ಸದಾ ಚಟುವಟಿಕೆಯಿಂದ ಇರುವ ಯಾರಿಗೇ ಆದರೂ ಈ ಟೆಲಿ ಮಾರ್ಕೆಟಿಂಗ್‌ ಕಾಲ್‌ ಗಳು ಟಾರ್ಚರ್‌ ಅನ್ನಿಸಿರುತ್ತೆ. ಲೋನು, ಕ್ರೆಡಿಟ್‌ ಕಾರ್ಡು ಇನ್ನೊಂದು ಮತ್ತೊಂದರ ಹೆಸರಲ್ಲಿ ಬರುವ ಕರೆಗಳು ರೇಜಿಗೆ ಹುಟ್ಟಿಸಿರುತ್ತವೆ. ಹೀಗೆ ಬರುವ ಬೇಡದ ಕರೆಗಳನ್ನು ಸ್ಟಾಪ್‌ ಮಾಡಿಸುತ್ತೇನೆಂದು ಒಬ್ಬಳು ಕಾಲ್‌ ಮಾಡುತ್ತಾಳೆ. ಅವಳ ದನಿ ಕೇಳುತ್ತಿದ್ದಂತೇ ಹುಡುಗನ ಮನಸ್ಸಲ್ಲಿ ಸೋನೆ ಮಳೆ ಸುರಿಯಲು ಶುರುವಾಗುತ್ತದೆ. ಅದಾಗಲೇ ಮದುವೆಯಾಗಲು ಹೆಣ್ಣು ಹುಡುಕುತ್ತಿದ್ದವನ ಬದುಕಿಗೆ ತಾನಾಗೇ ಒಲಿದುಬಂದ ಸಂಬಂಧ ಸುಂದರವೆನಿಸುತ್ತದೆ. ಭೇಟಿ, ಮದುವೆ ಎಲ್ಲವೂ ಪಟಪಟನೆ ಘಟಿಸುತ್ತದೆ.

ಆತ ಯುವ ಉದ್ಯಮಿ ವಿಲಾಸ್‌ ರಾವ್. ಔಷಧ ತಯಾರಿಕೆ ಮತ್ತು ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದು ಸಣ್ಣ ವಯಸ್ಸಿಗೇ ಸಾಧನೆ ಮಾಡಿದವನು. ಕಡಿಮೆ ಅವಧಿಯಲ್ಲಿ ಹೆಚ್ಚು ದುಡಿದಿಟ್ಟಿರುತ್ತಾನೆ. ಅಂದುಕೊಂಡಂತೇ ಮದುವೆಯೂ ಆಗುತ್ತದೆ. ಬದುಕು ಸ್ವರ್ಗದಂತಾಯಿತು ಅಂದುಕೊಳ್ಳುವ ಹೊತ್ತಿಗೇ ಶುರುವಾಗುತ್ತದೆ ಅಸಲೀ ವರಸೆ. ತಾನೊಬ್ಬಳು ಸ್ತ್ರೀವಾದಿ, ಸ್ವತಂತ್ರವಾಗಿ ಬದುಕಲು ಬಯಸಿದವಳು ಅಂತೆಲ್ಲಾ ಹೇಳಿಕೊಂಡ ಹುಡುಗಿ ಹಂತ ಹಂತವಾಗಿ ಹುಡಗನ ಬದುಕನ್ನು ಇಸ್ತ್ರಿ ಮಾಡಲು ಆರಂಭಿಸುತ್ತಾಳೆ. ಲೈಫು ಅಕ್ಷರಶಃ ಐರನ್‌ ಬಾಕ್ಸಿನ ತಳದಲ್ಲಿ ಸಿಕ್ಕಿ ಸುಟ್ಟುಹೋದ ಬಟ್ಟೆಯಂತೆ ವಿಕಾರವಾಗುತ್ತದೆ!

ಪ್ರೀತಿಯ ಹೆಸರಲ್ಲಿ ಹೆಗಲೇರಿದ ಹುಡುಗಿಯ ಆಟ, ಕೊಡುವ ಕಾಟಗಳೆಲ್ಲವೂ ʻವೆಡ್ಡಿಂಗ್‌ ಗಿಫ್ಟ್‌ʼ ಚಿತ್ರದಲ್ಲಿ ಸವಿವರವಾಗಿ ಬಿಚ್ಚಿಕೊಂಡಿದೆ. ಮಹಿಳೆಯರ ಮೇಲಾಗುವ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳನ್ನು ತಡೆಗಟ್ಟುವ ಕಾರಣಕ್ಕೇ ಸಂವಿಧಾನದಲ್ಲಿ ಸೆಕ್ಷನ್‌ 498ಎ ಮತ್ತು 307  ಕಾನೂನು ಚಾರಿಯಲ್ಲಿದೆ. ಅದನ್ನು ಇವತ್ತಿನ ಕೆಲವು ಹೆಣ್ಣುಮಕ್ಕಳು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ. ಈ ಕಾನೂನನ್ನೇ ತಮ್ಮ ದಂಧೆಗೆ ದಾಳವಾಗಿಸಿಕೊಂಡಿದ್ದಾರೆ. ಇದರಿಂದ ಗಂಡುಕುಲ ಅನುಭವಿಸುತ್ತಿರುವ ಯಾತನೆ ಹೇಗಿರುತ್ತದೆ ಎಂಬ ಎಲ್ಲ ಡಿಟೇಲುಗಳೂ ಇಲ್ಲಿ ದಾಖಲಾಗಿವೆ.

ಹೆಣ್ಣುಮಕ್ಕಳ ಬಗ್ಗೆ ಕಾಳಜಿ, ಅನುಕಂಪ ತೋರುವ ಸಮಾಜ ಗಂಡಸರನ್ನು ಮಾತ್ರ ಯಾಕೆ ಉದಾಸೀನ ಮಾಡುತ್ತಾ ಬಂದಿದೆ. ಪುರುಷರ ನೋವಿಗೆ ಕಾನೂನು ಸ್ಪಂದಿಸೋದಿಲ್ಲವಾ? ಹೆಣ್ಣುಮಕ್ಕಳು ಹೇರುವ ಸುಳ್ಳು ಕೇಸುಗಳು ಅದೆಷ್ಟು ಜನರ ಜೀವ ಹಿಂಡಿದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಆದರೆ ಚಿತ್ರದ ಕಟ್ಟಕಡೆಯ ಐದು ನಿಮಿಷದ ಕ್ಲೈಮ್ಯಾಕ್ಸ್‌ ಮೂಲಕ ನಿರ್ದೇಶಕರು ಸುಳ್ಳು ಕೇಸು ಜಡಿಯುವ ಹೆಣ್ಣುಮಕ್ಕಳಿಗೆ ಘೋರ ಶಿಕ್ಷೆ ನೀಡುವ ತೀರ್ಮಾನ ಮಾಡಿಬಿಟ್ಟಿದ್ದಾರೆ. ಹಾಗೆ ಕೊಟ್ಟ ಶಿಕ್ಷೆಯನ್ನು ಸ್ವತಃ ಸಮರ್ಥಿಸಿಕೊಂಡು, ಮಾಡಿದ ತಪ್ಪಿನಿಂದ ಬಚಾವಾಗುವ ಮಾರ್ಗವನ್ನೂ ಕಂಡು ಹಿಡಿದಿದ್ದಾರೆ. ಇಡೀ ಸಿನಿಮಾ ವಾಸ್ತವಕ್ಕೆ ಹತ್ತರ ಅನ್ನಿಸಿರುತ್ತದೆ. ಆದರೆ ಕ್ಲೈಮ್ಯಾಕ್ಸನ್ನು ಎಲ್ಲರೂ ಒಪ್ಪುತ್ತಾರಾ ಗೊತ್ತಿಲ್ಲ!

ಇಂಥದ್ದೊಂದು ನೆಗೆಟೀವ್‌ ಶೇಡಿನ ಪಾತ್ರವನ್ನು ಒಪ್ಪಿ ನಟಿಸಿರುವ ಸೋನುಗೌಡ ಧೈರ್ಯ ದೊಡ್ಡದು. ಅಂತಃಕರಣದ ತಾಯಿಯಾಗಿ ಪವಿತ್ರಾ ಲೋಕೇಶ್‌ ಶ್ಯಾನೆ ಇಷ್ಟವಾಗುತ್ತಾರೆ. ನಟ ನಿಶಾನ್‌ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ದೊರೆತಿರುವ ನಿಜವಾದ ಗಿಫ್ಟ್.‌ ಅಷ್ಟು ಫರ್ಫೆಕ್ಟ್‌ ಆಗಿ ಅಭಿನಯಿಸಿದ್ದಾರೆ. ಅಚ್ಯುತ್‌ ಕುಮಾರ್‌ ʻಕ್ರಿಮಿನಲ್‌ʼ ಲಾಯರ್‌ ಆಗಿಯೇ ಅವತಾರವೆತ್ತಿದ್ದಾರೆ. ಕನ್ನಡದಲ್ಲಿ ಒಂದು ಕಾಲಕ್ಕೆ ಲೇಡಿ ಸೂಪರ್‌ ಸ್ಟಾರ್‌ ಆಗಿದ್ದವರು ಪ್ರೇಮಾ ಇಲ್ಲಿ ವಕೀಲೆಯಾಗಿ ಗೌನ್‌ ತೊಟ್ಟಿದ್ದಾರೆ. ಪ್ರೇಮಾ ನಟನೆ ಸ್ವಲ್ಪ ಬಳಲಿದಂತೆ ಕಾಣುತ್ತದೆ. ಇಷ್ಟು ಹಿರಿಯ ನಟಿಯ ಡೈಲಾಗ್‌ ಡೆಲಿವರಿ ಕೆಲ ದೃಶ್ಯಗಳಲ್ಲಿ ಪಾಠ ಓದಿದಂತೆಯೂ ಫೀಲ್‌ ಆಗುತ್ತದೆ. ಉಳಿದಂತೆ ವಿಕ್ರಂ ಪ್ರಭು ಅವರ ನಿರ್ದೇಶನ, ಕಥೆ ಹೇಳುವ ಶೈಲಿ, ಕ್ಯಾಮೆರಾ ಕೆಲಸ ಎಲ್ಲವೂ ಚೆಂದ. ವೈವಾಹಿಕ ಬದುಕಿನಲ್ಲಿ ನೊಂದವರ ಬದುಕಿಗಂತೂ ಈ ಚಿತ್ರ ಕನ್ನಡಿ ಹಿಡಿದಿದೆ. ಒಂದು ಸಲ ಎಲ್ಲರೂ ʻವೆಡ್ಡಿಂಗ್‌ ಗಿಫ್ಟ್‌ʼ ನೋಡಿದರೆ ಬದುಕಲ್ಲಿ ಏನೆಲ್ಲಾ ತಪ್ಪು ಮಾಡಬಾರದು ಅನ್ನುವುದರ ಮನವರಿಕೆಯಾಗೋದು ನಿಜ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತೂತು ಮಡಿಕೆ : ಮಜಾ ಮಾಡಿ ಹೋಗುವ ಸಿನಿಮಾ…

Previous article

ಶುಗರ್‌ ಲೆಸ್ಸಲ್ಲಿ ಎಲ್ಲವೂ ಪ್ಲಸ್!

Next article

You may also like

Comments

Comments are closed.