‘ವೆಡ್ಡಿಂಗ್ ಗಿಫ್ಟ್’ ಎಂಬ ಹೆಸರು ಕೇಳಿದರೆ ಇದು ವರ, ವಧುವಿಗೆ ಕೊಡುವ ಉಡುಗೊರೆ ಎಂದನಿಸಬಹುದು ಅಥವಾ ವಧು, ವರನಿಗೆ ಕೊಡುವ ಉಡುಗೊರೆ ಇರಬಹುದು ಎಂದನಿಸುವ ಸಾಧ್ಯತೆಯೂ ಇದೆ. ಆದರೆ, ಇದು ಕಾನೂನು ಕೊಟ್ಟ ಉಡುಗೊರೆ ಎನ್ನುತ್ತಾರೆ ನಿರ್ದೇಶಕ ವಿಕ್ರಂ ಪ್ರಭು.

ಕಳೆದ 20 ವರ್ಷಗಳಿಂದ ಷೇರು ಮಾರುಕಟ್ಟೆ ಮತ್ತು ಸೇಲ್ಸ್‌ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಇರುವ ವಿಕ್ರಂಪ್ರಭು, ‘ವೆಡ್ಡಿಂಗ್ ಗಿಫ್ಟ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ದೇಶನವಷ್ಟೇ ಅಲ್ಲ, ನಿರ್ಮಾಣವೂ ಅವರದ್ದೇ. ತಮ್ಮ ತಂಡದ ಜೊತೆಗೆ ಸೇರಿಕೊಂಡು ಅವರು ಈ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಈ ಚಿತ್ರ ನಿರ್ದೇಶಿಸುವುದಕ್ಕೆ ಅವರಿಗೆ ಸ್ಫೂರ್ತಿ ಹಿಂದಿಯ ‘ಸೆಕ್ಷನ್ 375’. ಅಕ್ಷಯ್ ಖನ್ನಾ ಅಭಿನಯದ ಈ ಚಿತ್ರವನ್ನು ನೋಡಿ ಪ್ರಭಾವಿತರಾಗಿರುವ ವಿಕ್ರಂ, ಕನ್ನಡದಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಈ ಕುರಿತು ಮಾತನಾಡುವ ಅವರು, ‘ಕೆಲವು ಹೆಣ್ಣುಮಕ್ಕಳು ಹೇಗೆ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ. ಹಿಂದಿಯ ಸೆಕ್ಷನ್ 375 ಈ ಚಿತ್ರಕ್ಕೆ ಸ್ಫೂರ್ತಿ. ಕಾನೂನಿನಲ್ಲಿರುವ ಲೂಪ್‌ ಹೋಲ್‌ಗಳನ್ನು ಇಟ್ಟುಕೊಂಡು ಗಂಡಂದಿರನ್ನು ಹೇಗೆ ಟ್ರಾಪ್ ಮಾಡಲಾಗುತ್ತದೆ ಎಂಬುದನ್ನು ಇಲ್ಲಿ ಹೇಳ ಹೊರಟಿದ್ದೇವೆ. ಇದು ಮಹಿಳೆಯರಿಗೆ ನಮ್ಮ ಕಾನೂನು ಕೊಟ್ಟಿರುವ ಒಂದು ಗಿಫ್ಟ್. ಅದೇ ಕಾರಣಕ್ಕೆ ಚಿತ್ರಕ್ಕೆ ‘ವೆಡ್ಡಿಂಗ್ ಗಿಫ್ಟ್’ ಎಂದು ಹೆಸರಿಟ್ಟಿದ್ದೇವೆ’ ಎನ್ನುತ್ತಾರೆ ವಿಕ್ರಂ.

ಇದೊಂದು ಕೋರ್ಟ್‌ ರೂಂ ಡ್ರಾಮಾ ಆಗಿದ್ದು, ಕೆಲವು ವರ್ಷಗಳಿಂದ ಸಿನಿಮಾದಿಂದ ದೂರವೇ ಉಳಿದಿದ್ದ ನಟಿ ಪ್ರೇಮಾ ಅವರಿಗಿಲ್ಲಿ ವಕೀಲೆ ಪಾತ್ರವಿದೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಅಚ್ಯುತ್ ಕುಮಾರ್ ವಾದಿಸುತ್ತಿದ್ದಾರೆ. ಕಳೆದ ವರ್ಷ ಶುರುವಾಗಿ, ಕಳೆದ ವರ್ಷವೇ ಮುಕ್ತಾಯವಾದ ‘ವೆಡ್ಡಿಂಗ್ ಗಿಫ್ಟ್’, ಇದೇ ಶುಕ್ರವಾರ (ಜುಲೈ 08) ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಪ್ರೇಮಾ, ನಿಶಾನ್ ನಾಣಯ್ಯ, ಸೋನು ಗೌಡ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ ಮತ್ತು ಬಾಲಚಂದ್ರ ಪ್ರಭು ಅವರ ಸಂಗೀತ ಸಂಯೋಜನೆ ಇದೆ. ವಿಜೇತ ಚಂದ್ರ ಸಂಕಲನ ಚಿತ್ರಕ್ಕಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗಾಳಿಪಟ 2 ಚಿತ್ರದಿಂದ ಇನ್ನೊಂದು ಹಾಡು

Previous article

‘ಗಿರ್ಕಿ’ ಹೊಡೆಸುವ ಟ್ರೇಲರ್ ಬಿಡುಗಡೆ ಆಯ್ತು

Next article

You may also like

Comments

Comments are closed.