ಐಟಿ, ಬಿಟಿಗಳಲ್ಲಿ ದುಡಿಯೋ ಜನರನ್ನೂ ಸೇರಿಕೊಂಡಂತೆ ನಗರವಾಸಿಗಳಿಗೆ `ವೀಕ್ ಎಂಡ್’ ಮಸ್ತಿ ಎಂಬುದು ಬಲು ಆಪ್ತ ವಿಚಾರ. ವಾರಾಂತ್ಯ ಬಂತೆಂದರೆ ದಡಕ್ಕನೆ ಮತ್ಯಾವುದೋ ಲೋಕಕ್ಕೆ ನೆಗೆದು ಬಿಡೋ ಉತ್ಸಾಹವೂ ಹಲವರಲ್ಲಿದೆ. ಆದರೆ ಟೆಕ್ಕಿಗಳಷ್ಟು `ವೀಕ್ ಎಂಡ್’ ಮೋಜಿಗೆ ಅಡಿಕ್ಟ್ ಆದವರು ಬೇರೆ ಕ್ಷೇತ್ರಗಳಲ್ಲಿ ಕಾಣ ಸಿಗೋದು ಡೌಟು. ಅಂಥಾ ಟೆಕ್ಕಿಗಳ ಲೈಫ್ ಸ್ಟೋರಿಯಂಥಾ ಕಥೆ ಹೊಂದಿರೋ `ವೀಕ್ ಎಂಡ್’ ಚಿತ್ರ ಇದೀಗ ಬಿಡುಗಡೆಗೆ ತಯಾರಾಗಿದೆ. ಅತೀ ಸಣ್ಣ ವಯಸ್ಸಿನಲ್ಲಿಯೇ ಕೈ ತುಂಬಾ ಕಾಸು ಬಂದು ಬಿಟ್ಟರೆ ಸಲೀಸಾಗಿ ತಲೆ ತಿರುಗೋದು ಮಾಮೂಲು. ಬಹುತೇಕ ಟೆಕ್ಕಿಗಳು ಈ ಕಾಸನ್ನು ಮೋಜು ಮಸ್ತಿಗೇ ವಿನಿಯೋಗಿಸುತ್ತಾರೆ. ದೊಡ್ಡ ಮಟ್ಟದ ಸಂಬಳಕ್ಕೆ ಸರಿಯಾಗಿ ದೊಡ್ಡ ಕಮಿಟ್ ಮೆಂಟುಗಳೇ ಸೃಷ್ಟಿಯಾಗುತ್ತವೆ. ಆದರೆ ಕೆಲಸ ಕಳೆದುಕೊಂಡೋ, ಮತ್ಯಾವ ರೀತಿಯಲ್ಲಿಯೋ ಹಣಕಾಸಿನ ತೊಂದರೆ ತಗುಲಿಕೊಂಡರೆ ಪರದಾಡಿ ಬಿಡುತ್ತಾರೆ. ಇಂಥಾ ಅದೆಷ್ಟೋ ಪರದಾಟಗಳು, ಡಿಪ್ರೆಷನ್ನುಗಳು `ವೀಕ್ ಎಂಡ್’ ಪಾರ್ಟಿಯಲ್ಲಿ ಅಂತ್ಯ ಕಂಡಿದ್ದೂ ಇದೆ. ಎಂಥೆಂಥಾದ್ದೋ ಮಾಯೆಗಳು ಬಲಿ ಬೀಳಿಸಿದ್ದೂ ಇದೆ. ಹೆಚ್ಚಿನವರಿಗೆ ಗೊತ್ತಿಲ್ಲದ ಇಂಥಾ ಸಂಗತಿಗಳನ್ನು ಕಲೆ ಹಾಕಿಯೇ ಸುರೇಶ್ ಅವರು `ವೀಕ್ ಎಂಡ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಆದ್ದರಿಂದಲೇ ಇದೊಂಥರಾ ಟೆಕ್ಕಿಗಳ ಲೈಫ್ ಸ್ಟೋರಿ ಎನ್ನಲಡ್ಡಿಯಿಲ್ಲ. ಆದರೆ `ವೀಕ್ ಎಂಡ್’ ಅಷ್ಟಕ್ಕೇ ಸೀಮಿತವಾಗಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಕಥೆ ಎಲ್ಲರನ್ನೂ ಬೆಗರಗುಗೊಳಿಸಲಿದೆ. ಅದೇನೆಂಬುದು ಸದ್ಯದಲ್ಲಿಯೇ ಜಾಹೀರಾಗಲಿದೆ.
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ, ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.