ನಿರೂಪ್ ಭಂಡಾರಿ ನಾಯಕನಟನಾಗಿ ನಟಿಸಿರುವ ʻವಿಂಡೋ ಸೀಟ್ʼ ಸಿನಿಮಾದ ಫಸ್ಟ್ ಲುಕ್ಕಿಗಾಗಿ ಜನ ಕಾತರಿಸುವಂತಾಗಿತ್ತಲ್ಲಾ? ಈಗ ಅದನ್ನು ಕಣ್ತುಂಬಿಕೊಳ್ಳುವ ಘಳಿಗೆ ಸಮೀಪಿಸುತ್ತಿದೆ. ಇದೇ ಸೆಪ್ಟೆಂಬರ್ 24ರ ಬೆಳಿಗ್ಗೆ 11ಕ್ಕೆ ವಿಂಡೋಸೀಟ್ʼನ ಫಸ್ಟ್ ಲುಕ್ ಅನಾವರಣಗೊಳ್ಳುತ್ತಿದೆ.
ನಿರೂಪ್ ಭಂಡಾರಿ ನಾಯಕನಟನಾಗಿ ನಟಿಸಿರುವ ʻವಿಂಡೋ ಸೀಟ್ʼ ಎನ್ನುವ ಭಿನ್ನ ಶೀರ್ಷಿಕೆಯ ಸಿನಿಮಾ ಮೂಲಕ ನಿರೂಪಕಿ, ನಟಿ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಹೊರಹೊಮ್ಮುತ್ತಿರುವುದು ಈಗಾಗಲೇ ಜಾಹೀರಾಗಿರುವ ವಿಚಾರ. ಅದಾಗಲೇ ಚಿತ್ರೀಕರಣಗಳೆಲ್ಲಾ ಮುಗಿದು, ಪೂರ್ಣಗೊಂಡಿರುವ ಚಿತ್ರದ ಮೊದಲ ಪೋಸ್ಟರ್ ತಿಂಗಳುಗಳ ಹಿಂದಷ್ಟೇ ರಿಲೀಸಾಗಿತ್ತು. ಯಾವೊಬ್ಬ ಪಾತ್ರಧಾರಿಯ ಫೋಟೋಗಳನ್ನು ಬಳಸದೆ, ರೈಲಿನ ಕಿಟಕಿ, ಅದರ ಸುತ್ತ ರೇಲ್ವೇ ಟ್ರ್ಯಾಕು, ಅದರ ಮೊನೆಯಲ್ಲಿ ತೊಟ್ಟಿಕ್ಕುತ್ತಿರುವ ರಕ್ತ, ಬೆರಳಚ್ಚು ಇತ್ಯಾದಿ ವಿವರಗಳನ್ನಷ್ಟೇ ಆ ಪೋಸ್ಟರಿನಲ್ಲಿ ನೀಡಲಾಗಿತ್ತು. ಕಲಾವಿದ ಅಶ್ವಿನ್ ರಮೇಶ್ ವಿನ್ಯಾಸಗೊಳಿಸಿದ್ದ ಆ ಪೋಸ್ಟರಿನಲ್ಲಿ ಇದೊಂದು ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಜಾನರಿನ ಕಥೆ ಅನ್ನೋದು ಗೊತ್ತಾಗುವಂತಿತ್ತು. ಬಹುಶಃ ಇದೇ ಕಾರಣಕ್ಕೆ ಈ ಸಿನಿಮಾದ ಫಸ್ಟ್ ಲುಕ್ಕಿಗಾಗಿ ಜನ ಕಾತರಿಸುವಂತಾಗಿತ್ತು. ಈಗ ಅದಕ್ಕೆ ಘಳಿಗೆ ಸಮೀಪಿಸುತ್ತಿದೆ. ಇದೇ ಸೆಪ್ಟೆಂಬರ್ 24ರ ಬೆಳಿಗ್ಗೆ 11ಕ್ಕೆ ವಿಂಡೋಸೀಟ್ʼನ ಫಸ್ಟ್ ಲುಕ್ ಅನಾವರಣಗೊಳ್ಳುತ್ತಿದೆ.
ಆರಂಭದಲ್ಲಿ ಟೀವಿ ನಿರೂಪಕಿಯಾಗಿ ಪುಟ್ಟ ಪರದೆಮೇಲೆ ಕಾಣಿಸಿಕೊಂಡ ಶೀತಲ್ ಶೆಟ್ಟಿ ನಂತರ ಸ್ವೀಕರಿಸಿದ ಸವಾಲುಗಳು, ಏರಿದ ಏತ್ತರ ದೊಡ್ಡದು. ಈಗ ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ನಾಗಿಯೂ ಕಾಣಿಸಿಕೊಂಡಿದ್ದ ಅವರು ಸಂಗಾತಿ ಮತ್ತು ‘ಕಾರು’ ಎಂಬೆರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದರು. ಸಂಗಾತಿ & ಕಾರು ಶಾರ್ಟ್ ಮೂವಿಗಳಲ್ಲಿ ಗಹನವಾದ ವಿಚಾರಗಳನ್ನು ಕಲಾತ್ಮಕ ಶೈಲಿಯಿಂದ ನಿರೂಪಿಸಿ ಗಮನ ಸೆಳೆದಿದ್ದ ಶೀತಲ್ ಅದರ ಕಾರಣದಿಂದಲೇ ತಾಂತ್ರಿಕವಾಗಿಯೂ ಅನುಭವ ಪಡೆದುಕೊಂಡಿದ್ದರು. ಯಾವುದೇ ಕೆಲಸವನ್ನಾದರೂ ನೀಟಾಗಿ ಮಾಡಬೇಕೆಂಬ ಮನಸ್ಥಿತಿಯ ಶೀತಲ್ ಸಂಪೂರ್ಣ ತಯಾರಿ ಮಾಡಿಕೊಂಡೇ ಮುಂದಡಿಯಿಡುತ್ತಾರೆ. ಶೀತಲ್ ಕಿರುಚಿತ್ರಗಳ ಬಗ್ಗೆ ಅಪಾರ ಕಾಳಜಿ ತೋರಿದಾಗಲೇ, ಮುಂದೊಂದು ದಿನ ಇವರು ಸಿನಿಮಾ ನಿರ್ದೇಶನಕ್ಕೆ ಮುಂದಾಗುತ್ತಾರೆಂಬ ಸೂಚನೆ ಸಿಕ್ಕಿತ್ತು. ಈಗ ಅದು ನಿಜವಾಗಿದೆ. ವಿಂಡೋ ಸೀಟ್ನ ಪೋಸ್ಟರಿನ ಮೂಲಕವೇ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ನೆಲೆಗೊಳ್ಳುವ ಸೂಚನೆ ನೀಡಿದ್ದರು. ಈಗ ಬರಲಿರುವ ಫಸ್ಟ್ ಲುಕ್ ವಿಂಡೋ ಸೀಟ್ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಲಿದೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯರಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ವಿಂಡೋ ಸೀಟಿಗೆ ಅರ್ಜುನ್ ಜನ್ಯ ಸಂಗೀತ, ಯೋಗರಾಜ್ ಭಟ್, ಕವಿರಾಜ್, ಸುಮುಖ್ ಗೀತ ಸಾಹಿತ್ಯವಿರಲಿದೆ.
No Comment! Be the first one.