ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಈಗಾಗಲೇ ಈ ಎರಡೂ ಹಾಡುಗಳು ದೇಶವ್ಯಾಪಿ ಹರಿದಾಡುತ್ತಿವೆ. ಯೂಟ್ಯೂಬ್ ನಲ್ಲಂತೂ ಸಲೀಸಾಗಿ ಯಾರೂ ಬೀಟ್ ಮಾಡಲಾರದಂತೆ ಯಜಮಾನ ಹಾಡುಗಳು ಮೆರೆಯುತ್ತಿವೆ. ಈ ಹೊತ್ತಿನಲ್ಲಿಯೇ ಬಹು ಕಾಲದ ನಂತರ ಯೋಗರಾಜ್ ಭಟ್ ಮತ್ತು ವಿ ಹರಿಕೃಷ್ಣ ಜೋಡಿಯ ಹಾಡೊಂದು ಪಡ್ಡೆ ಹೈಕಳನ್ನ ಹುಚ್ಚೆಬ್ಬಿಸಿದೆ!
ಬಸಣ್ಣಿ ಬಾ… ಅಂತ ಶುರುವಾಗೋ ಹಾಡನ್ನು ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ಬರೆದಿದ್ದಾರೆ. ಇದಕ್ಕೆ ಟಪ್ಪಾಂಗುಚ್ಚಿ ಮೂಡಿನ ಸಂಗೀತ ಸಂಯೋಜನೆ ಮಾಡಿ ಸ್ವತಃ ಹರಿಕೃಷ್ಣ ಅವರೇ ಹಾಡಿದ್ದಾರೆ. ಈ ಹಿಂದೆ ಎರಡು ಹಾಡುಗಳು ಬಿಡುಗಡೆಯಾಗಿದ್ದವಲ್ಲಾ ಅವಗಳಿಗಿಂತಲೂ ಬಸಣಂಣಿ ಸಾಂಗು ಡಿಫರೆಂಟಾಗಿದೆ. ಈ ಹಾಡಿಗೆ ವರ್ಷಾ ಬಿ ಸುರೇಶ್ ಅವರೂ ಧ್ವನಿಯಾಗಿದ್ದಾರೆ.
ಯಜಮಾನ ಚಿತ್ರದ ಮೂಲಕವೇ ವಿ ಹರಿಕೃಷ್ಣ ಮತ್ತೆ ಹಳೇ ಹವಾ ಶುರುವಿಟ್ಟುಕೊಂಡಿದ್ದಾರೆ. ಆರಂಭಿಕವಾಗಿ ಹರಿ ಹೆಸರಾದದ್ದೇ ಯೋಗರಾಜ ಭಟ್ಟರ ಹೊಸಾ ಪ್ರಯೋಗದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡೋ ಮೂಲಕ. ಆದರೆ ಒಂದು ಅಗಾಧ ಗ್ಯಾಪಿನಲ್ಲಿ ಈ ಜೋಡಿ ಚದುರಿಕೊಂಡಿತ್ತು. ಆದರೀಗ ಯಜಮಾನ ಮೂಲಕ ಮತ್ತೆ ಇವರಿಬ್ಬರೂ ಒಂದಾಗಿದ್ದಾರೆ.
ಈಗ ಬಿಡುಗಡೆಯಾಗಿರೋ ಬಸಣ್ಣಿ ಹಾಡಿನ ಬಗ್ಗೆ ಹೇಳೋದಾದರೆ ಒಂದೇ ಸಲಕ್ಕೆ ಎಲ್ಲರನ್ನೂ ಕನೆಕ್ಟ್ ಆಗೋವಷ್ಟು ಚೆಂದಗೆ ಮೂಡಿ ಬಂದಿದೆ. ಹಾಡಿನ ಸಾಹಿತ್ಯವೂ ಅಷ್ಟೇ ಫ್ರೆಶ್ ಆಗಿದೆ. ಬಿಡುಗಡೆಯಾದಾಕ್ಷಣದಿಂದಲೇ ಹುಟ್ಟಿಕೊಂಡಿರೋ ಕ್ರೇಜ್ ನೋಡಿದರೆ ಯಜಮಾನನ ಈ ಹಿಂದಿನ ಎರಡು ಹಾಡುಗಳ ದಾಖಲೆಯನ್ನ ಬಸಣ್ಣಿ ಬ್ರೇಕ್ ಮಾಡುವಂತಿದೆ!