ನಟ ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಷೋ ವೀಕೆಂಡ್ ವಿಥ್ ರಮೇಶ್ ಮತ್ತೆ ಬರುತ್ತಿದೆ. ಹೌದು ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ ವೀಕೆಂಡ್ ವಿಥ್ ರಮೇಶ್ ಈಗಾಗಲೇ 3ನೇ ಸೀಜನ್‌ಗಳಲ್ಲಿ ಪ್ರಸಾರಗೊಂಡು ಅತ್ಯಂತ ಜನಪ್ರಿಯತೆ ಪಡೆದಿತ್ತು. ಹಲವಾರು ಸಾಧಕರು ಹಾಟ್‌ಸೆಟ್‌ನಲ್ಲಿ ಕುಳಿತು ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದ್ದರು. ಅವರ ಸಾಧನೆಯ ಹಾದಿ ಇತರ ಪ್ರತಿಭೆಗಳಿಗೆ ಒಂದು ಸ್ಪೂರ್ತಿಯಾಗಿತ್ತು. ಅಂತಹ ವಿಭಿನ್ನ ಶೈಲಿಯ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ದೊರೆಯುತ್ತಿದೆ. ಈಗಾಗಲೇ ನಟ ಯಶ್, ಪುನೀತ್ ರಾಜ್‌ಕುಮಾರ್, ದರ್ಶನ್, ಶಿವರಾಜಕುಮಾರ್, ವಿಜಯ್ ಸಂಕೇಶ್ವರ ಸೇರಿದಂತೆ ಹಲವಾರು ಸೆಲಬ್ರಿಟಿಗಳು ಬಂದು ತಾವು ನಡೆದುಬಂದ ದಾರಿಯನ್ನು ಮೆಲುಕು ಹಾಕಿದ್ದಾರೆ. ಈಗ ವೀಕೆಂಡ್ ವಿಥ್ ರಮೇಶ್ ಸೀಜನ್ – 4 ಇದೇ ತಿಂಗಳ 20 ರಿಂದ ಪುನರಾರಂಭವಾಗುತ್ತಿದೆ.
ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ|| ವೀರೆಂದ್ರ ಹೆಗಡೆಯವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದುವರೆಗೆ ಜೀ ತಂಡ ನಡೆಸಿದ ಅವಿರತ ಪ್ರಯತ್ನದ ಫಲವಾಗಿ ವೀರೇಂದ್ರ ಹೆಗಡೆಯವರು ಬಂದಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವೀಕೆಂಡ್ ವಿಥ್ ರಮೇಶ್ ಫೋನ್ ಫ್ರೋಮೋ ಮೇಕಿಂಗ್ ಮೀಡಿಯಾ ಹಾಗೂ ಮೊದಲ ಸಂಚಿಕೆಯ ಝಲಕ್‌ನ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹಾಗೂ ರಮೇಶ್ ಅರವಿಂದ್ ಈ ಕಾರ್ಯಕ್ರಮದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು.
ರಾಘವೇಂದ್ರ ಹುಣಸೂರು ಮಾತನಾಡಿ, ವೀಕೆಂಡ್ ವಿಥ್ ರಮೇಶ್ 2014 ರಲ್ಲಿ ಆರಂಭವಾಗಿತ್ತು. ಈವರೆಗೆ ನಡೆದ 3 ಸೀಜನ್‌ಗಳಲ್ಲಿ 65 ಜನ ಸೆಲಬ್ರಿಟಿಗಳು ಇಲ್ಲಿಗೆ ಬಂದು ತಮ್ಮ ಜೀವನದ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ. ಅವರೆಲ್ಲರೂ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದ್ದರು. ಇದು ನನ್ನ ಬದುಕಿನ ಬೆಸ್ಟ್ ಇಂಟರ್‌ವ್ಯೂ ಎಂದು ಹೇಳಿದ್ದಾರೆ. ಇಷ್ಟು ಜನ ಸಾಧಕರನ್ನು ಕರೆತರುವುದರೊಂದಿಗೆ ಅವರಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ ಮರೆಯಲಾಗದ ಘಟನೆಗಳನ್ನು ತೋರಿಸುವುದು ಇದೆಲ್ಲಾ ರಿಸರ್ಚ್ ಟೀಮ್ ಪಟ್ಟ ಶ್ರಮದ ಫಲ. 10 ಸೆಕೆಂಡ್‌ಗಳ ಈ ಫ್ರೋಮೋವನ್ನು ಕುಶಾಲನಗರದ ಮಂದಾಲಪಟ್ಟಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು. ನಂತರ ರಮೇಶ್ ಅರವಿಂದ್ ಮಾತನಾಡುತ್ತಾ “ಇಲ್ಲಿ ಬರುವ ಒಬ್ಬೊಬ್ಬರ ಕಥೆಯೂ ರೋಚಕ. ಪ್ರೀತಿಯಿಂದ ರಮೇಶ್, ಖುಶಿಯಿಂದ ರಮೇಶ್, ನಂತರ ವೀಕೆಂಡ್ ವಿಥ್ ರಮೇಶ್ ಬಂದಿದೆ. ಇಲ್ಲಿ ಬರುವ ಎಲ್ಲರ ಸಾಧನೆಯ ಬಗ್ಗೆ ತಿಳಿದುಕೊಳ್ಳುವ ಅದ್ಭುತವಾದ ಅವಕಾಶ ನನಗೆ ಸಿಕ್ತು” ಎಂದು ಹೇಳಿದರು. “ವೀಕೆಂಡ್ ವಿಥ್ ರಮೇಶ್ ಇದೇ 20 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30 ರಿಂದ ಪ್ರಸಾರವಾಗಲಿದೆ. ಮುಂದಿನ ಸಂಚಿಕೆಗಳಲ್ಲಿ ನಟಿ ಪ್ರೇಮ, ಮಾಲಾಶ್ರೀ, ರಾಘಣ್ಣ ಅಲ್ಲದೆ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮೊದಲಾದ ಸೆಲಿಬ್ರಿಟಿಗಳು ಭಾಗವಹಿಸಲಿದ್ದಾರೆ” ಎಂದು ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದರು.