ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ, ಶೃಂಗೇರಿ ಸುರೇಶ್ ನಿರ್ದೇಶನದ ಸಿನಿಮಾ `ವೀಕ್ ಎಂಡ್’ ಇಷ್ಟರಲ್ಲೇ ತೆರೆಗೆ ಬರಲು ಅಣಿಯಾಗಿದೆ.
`ವೀಕ್ ಎಂಡ್’ ಎನ್ನುವ ಶಬ್ದ ಕಿವಿಗೆ ಬಿದ್ದಾಕ್ಷಣ ವಾರದ ಐದೂ ದಿನ ದುಡಿದು ಹೈರಾಣಾದ ಜೀವಗಳಲ್ಲಿ ಆಹ್ಲಾದ ತುಂಬಿಕೊಳ್ಳುತ್ತದೆ. ಅದೆಷ್ಟೋ ಜನರ ಪಾಲಿಗಿದು ರಿಫ್ರೆಶ್ ಆಗೋ ದಾರಿ. ಇನ್ನೂ ಕೆಲ ಮಂದಿಗೆ ಮೋಜು ಮಸ್ತಿಯ ಬುನಾದಿ. ಮತ್ತೂ ಕೆಲವರ ಪಾಲಿಗದು ಬಿಟ್ಟೂ ಬಿಡದಂಥಾ ಚಟ. ಐಟಿ ಬಿಟಿ ಮಂದಿಗಂತೂ ಇದು ಬದುಕಿನ ಭಾಗ… ಇದೀಗ ಇದೇ `ವೀಕ್ ಎಂಡ್’ ಎಂಬ ಶೀರ್ಷಿಕೆ ಹೊತ್ತ ಚಿತ್ರವೊಂದು ವಿಶಿಷ್ಟವಾದ ಕಥೆ ಹೇಳುವ ಉತ್ಸಾಹದೊಂದಿಗೆ ಬಿಡುಗಡೆಗೆ ಸಜ್ಜುಗೊಂಡಿದೆ.
ಈಗಾಗಲೇ ಕಲಾವಿದರಾಗಿಯೂ ಹೆಸರು ಮಾಡಿರುವ ಮಂಜುನಾಥ್ ಡಿ ಅವರು ತಮ್ಮ ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ `ವೀಕ್ ಎಂಡ್’ ಚಿತ್ರವನ್ನು ಸುರೇಶ್ ಶೃಂಗೇರಿ ನಿರ್ದೇಶನ ಮಾಡಿದ್ದಾರೆ. ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ತೊಂಬತ್ತಕ್ಕೂ ಹೆಚ್ಚು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್. ಅವರು ಯೂಥ್ಫುಲ್ ಸಬ್ಜೆಕ್ಟ್ ಒಂದನ್ನು ಆಯ್ದುಕೊಂಡು `ವೀಕ್ ಎಂಡ್’ ಚಿತ್ರವನ್ನು ರೂಪಿಸಿದ್ದಾರೆ. ಕೈ ತುಂಬಾ ಕಾಸು ಕುಣಿದರೆ ಹುಚ್ಚು ಕುದುರೆಯಂಥಾ ಮನಸಿಗೆ ಲಗಾಮು ಹಾಕೋದು ಕಷ್ಟ. ಐಟಿ ಬಿಟಿ ಮಂದಿಯೂ ಹೀಗೆಯೇ ಕೈ ತುಂಬಾ ಸಂಬಳ ಪಡೆಯುತ್ತಾರೆ. `ವೀಕ್ ಎಂಡ್’ ಮಸ್ತಿಯಲ್ಲಿ ಮಿಂದೇಳುತ್ತಾರೆ. ಆದರೆ ಅಂತವರಲ್ಲಿ ಕೆಲವರು ಇದನ್ನೇ ಚಟವಾಗಿಸಿಕೊಂಡು ಬದುಕನ್ನ ಬಲಿ ಬೀಳಿಸಿಕೊಳ್ಳೋದೂ ಇದೆ. ಇಂಥಾದ್ದೇ ಹೊಳಹಿನ ಕಥೆಯನ್ನು ಸುರೇಶ್ ಅವರ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ರೂಪಿಸಿದ್ದಾರಂತೆ.
ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿರೋ ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಅನಂತ್ ನಾಗ್ ಇಲ್ಲಿ ಬಹು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರವೇ ಈ ಚಿತ್ರದ ಪ್ರಧಾನ ಆಕರ್ಷಣೆ. ಯುವ ಉನ್ಮಾದದ ಕಥೆಯೊಂದಿಗೇ ಒಂದಷ್ಟು ಸಂದೇಶವನ್ನೂ ಹೊತ್ತು ಬಂದಿರೋ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.
ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.