ಹಾಡುಗಳು ಗೆದ್ದರೆ ಸಿನಿಮಾ ಕೂಡಾ ಗೆಲ್ಲುತ್ತದೆ ಎಂಬುದು ಕಣ್ಣೆದುರಿಗೆ ಹಲವಾರು ಉದಾಹರಣೆಗಳನ್ನು ಹೊಂದಿರೋ ನಂಬಿಕೆ. ಆ ನಿಟ್ಟಿನಲ್ಲಿ ನೋಡ ಹೋದರೆ ಕಿರಣ್ ಗೋವಿ ನಿರ್ದೇಶನದ `ಯಾರಿಗೆ ಯಾರುಂಟು’ ಚಿತ್ರದ ಹಾಡುಗಳೀಗ ಜನರನ್ನು ಸೆಳೆದುಕೊಂಡಿವೆ. ಒಂದಲ್ಲ, ಬಿಡುಗಡೆಯಾಗಿರೋ ಅಷ್ಟೂ ಹಾಡುಗಳನ್ನೂ ಜನ ಮೆಚ್ಚಿಕೊಂಡಿದ್ದಾರೆ.
ಇದೇ ಖುಷಿಯಲ್ಲಿ ಚಿತ್ರತಂಡ ಒಂದೊಂದೇ ಹಾಡಿನ ಮೂರನೇ ಲಿರಿಕಲ್ ವೀಡಿಯೋಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ `ಹೃದಯ ಹಾಡಲು’ ಎಂಬ ಹಾಡಿನ ಲಿರಿಕಲ್ ವೀಡಿಯೋ ಝೇಂಕಾರ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ತುಂಬಾ ಕಡಿಮೆ ಅವಧಿಯಲ್ಲಿಯೇ ಇದು ಸಾಮಾಜಿಕ ಜಾಲತಾಣದ ತುಂಬಾ ಹರಿದಾಡುತ್ತಾ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.
ಈಗಾಗಲೇ ಈ ಚಿತ್ರದ ಎರಡು ಲಿರಿಕಲ್ ವೀಡಿಯೋಗಳು ಅನಾವರಣಗೊಂಡಿವೆ. ಅವೆಲ್ಲವೂ ನಿರೀಕ್ಷೆಗೂ ಮೀರಿ ಜನರನ್ನು ತಲುಪಿಕೊಂಡಿವೆ. ಈ ಹಿಂದೆಯೂ ಪಯಣ, ಪಾರು ವೈಫಾಫ್ ದೇವದಾಸ್ ಮುಂತಾದ ಚಿತ್ರಗಳಲ್ಲಿ ಹಾಡುಗಳಿಗೆ ವಿಶೇಷ ಮಹತ್ವ ಕೊಟ್ಟಿದ್ದವರು ಕಿರಣ್ ಗೋವಿ. ಆ ಚಿತ್ರಗಳ ಗೆಲುವಿನಲ್ಲಿ ಹಾಡುಗಳೂ ಮಹತ್ತರ ಪಾತ್ರ ವಹಿಸಿದ್ದವು. ಯಾರಿಗೆ ಯಾರುಂಟು ಚಿತ್ರದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ಈ ಮೂಲಕವೇ ಯಾರಿಗೆ ಯಾರುಂಟು ಮತ್ತೊಂದು ಮ್ಯೂಸಿಕಲ್ ಹಿಟ್ ಆಗಿ ದಾಖಲಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
https://www.youtube.com/watch?v=_vCRxxHsPwI&feature=youtu.be #