ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸ್ಟಾರ್ಟ್ ಆಗುವವರೆಗೂ ಒಂದು ರೀತಿಯದಾದರೆ ಆದಮೇಲೆ ಮತ್ತೊಂದು ರೀತಿ. ಪ್ರೇಕ್ಷಕರು ಇಂತಿಂತಹವರನ್ನು ಸಾಧಕರ ಸೀಟಿಗೆ ಕರೆಯಿರಿ ಎಂಬ ಬೇಡಿಕೆಯ ಪಟ್ಟಿ ದಿನೇ ದಿನೇ ಬೆಳೆಯುತ್ತಾ ಸಾಗುತ್ತಲೇ ಇರುತ್ತದೆ. ಅವರು ನಿರೀಕ್ಷಿಸಿದ ವ್ಯಕ್ತಿಯನ್ನು ಕರೆಯದ ಮಾತ್ರಕ್ಕೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕುರಿತಾಗಿ ಇಲ್ಲಸಲ್ಲದ ಮಾತುಗಳನ್ನಾಡುವುದು  ಉತ್ಪ್ರೇಕ್ಷೆಯಲ್ಲವೇ.

ಇಷ್ಟೆಲ್ಲ ವಿಚಾರ ಈಗ ಯಾಕಪ್ಪ ಅಂದರೆ ವೀಕೆಂಡ್ ವಿತ್ ರಮೇಶ್ ಸೀಜನ್ 4ರ ಎರಡನೇ ಸಾಧಕರಾಗಿ ದೊಡ್ಮನೆ ಕುಡಿ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕರೆಸಲಾಗಿದ್ದು, ಶೂಟಿಂಗ್ ಸಹ ಮುಗಿದಿದೆ. ಮೇಲಾಗಿ ಕಾರ್ಯಕ್ರಮದ ಪ್ರೋಮೋ ಕೂಡ ವಾಹಿನಿಯಲ್ಲಿ ಪ್ರಸಾರವಾಗಲೂ ಪ್ರಾರಂಭವಾಗಿದೆ. ಈತನ್ಮಧ್ಯೆ ರಾಘಣ್ಣನವರನ್ನು ಸಾಧಕರ ಸೀಟಿನಲ್ಲಿ ಕೂರಿಸಿರುವುದನ್ನೇ ಪ್ರಮಾಧವೆಂಬಂತೆ ಬಿಂಬಿಸಲಾಗಿದ್ದು, ಅವರ ವಿರೋಧವಾಗಿ ಸಾಕಷ್ಟು ಮಿಶ್ರಪ್ರತಿಕ್ರಿಯೆಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

“ರಾಘಣ್ಣ ಅಂತಹ ಮಹಾನ್ ಸಾಧಕನೇನಲ್ಲ. ಮಾಡಿರುವುದು ಕೆಲವೇ ಚಿತ್ರಗಳಾಗಿದ್ದರೂ, ಅಣ್ಣಾವ್ರ ಮಗ ಅಂದ ಮಾತ್ರಕ್ಕೆ ಅವರನ್ನು ಸಾಧಕನೆಂದು ಪರಿಗಣಿಸುವುದು ಸರಿಯಲ್ಲ.”

“ಅವರ ಸಾಧನೆಯ ಪಟ್ಟಿಯೇನು ದೊಡ್ಡದಿಲ್ಲವಲ್ಲ”

“ಸೆಲೆಬ್ರೆಟಿಗಳು ಮಾತ್ರ ಸಾಧಕರ ಸೀಟಿನಲ್ಲಿ ಕೂರಲು ಯೋಗ್ಯರೇ”

“ಬರೀ ಸಿನಿಮಾ ನಿರ್ಮಾಣ ಮಾಡಿದ ಮಾತ್ರಕ್ಕೆ ಸಾಧಕನೆಂದು ಪರಿಗಣಿಸಬಹುದೇ”

ಈ ಎಲ್ಲ ಪ್ರಶ್ನೆಗಳು, ಗೊಂದಲಗಳನ್ನು ಗಮನಿಸಿದರೆ ಇವೆಲ್ಲವೂ ಚರ್ಚೆಗೆ ಯೋಗ್ಯವಾದವುಗಳೇ ಅಲ್ಲ. ಯಾಕೆಂದರೆ ರಾಘವೇಂದ್ರ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರದಿಂದ ಸಾಕಷ್ಟು ವರ್ಷಗಳ ಕಾಲ ಸಮಕಾಲೀನ ಹೀರೋಗಳಿಗೆ ಸೆಡ್ಡು ಹೊಡೆದವರು. ಅಲ್ಲದೇ ಶ್ರೀನಿವಾಸ ಕಲ್ಯಾಣದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅವರು ನಂಜುಂಡಿ ಕಲ್ಯಾಣ, ಚಿರಂಜೀವಿ ಸುಧಾಕರ, ಗಜಪತಿ ಗರ್ವಭಂಗ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗದ ಅಲೆಗಳು, ಆಟ ಹುಡುಗಾಟ, ಗೆಲುವಿನ ಸರದಾರ, ಟುವ್ವಿ, ಟುವ್ವಿ, ಟುವ್ವಿ, ಸ್ವಸ್ತಿಕ್ ಸಿನಿಮಾಗಳಲ್ಲಿ ನಟಿಸಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡಿದ್ದಾರೆ. ಮೇಲಾಗಿ ತಮ್ಮ ಮೊದಲನೇ ಚಿತ್ರದಿಂದಲೇ ಅಣ್ಣಾವ್ರಂತೆ ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು ನೃತ್ಯದ ವಿಚಾರದಲ್ಲೂ ಅಣ್ಣ ತಮ್ಮನಿಗೆ ಸಾಥ್ ಕೊಡುವ ಮಟ್ಟಿಗೆ ಸಬಲರಾಗಿದ್ದಾರೆ. ಡಾ. ರಾಜ್ ಕುಮಾರ್ ಅವರು ಸಿನಿಮಾಗಳಿಂದ ದೂರ ಉಳಿದ ಮೇಲಂತೂ ಅವರಿಗೆ ಊರು ಗೋಲಾಗಿ, ಅವರ ನಂತರದಲ್ಲಿ ತಾಯಿ ಪಾರ್ವತಮ್ಮನವರಿಗೆ ಹೆಗಲುಕೊಟ್ಟು, ವಜ್ರೇಶ್ವರಿ ಎನ್ನುವ ಬೃಹತ್ ಸಂಸ್ಥೆಯೊಂದನ್ನು ನಡೆಸುವುದೇನು ಸುಲಭಸಾಧ್ಯವಾದ ಮಾತಲ್ಲ. ವಜ್ರೇಶ್ವರಿ ಕಂಬೈನ್ಸ್ ಎಂದಾಕ್ಷಣ ಕನ್ನಡಿಗರ ಮುಖವರಳಲು ಕಾರಣಕರ್ತರಾದವರ ಪೈಕಿ ರಾಘಣ್ಣ ಕೂಡ ಒಬ್ಬರು. ನಿರ್ಮಾಪಕರಾಗಿಯೂ ತಮ್ನನ್ನು ಗುರುತಿಸಿಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ಶೃತಿ ಸೇರಿದಾಗ, ಜಾಕಿ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

 

ಇವೆಲ್ಲದರ ಜತೆ ಜತೆಗೆ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ರಾಜಣ್ಣನ ಸ್ಥಾನ ತುಂಬಿ ಪುನೀತ್ ರಾಜ್ ಕುಮಾರ್ ಅವರ ಪ್ರತಿ ಹೆಜ್ಜೆಯಲ್ಲೂ ಜತೆಯಾಗಿ ಪುನೀತ್ ರಾಜ್ ಕುಮಾರ್ ಅವರ ಸಕ್ಸಸ್ ಗೆ ಮೂಲ ಪ್ರೇರಣೆ ರಾಘವೇಂದ್ರ ರಾಜ್ ಕುಮಾರ್ ಅವರಲ್ಲವೇ.

ಇನ್ನು ಆಕಸ್ಮಿಕವಾಗಿ ಆದಂತಹ ದುರ್ಘಟನೆ ರಾಘಣ್ಣನವರ ಬದುಕನ್ನೇ ಕಿತ್ತು ತಿನ್ನುವುದೆಂಬ ದಿಗಿಲಿನಲ್ಲಿರುವಾಗ ದೇವರ ದಯೆ, ರಾಘಣ್ಣನ ಪುಣ್ಯ ಅವರನ್ನು ಪುನಃ ಬದುಕಿ ಬಣ್ಣದ ಲೋಕದ ಕಡೆ ಮುಖ ಮಾಡುವಂತೆ ಮಾಡಿದ್ದು ಯಾರು ತಾನೆ ಮರೆಯಬಲ್ಲರು.

ದುಡಿಯಲು ಶಕ್ತರಾಗಿದ್ದರೂ ಕೈಲಾಗದವರಂತೆ ಮೂಲೆಗೆ ಕೂರುವ, ನಿವೃತ್ತಿಯನ್ನು ಪಡೆಯಲು ಹವಣಿಸುವ ಜನರ ಮಧ್ಯೆ ತನ್ನ ನೋವನ್ನು ನುಂಗಿ, ತನಗಾಗುತ್ತಿರುವ ಸಂಕಟವನ್ನು ಮರೆಮಾಚಿ ಪುನಃ ನಟನೆಯತ್ತ ಮುಖ ಮಾಡಿ ಈಗಾಗಲೇ ಅಮ್ಮನ ಮನೆ, ತ್ರಯಂಬಕಂ ಸಿನಿಮಾಗಳಲ್ಲಿ ನಟಿಸಿ, ಪೊಗರು, ಆಡಿಸಿದಾತ, ಅಪ್ಪನ ಅಂಗಿ ಸಿನಿಮಾಗಳಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ.

ಮನರಂಜನೆಯ ಮೂಲಕ ಸಮಾಜಕ್ಕೆ ಆರೋಗ್ಯಕರ ವಾತಾವರಣ ನಿರ್ಮಾಣವಾಗಲು ಸಹಕರಿಸುವ ಸೆಲೆಬ್ರೆಟಿಗಳು ಸಾಧಕರೇ. ನೋಡುಗರ ಕಣ್ಣಿಗೆ ಮುದ ನೀಡಲು ಎಂತಹ ದುಸ್ಸಾಹಸಕ್ಕೂ ಕೈ ಹಾಕಿ, ಕಾಲು ಮುರಿದುಕೊಂಡು, ಕೈ ಮುರಿದುಕೊಂಡು, ಕೊನೆ ಕೊನೆಗೆ ಪ್ರಾಣವನ್ನೇ ಬಿಟ್ಟು ತಮ್ಮ ಸೇವೆಯನ್ನು ನೀಡುವ ಸಿನಿ ತಾರೆಯರು ಸೆಲೆಬ್ರೆಟಿಗಳಲ್ಲದೇ ಮತ್ತೇನು.

ಇನ್ನು ಸಿನಿಮಾ ನಿರ್ಮಾಣ ಮಾಡಿದರಷ್ಟೇ ಸಾಧಕರೇ. ಪರೋಕ್ಷವಾಗಿ ಹೌದು. ನಿರ್ಮಾಣ ಕಾರ್ಯ ಟಿಕೇಟ್ ತೆಗೆದುಕೊಂಡು ಥಿಯೇಟರ್ ನಲ್ಲಿ ಕುಳಿತು ಸೀಟಿ ಹೊಡೆದಷ್ಟು ಸುಲಭವಲ್ಲವಲ್ಲ. ವೀಕ್ಷಕನ ಖುಷಿಗೆ ಬಲಕೊಡಲು ಹಣವನ್ನು ನೀರಿನಂತೆ ವ್ಯಯಿಸುವ ಹಾಗೂ ಸಾವಿರಾರು ತಂತ್ರಜ್ಞರಿಗೆ ಉದ್ಯೋಗದಾತರಾಗಿರುವ ನಿರ್ಮಾಪಕರು ಸಾಧಕರೇ ಅಲ್ಲವೇ. ಅವರೇನಾದರೂ ನಿರ್ಮಾಣ ಕಾರ್ಯವನ್ನೇ ಸ್ಥಗಿತಗೊಳಿಸಿದ್ದೇ ಆದಲ್ಲಿ ಬಣ್ಣವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಮಂದಿಯ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂಶಯವೇ ಇಲ್ಲ.

ರಾಜಕುಮಾರ್ ಅವರು ಸದಾ ಅವರಿಗೆ ಏನೂ ಮಾಡಲ್ಲ, ಏನೂ ಆಗಲ್ಲ ಅಂತ ಬೈಯ್ಯುತ್ತಿದ್ದರಂತೆ. ಅದನ್ನು ಹುಸಿ ಮಾಡಲು ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಂತಹ ಬೃಹತ್ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದಕ್ಕೆ ತಮ್ಮ ಕಿರಿಯ ಮಗ ಯುವ ರಾಜಕುಮಾರ್ ಅವರನ್ನೂ ವಾರಸುದಾರನನ್ನಾಗಿ ಮಾಡಿ, ಸಾವಿರಾರು ಐಎಎಸ್ ಆಕಾಂಕ್ಷಿಗಳ ಕನಸಿಗೆ ಬಲಕೊಡುವ ಕೆಲಸ ಮಾಡುತ್ತಿರುವುದು ಸಾರ್ಥಕತೆಯ ಕೆಲಸವಲ್ಲದೇ ಮತ್ತೇನು. ಜತೆಗೆ ಆರ್ಥಿಕವಾಗಿ ತೀರ ಹಿಂದುಳಿದ ವಿದ್ಯಾರ್ಥಿಗಳಿಗೂ ಅವಕಾಶ ನೀಡುವ ಸಲುವಾಗಿ ವಿದ್ಯಾರ್ಥಿ ವೇತನದ ಪರೀಕ್ಷೆಯನ್ನು ಏರ್ಪಡಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್ ಟ್ರೇನಿಂಗ್ ನೀಡುವ ಹೃದಯವಂತಿಕೆ ರಾಘಣ್ಣನವರದ್ದು. ಇಷ್ಟು ಸಾಕಲ್ಲವೇ ಅವರು ಸಾಧಕರ ಸೀಟಿನಲ್ಲಿ ರಾಜಗಾಂಭೀರ್ಯದಿಂದ ವೀಕ್ ಎಂಡ್ ವಿತ್ ರಮೇಶ್ ಸೀಟ್ ನಲ್ಲಿ ಆಸೀನರಾಗಲು.

ಕೆಲವು ವ್ಯಕ್ತಿಗಳಿಗಷ್ಟೇ ವೀಕೆಂಡ್ ವಿತ್ ರಮೇಶ್ ಸೀಟಿನಲ್ಲಿ ಕೂತಾಗ ಆ ಸೀಟಿನ ಮೌಲ್ಯವನ್ನು ಹೆಚ್ಚಿಸುವಂತಹ ವ್ಯಕ್ತಿತ್ವವಿರುತ್ತದೆ. ಅಂತಹ ಮೇರು ವ್ಯಕ್ತಿತ್ವಗಳಲ್ಲಿ ರಾಘಣ್ಣನವರದ್ದು ಒಂದೂ ಎಂಬುದನ್ನು ಟೈಮ್ ಪಾಸಿಗೆ ಕಾಲೆಳೆಯುವುದನ್ನೇ ಕೆಲಸವೆಂದುಕೊಂಡವರು ಮನವರಿಕೆ ಮಾಡಿಕೊಳ್ಳಬೇಕಿದೆ. ಇದೇ ಶನಿವಾರ ಮತ್ತು ಭಾನುವಾರ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ರಾಜಣ್ಣನ ಹೆಮ್ಮೆಯ ಮಗ ರಾಘಣ್ಣನ ಎಪಿಸೋಡನ್ನು ನೋಡುವುದನ್ನು ಮರೆಯಬೇಡಿ..

CG ARUN

ಮೆಲೋಡಿ ಡೈರೆಕ್ಟರ್ ನಂಜುಂಡ ವಿಧಿವಶ!

Previous article

ಬುಕ್ಕು ಟ್ರಿಕ್ಕು ಆನ್ ಲೈನ್ ಕಿರಿಕ್ಕು!

Next article

You may also like

Comments

Leave a reply

Your email address will not be published. Required fields are marked *

More in cbn