ತಾಯಿಯಿಲ್ಲದ ಮಗು ಅದು. ಹುಟ್ಟಿನಿಂದಲೇ ಕಾಲುಗಳಲ್ಲಿ ಸ್ವಾಧೀನವಿಲ್ಲ. ಎದ್ದು ಓಡಾಡಲೂ ಆಗುವುದಿಲ್ಲ. ಬೇರೆಲ್ಲ ಮಕ್ಕಳಂತೆ ಓಡಲು ಬಯಸಿದರೆ, ತನ್ನ ಹೆಗಲಿಗೆ ಹಾಕಿಕೊಂಡು ರನ್ನಿಂಗ್ ರೇಸ್ ಓಡುವ, ಅನುಕ್ಷಣವೂ ಎದೆಮೇಲೆ ಹಾಕಿಕೊಂಡು ಪೊರೆಯುವ ತಾಯಿ ಮನಸ್ಸಿನ ಅಪ್ಪ.

ವಿಕಲ ಚೇತನ ಮಗನಿಗೆ ಮದುವೆ ಮಾಡಿಸುವ ಉಮೇದು ಅಪ್ಪನಿಗೆ. ಕಾಲುಗಳಲ್ಲಿ ಬಲವಿಲ್ಲದಿದ್ದರೂ ಹುಡುಗನಿಗೆ ಬೇರೆಲ್ಲ ಶಕ್ತಿ ಇರುತ್ತದೆ. ವ್ಹೀಲ್ ಚೇರ್ ಮೇಲೆ ಕೂತಿದ್ದರೂ ವಿಟ ಬಯಕೆ ವ್ಯಕ್ತಪಡಿಸುತ್ತಾನೆ. ಮದುವೆ ಬೇಡ ಹುಡುಗಿ ಬೇಕು ಅನ್ನುತಾನೆ.

ಕಡೆಗೆ ಹೆತ್ತ ಮಗನ ದಾಹ ತಣಿಸಲು ವೇಶ್ಯಾಗೃಹಕ್ಕೆ ಕರೆದುಕೊಂಡು ಹೋಗುವ ಅಪ್ಪ. ಆ ನಂತರದ ವಿದ್ಯಮಾನಗಳನ್ನೆಲ್ಲಾ ಪರಿಪೂರ್ಣ ಹಾಸ್ಯದೊಂದಿಗೆ ಕಟ್ಟಿರುವ ಚಿತ್ರ ವ್ಹೀಲ್ ಚೇರ್ ರೋಮಿಯೋ.

ಆಗ… ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಬಂದಾಗ ಜನ ಸೀಟಿನ ಮೇಲೆ ಕೂರಲಾಗದೇ ಎದ್ದೆದ್ದು ಕುಣಿಯುತ್ತಾ ಸಿನಿಮಾ ನೋಡಿದ್ದರಲ್ಲಾ? ಅದೇ ಥರ ಇಲ್ಲೂ ಫಸ್ಟ್ ಹಾಫ್ ಪೂರ್ತಿ ಬಿಡುವು ಕೊಡದೆ ನಗಿಸುತ್ತಾರೆ. ದ್ವಿತೀಯಾರ್ಧದಲ್ಲಿ ಕಥೆ ಪಥ ಬದಲಿಸುತ್ತದೆ. ರಾಜ್ಯದ ಗಡಿ ಮೀರಿ ಸುತ್ತುತ್ತದೆ. ಅದೊಂಥರಾ ಎಮೋಷನಲ್ ಜರ್ನಿ ಅಂದುಕೊಳ್ಳಬಹುದು.

ಎಷ್ಟೋ ಸಿನಿಮಾಗಳಲ್ಲಿ ರಂಗಾಯಣ ರಘು ರೇಜಿಗೆ ಹುಟ್ಟಿಸಿರುತ್ತಾರೆ. ರಘು ಅಪ್ಪಟ ನಿರ್ದೇಶಕನ ಕಲಾವಿದ ಅನ್ನೋದು ಕೂಡಾ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ವ್ಹೀಲ್ ಚೇರ್ ರೋಮಿಯೋದಲ್ಲಿ ಒರಿಜಿನಲ್ ರಂಗಾಯಣ ರಘು ಎದ್ದು ಕಾಣುತ್ತಾರೆ. ಅಷ್ಟೊಂದು ನಗಿಸುತ್ತಾರೆ. ಹೀರೋ ಪಾತ್ರದಲ್ಲಿರುವ ರಾಮ್ ಚೇತನ್ ಗೆ ನಿಜಕ್ಕೂ ಕೈ-ಕಾಲು ಊನವಾ ಅನ್ನಿಸುವಷ್ಟರ ಮಟ್ಟಿಗೆ ಸಹಜ ಅಭಿನಯ. ನಾಯಕಿ ಮಯೂರಿಯೇನು ಕಡಿಮೆಯಲ್ಲ. ಅಂಧತ್ವವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್ ಈ ಚಿತ್ರದಲ್ಲಿ ತೀರಾ ಚೆಂದಗೆ ಭಿನಯಿಸಿದ್ದಾರೆ. ಡುಮ್ಮ ಗಿರಿ ನಟನೆ ʻಫನ್ʼಟಾಸ್ಟಿಕ್!

ಈ ಥರದ ಸಬ್ಜೆಕ್ಟನ್ನು ಕನ್ನಡ ಮಾತ್ರವಲ್ಲ ಇತರೆ ಭಾಷೆಗಳಲ್ಲಿ ಕೂಡಾ ಯಾರೂ ಮುಟ್ಟಿದಂತಿಲ್ಲ. ಸಾಮಾನ್ಯಕ್ಕೆ, ಅಂಗ ಊನತೆ ಹೊಂದಿರುವ ಜೀವಗಳ ಒಳ ವೇದನೆಗಳನ್ನು ಯಾರೂ ಅರ್ಥ ಮಾಡಿಕೊಳ್ಳೋದೇ ಇಲ್ಲ. ಅವರಲ್ಲೂ ಎಲ್ಲರಂತೆ ಬಯಕೆಗಳಿರುತ್ತವೆ, ಪ್ರೀತಿ, ಪ್ರೇಮ, ಕಾಮಗಳೆಲ್ಲಾ ಅವರಿಗೂ ಬೇಕು ಅನ್ನೋದನ್ನೇ ಜಗತ್ತು ಮರೆತಿರುತ್ತದೆ. ಅದನ್ನು ನೆನಪಿಸುವ ಕಥಾವಸ್ತು ವ್ಹೀಲ್ ಚೇರ್ ರೋಮಿಯೋದಲ್ಲಿದೆ. ಹೆತ್ತ ಮಗನ ಮನೋ ದೈಹಿಕ ಬಯಕೆಗಳನ್ನು ಅರ್ಥಮಾಡಿಕೊಳ್ಳುವ ಅಪ್ಪ ಮಾತ್ರ ಇಲ್ಲಿಲ್ಲ… ತನ್ನದೇ ಮಗಳು, ಕಟ್ಟಿಕೊಂಡ ಹೆಂಡತಿ ಅನ್ನೋದನ್ನೂ ನೋಡದೆ ತಲೆ ಹಿಡಿಯುವ ಅಪ್ಪನನ್ನೂ ತೋರಿಸಿದ್ದಾರೆ. ಬದುಕಿನ ಎರಡು ಎಕ್ಸ್ಟ್ರೀಮ್ʼಗಳು ಇಲ್ಲಿ ಅನಾವರಣಗೊಂಡಿವೆ.

ಗಟ್ಟಿಯಾದ್ದೊಂದು ಕಥೆ, ಎಲ್ಲೂ ಗೊಂದಲವಾಗದ ನಿರೂಪಣೆಯ ಜೊತೆಗೆ ಪವರ್ ಫುಲ್ ಸಂಭಾಷಣೆ ಸೇರಿಕೊಂಡು ಹೊಸದೊಂದು ಫೀಲ್ ಕೊಡುವ ಸಿನಿಮಾ ವ್ಹೀಲ್ ಚೇರ್.

ಗುರು ಕಷ್ಯಪ್ ಎನ್ನುವ ಪ್ರಚಂಡ ಪ್ರತಿಭೆಯ ಪ್ರಾಣ ಯಾಕಾದರೂ ಹೋಯ್ತೋ? ಸಿನಿಮಾ ಪೂರ್ತಿ ನೋಡಿದ ಮೇಲೆ ಹೆಚ್ಚು ಕಾಡುವ ವಿಚಾರವಿದು. ಗುರು ಕಷ್ಯಪ್ ಕಣ್ಮುಚ್ಚಿ ತಿಂಗಳುಗಳೇ ಕಳೆದಿವೆ. ಅವರೇ ಸಂಭಷಣೆ ಬರೆದಿಟ್ಟು ಹೋಗಿದ್ದ ಚಿತ್ರಗಳು ತೆರೆಗೆ ಬರುತ್ತಲೇ ಇವೆ. ʻವ್ಹೀಲ್ ಚೇರ್ ರೋಮಿಯೋʼದಲ್ಲಿ ಗುರು ಬರವಣಿಗೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ.

ಗುರುಪ್ರಸಾದ್, ವಿಜಯಪ್ರಸಾದ್ ಮುಂತಾದವರ ಸಾಲಿಗೆ ವ್ಹೀಲ್ ಚೇರ್ ಚಿತ್ರದ ನಿರ್ದೇಶಕ ನಟರಾಜ್ ಕೂಡಾ ಸೇರಿಕೊಳ್ಳುವುದರಲ್ಲಿ ಡೌಟಿಲ್ಲ. ಯಾವುದೇ ಸಬ್ಜೆಕ್ಟನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಗೆ ಅಳವಡಿಸುವ ಕಸುಬುದಾರಿಕೆ ನಟರಾಜ್ ಗಿದೆ. ಕಲಾವಿದ ತಂತ್ರಜ್ಞರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಕೆಲಸ ತೆಗೆಸಿಕೊಳ್ಳುವ ಜಾಣ್ಮೆಯೂ ಇವರಿಗೆ ಸಿದ್ದಿಸಿದೆ.

ಇತರೆ ಸಿನಿಮಾಗಳ ಗುಂಗಿನಿಂದ ಹೊರಬರಲು ಹೆಣಗಾಡುತ್ತಿರುವರು, ಯಾವ ಸಿನಿಮಾ ನೋಡುವುದು ಅಂತಾ ಗೊಂದಲದಲ್ಲಿರುವವರು ಧಾರಾಳವಾಗಿ ವ್ಹೀಲ್ ಚೇರ್ ರೋಮಿಯೋ ವನ್ನು ನೋಡಿ ಎಂಜಾಯ್ ಮಾಡಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕಾಣೆಯಾದವರ ಕಲರ್‌ ಫುಲ್‌ ಲೈಫು!

Previous article

ಗಜಾನನ ಅಂಡ್ ಗ್ಯಾಂಗ್ ಪ್ರಿ-ರಿಲೀಸ್ ಸಂಭ್ರಮ…ಜೂನ್ 3ಕ್ಕೆ ಬರ್ತಿದೆ ಸಿನಿಮಾ

Next article

You may also like

Comments

Leave a reply

Your email address will not be published.