಈಗ ಜೆ.ಕೆ.ಅವರ ಅಭಿನಯದ “ಕಾಡ” ಹಾಗೂ “ಕಾಲ ನಾಗಿಣಿ” ಚಿತ್ರಗಳು ಕೂಡ ಬಿಡುಗಡೆ ಹಂತದಲ್ಲಿದೆ.

ನನ್ನ ಹಾರೈಸಲು ಬಂದಿರುವ ಗುರು ಸಮಾನರಾದ ಭಾ.ಮ.ಹರೀಶ್,  ನಟ ಜೆ.ಕೆ, ನಿರ್ಮಾಪಕ ಶಂಕರ್, ಜಗದೀಶ್ ಅವರಿಗೆ ಅಭಿನಂದನೆ ಸಲ್ಲಿಸಿದರು ರಾಜ್ಯ ಪ್ರಶಸ್ತಿ ವಿಜೇತ ನಟ ವಿಶೃತ್ ನಾಯಕ್. ಶ್ರೇಷ್ಠ ನಟ ಪ್ರಶಸ್ತಿ ಪಡೆಯುವುದು ಅಷ್ಟು ಸುಲಭವಲ್ಲ. ಪೈಪೋಟಿಗೆ ಸಾಕಷ್ಟು ಜನ ಇರುತ್ತಾರೆ. ಅಂತಹುದರಲ್ಲಿ ವಿಶೃತ್ ನಾಯಕ್ ಅವರಿಗೆ ಪ್ರಶಸ್ತಿ ಬಂದಿರುವು ಖುಷಿ ತಂದಿದೆ ಎಂದರು ಭಾ.ಮ.ಹರೀಶ್. ನಮ್ಮ ಚಿತ್ರದಲ್ಲಿ ಅಭಿನಯಿಸಲು ಒಪ್ಪಿ, ಈಗ ಪ್ರಶಸ್ತಿ ಪಡೆದುಕೊಂಡಿರುವ ವಿಶೃತ್ ನಾಯಕ ಅವರಿಂದ ನಮ್ಮ ಚಿತ್ರಕ್ಕೂ ಉತ್ತಮ ಹೆಸರು ಬಂದಿದೆ. ಒಳ್ಳೆಯದಾಗಲಿ ಎಂದರು ನಿರ್ಮಾಪಕ ಶಂಕರ್.

ಒಬ್ಬ ನಟನಿಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಬಂದರೆ, ಅವರ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ ಎಂದು ಗೆಳೆಯ ವಿಶೃತ್ ನಾಯಕ್ ಅವರಿಗೆ ಶುಭಕೋರಿದರು ನಟ ಜೆ.ಕೆ. ಗಂಡನ ಯಶಸ್ಸಿನ ಹಿಂದೆ ಹೆಂಡತಿ ಇರುತ್ತಾಳೆ ಎನ್ನುತ್ತಾರೆ. ಆದರೆ ನನ್ನ ಎಲ್ಲಾ ಕಾರ್ಯಗಳ ಹಿಂದೆ ನನ್ನ ಪತಿ ವಿಶೃತ್ ನಾಯಕ್ ಇರುತ್ತಾರೆ. ನಾನು ಪ್ರೇರಣ ಎಂಬ ಸಂಸ್ಥೆ ಮೂಲಕ ಸಾಕಷ್ಟು ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇನೆ. ಇದಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದೇನೆ. ಈಗ ವಿಶೃತ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ ಅಭಿನಂದನೆಗಳು ಎಂದರು ವಿಶೃತ್ ನಾಯಕ್ ಅವರ ಮಡದಿ ಮೇಘನಾ ಜೋಯಿಸ್.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಧೀರನ್ ಫಸ್ಟ್ ಲುಕ್ ಸಿಂಪಲ್ ಸುನಿ ಬಿಡುಗಡೆ

Previous article

ನಾನು ಹುಟ್ಟಿದ್ದು ಮಂಡಿ ಮೊಹಲ್ಲಾದಲ್ಲಿ!

Next article

You may also like

Comments

Leave a reply

Your email address will not be published. Required fields are marked *