ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ, ಸುರೇಶ್ ಶೃಂಗೇರಿ ನಿರ್ದೇಶನದ ಸಿನಿಮಾ `ವೀಕ್ ಎಂಡ್’ ಇನ್ನೇನು ತೆರೆಗೆ ಬರಲಿದೆ. ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ಶಂಕರ್ ನಾಗ್ರಿಂದ ಹಿಡಿದು ಸುದೀಪ್ ತನಕ ಅನೇಕರ ಜೊತೆಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವವರು ಸುರೇಶ್ ಶೃಂಗೇರಿ. ಸರಿಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚಿನ ಈ ಅನುಭವ ಹೊಂದಿರುವ ಅವರು ಇದೀಗ `ವೀಕ್ ಎಂಡ್’ ಎಂಬ ವಿಭಿನ್ನವಾದ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.
ಇಂಥಾ ಸುರೇಶ್ ಶೃಂಗೇರಿ ಅನಂತ್ ನಾಗ್ ನಟಿಸಿದ್ದ ಅದೆಷ್ಟೋ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸಿದ್ದವರು. ಈ ಕಾರಣದಿಂದಲೇ ಅದೆಷ್ಟೋ ವರ್ಷಗಳಿಂದಲೂ ಅನಂತ್ ನಾಗ್ ಅವರ ಆಪ್ತವಲಯದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಸಿನಿಮಾ ಅಂತ ಬಂದಾಗ ಇಂಥಾ ಸ್ನೇಹ, ಪ್ರೀತಿಯಾಚೆಗೆ ನಿಷ್ಠುರವಾಗಿ ನಡೆದುಕೊಳ್ಳೋದು, ಎಲ್ಲವನ್ನೂ ನೇರಾ ನೇರ ಹೇಳಿ ಬಿಡುವುದು ಅನಂತ್ ನಾಗ್ ಅವರ ರೀತಿ. ಒಂದು ವೇಳೆ ಕಥೆ ಹಿಡಿಸದೇ ಹೋದರೆ ಎಷ್ಟೇ ಪ್ರಭಾವ ಬಳಸಿದರೂ ನಟಿಸಲು ಅನಂತ್ ನಾಗ್ ಅವರು ಒಪ್ಪೋದಿಲ್ಲ. ಇಂಥಾ ಅನಂತ್ ನಾಗ್ `ವೀಕ್ ಎಂಡ್’ ಸಿನಿಮಾದ ಚಿತ್ರಕತೆ ಓದಿದಾಕ್ಷಣವೇ ಓಕೆ ಅಂದುಬಿಟ್ಟರಂತೆ. ಕಥೆ ತುಂಬಾ ಚೆನ್ನಾಗಿದೆ, ಆಲೋಚನಾ ಕ್ರಮವೂ ಸೊಗಸಾಗಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಹೀಗೆ ಆರಂಭಗೊಂಡು ಚಿತ್ರೀಕರಣವೆಲ್ಲ ಮುಗಿದ ಮೇಲೆ ಸ್ಕ್ರಿಫ್ಟಿಗಿಂತಲೂ ಸಿನಿಮಾ ಸುಂದರವಾಗಿ ಮೂಡಿ ಬಂದಿದೆ ಎಂದು ಹೇಳಿದರಂತೆ. ಅಷ್ಟು ಸುಲಭಕ್ಕೆ ಯಾವುದನ್ನೂ ಒಪ್ಪಿಕೊಳ್ಳದ ಅನಂತ್ ನಾಗ್ ಅವರು ಈ ಅಭಿಪ್ರಾಯವೇ `ವೀಕ್ ಎಂಡ್’ ಚಿತ್ರದ ಗೆಲುವಿನ ಸೂಚನೆ ಅಂದುಕೊಳ್ಳಬಹುದು. ಅನಂತ್ ರಂಥ ಮಹಾನ್ ನಟ ಒಂದು ಸಿನಿಮಾ ಮತ್ತದರ ನಿರ್ದೇಶಕನನ್ನು ಮೆಚ್ಚಿದರು ಅಂದರೆ ಅದು ಸುಮ್ಮನೇ ಮಾತಲ್ಲ. ಕಮಲ್ ಹಾಸನ್ ಅವರನ್ನು ಜನ ಭಾರತ ಚಿತ್ರರಂಗದ ಅದ್ಭುತ ನಟ ಎಂದು ಬಣ್ಣಿಸುತ್ತಾರೆ. ಅಂತಾ ಕಮಲ್ ಹಾಸನ್ ಸಂದರ್ಶನವೊಂದರಲ್ಲಿ ಭಾರತ ಚಿತ್ರರಂಗದ ಸೂಕ್ಷ್ಮ ನಟರಲ್ಲಿ ಕನ್ನಡಿಗರಾದ ಅನಂತ್ ನಾಗ್ ಅವರು ಪ್ರಮುಖರು ಎಂದಿದ್ದರು. ಅನಂತ್ ಅವರಿಗೆ ಒಪ್ಪುವ ಪಾತ್ರಗಳನ್ನು ಸೃಷ್ಟಿಸೋದು ಬಲು ಕಷ್ಟ. ಅಂಥಾದ್ದರಲ್ಲಿ ಅನಂತ್ ಅವರೇ ಇಷ್ಟು ಇಷ್ಟಪಟ್ಟಿರುವ ಪಾತ್ರ `ವೀಕ್ ಎಂಡ್’ನಲ್ಲಿದೆ. ಅದು ಹೇಗಿರಬಹುದು ಅನ್ನೋ ಕುತೂಹಲ `ವೀಕ್ ಎಂಡ್’ಬಿಡುಗಡೆಯಾಗುವ ತನಕ ಕಾಯಬೇಕು…
ಅಂದಹಾಗೆ, ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಮಿಲಿಂದ್ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.