ಸಿನಿಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ವಿಧಾನಸೌಧದ ಬ್ಯಾಂಕ್ವೆಟ್ಹಾಲ್ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಹಿರಿಯ ನಟ ಅನಂತನಾಗ್, ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಹುಲ್ ರವೈಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ತಿಂಗಳ ೨೮ರಂದು ಸಂಜೆ ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ರಾಜ್ಯಪಾಲರಾದ ವಜುಭಾಯ್ವಾಲಾ ಅವರು ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪುರಸ್ಕೃತರಿಗೆ ಬಹುಮಾನ ವಿತರಿಸಲಿದ್ದಾರೆ.
ಇಂದಿನಿಂದ ರಾಜಾಜಿನಗರದ ಒರಾಯನ್ಮಾಲ್ನ ೧೧ ಪಿವಿಆರ್ ಚಿತ್ರಮಂದಿರಗಳಲ್ಲಿ ೬೦ ರಾಷ್ಟ್ರಗಳ ೨೨೫ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದ ಆರಂಭಿಕ ಚಿತ್ರವಾಗಿ ಪೇಮನ್ಮಾದಿ ನಿರ್ದೇಶನದ ’ಬಾಂಬ್, ಎ ಲವ್ ಸ್ಟೋರಿ’ ಇರಾನಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಮುಕ್ತಾಯದ ಚಿತ್ರವಾಗಿ ’ಟೇಲ್ ಆಫ್ ದಿ ಸೀ’ ಪ್ರದರ್ಶನಗೊಳ್ಳಲಿದೆ. ಈ ಎರಡೂ ಚಿತ್ರಗಳು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರದರ್ಶನಗೊಳ್ಳಲಿವೆ.
ಪೋಲೆಂಡ್ನ ಖ್ಯಾತ ಚಿತ್ರನಿರ್ದೇಶಕ ಕ್ರಯ್ಜೋಫ್ ಜನ್ನುಸಿ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಾರ್ಯಕಾರಿ ನಿರ್ಮಾಪಕ ಮಾರ್ಕ್ವುಡ್, ಆಸ್ಟ್ರೇಲಿಯಾದ ಸ್ಕ್ರಿಪ್ಟ್ ಸಲಹಾಗಾರ್ತಿ ಕ್ಲೈರ್ ಡಬ್ಬಿನ್, ಮಾರ್ಕ್ ಶಿಲ್ಲಿಂಗ್, ಕಜ್ವನ್ ಝೂಲೆನ್, ನಾಕೂಮ್ ಮಾಚೆಚ್, ಜಪಾನಿನ ವಿಮರ್ಶಕಿ ಕುನ್ನೆಟ್ ಸೆಬೋನಿಯನ್, ನೆದರ್ಲೆಂಡ್, ಇಸ್ರೇಲ್, ಟರ್ಕಿಗಳಿಂದ ವಿದೇಶಿ ಪ್ರತಿನಿಧಿಗಳು ಹಾಗೂ ಜ್ಯೂರಿಗಳು ಆಗಮಿಸಲಿದ್ದಾರೆ. ಇರಾನಿನ ಹೆಸರಾಂತ ನಿರ್ದೇಶಕ ಅಲಿ ಇಬ್ರಾಹಿಂ, ಕಜಕಿಸ್ತಾನದ ನಿರ್ಮಾಪಕಿ ಎಲಿನಾ ಲೆರಿನೊವಾ ಆಗಮಿಸಲಿದ್ದಾರೆ. ಚೀನಾ, ಶ್ರೀಲಂಕಾ, ಫಿಲಿಪಿನ್ಸ್, ಹಾಂಕಾಂಗ್, ಮಲೇಷ್ಯಾ, ಸಿಂಗಪೂರ್, ಇಂಡೋನೇಷ್ಯಾ, ಕೊರಿಯಾ ಮೊದಲಾದ ದೇಸಗಳಿಂದ ಚಲನಚಿತ್ರಗಳು ಹಾಗೂ ಅವುಗಳ ನಿರ್ದೇಶಕರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬರ್ಲಿನ್, ಕಾನ್ಸ್, ವೆನ್ನಿಸ್, ಟೊರೆಂಟೊ, ಗೋವಾ, ಮುಂಬೈ, ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಹಲವಾರು ಶ್ರೇಷ್ಠ ಚಿತ್ರಗಳನ್ನು ನೋಡುವ ಅವಕಾಶ ಈ ಚಿತ್ರೋತ್ಸವದಲ್ಲಿದೆ.
ಕಳೆದ ವರ್ಷ ನಮ್ಮನ್ನಗಲಿದ ಚಿತ್ರರಂಗದ ಗಣ್ಯರಾದ ಅಂಬರೀಶ್, ಲೋಕನಾಥ್, ಎಂ.ಎನ್.ವ್ಯಾಸರಾವ್ ಹಾಗೂ ಬೆಂಗಾಲಿ ಚಿತ್ರಜಗತ್ತಿನ ಮೃಣಾಲ್ಸೇನ್ ಅವರಿಗೆ ನೆನಪಿನಾಂಜಲಿ ಸಲ್ಲಿಸುವ ಸಲುವಾಗಿ ಅವರ ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜನಪ್ರಿಯ ಮನರಂಜನೆ ಕನ್ನಡ ಚಿತ್ರಗಳ ವಿಭಾಗದಲ್ಲಿ ಕೆಜಿಎಫ್, ದಿ ವಿಲನ್, ಅಯೋಗ್ಯ, ರ್ಯಾಂಬೋ ೨, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಟಗರು, ಹಂಬಲ್ ಪೊಲಿಟೀಶಿಯನ್ ನೊಗರಾಜ್, ರಾಜು ಕನ್ನಡ ಮೀಡಿಯಂ ಚಿತ್ರಗಳಿವೆ. ಈ ಬಾರಿ ಚಿತ್ರೋತ್ಸವದಲ್ಲಿ ಒಟ್ಟು ೪೨ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
’ಪ್ರಕೃತಿ ವಿಕೋಪ’ ವಿಷಯ ಕೇಂದ್ರೀಕರಿಸಿದ ಸಾಕ್ಷ್ಯಚಿತ್ರಗಳ ವಿಭಾಗದಲ್ಲಿ ಹಲವಾರು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಅಲ್ಲದೆ ಜೀವನಚರಿತ್ರೆ ಆಧರಿಸಿದ ಬಯೋಪಿಕ್ ವಿಭಾಗದಲ್ಲಿ ನಟ ರೋಮಿಶಿಂಡ್ಲರ್, ರಿತುಪರ್ಣಘೋಷ್, ಕವಿ ದೊಡ್ಡರಂಗೇಗೌಡ, ಸಾವಯವ ಕೃಷಿಕ ನಾರಾಯಣ ರೆಡ್ಡಿ ಹಾಗೂ ಸಿದ್ದಗಂಗೆಯ ಶ್ರೀ ಶಿವಕುಮಾರಸ್ವಾಮಿ ಕುರಿತ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ’ಗಾಂಧೀಜಿ – ೧೫೦’ ಶೀರ್ಷಿಕೆಯಡಿ ಗಾಂಧೀಜಿ ಅವರನ್ನು ಸ್ಮರಿಸುವ, ಅವರ ಕುರಿತು ನಿರ್ಮಾಣಗೊಂಡಿರುವ ನಾಲ್ಕು ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ’ಅನ್ಸಂಗ್ ಇನ್ಕ್ರೆಡಿಬಲ್ ಇಂಡಿಯಾ’ ಶೀರ್ಷಿಕೆಯಡಿ ಅಪರೂಪದ ಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಚಿತ್ರೋತ್ಸವದ ಏಳೂ ದಿನಗಳು ಚಿತ್ರಕಥಾ ಕಮ್ಮಟವಿರುತ್ತದೆ. ಮಾಸ್ಟರ್ಕ್ಲಾಸ್ ವಿಭಾಗದಲ್ಲಿ ಜಗತ್ತಿನ ಖ್ಯಾತ ನಿರ್ದೇಶಕರ ಉಪನ್ಯಾಸ ಹಾಗೂ ಅವರೊಂದಿಗೆ ಸಂವಾದ ಕಾರ್ಯಕ್ರಮವಿರುತ್ತದೆ. ಬೆಂಗಳೂರಿನ ಹಿತೈಷಿಣಿ ಸಂಸ್ಥೆ ನಡೆಸಿಕೊಡುವ ಮಹಿಳಾ ವಿಷಯ ಕುರಿತಂತೆ ಸಂವಾದವಿರುತ್ತದೆ. “ಈ ಬಾರಿ ಆಡಂಬರಕ್ಕಿಂತ ವಿಚಾರಕ್ಕೆ ಹೆಚ್ಚಿನ ಮಾನ್ಯತೆ ಕೊಡುತ್ತಿದ್ದೇವೆ. ಕಳೆದ ವರ್ಷಗಳಿಗಿಂತ ಹೆಚ್ಚಿನ ಪ್ರತಿನಿಧಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ” ಎನ್ನುತ್ತಾರೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
No Comment! Be the first one.