ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಐದೇ ಐದು ದಿನಗಳಲ್ಲಿ ಈ ಚಿತ್ರ ಮಾಡಿರೋ ಗಳಿಕೆಯ ಲೆಕ್ಕ ಕೇಳಿ ಸ್ಯಾಂಡಲ್ ವುಡ್ ತುಂಬಾ ಸಂಚಲನವೇ ಸೃಷ್ಟಿಯಾಗಿದೆ. ಹೀಗಿರುವಾಗಲೇ ಡಿಜಿಟಲ್ ಜಗತ್ತಿನಲ್ಲಿಯೂ ಇದೀಗ ಯಜಮಾನನ ಪಾರುಪಥ್ಯ ಚಾಲೂ ಆಗಿದೆ. ಇತರೇ ಚಿತ್ರರಂಗದ ಮಂದಿಯೂ ಬೆಚ್ಚುವಂಥಾ ಮೊತ್ತಕ್ಕೀಗ ಈ ಸಿನಿಮಾದ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ!
ಅದೆಂಥಾ ಸ್ಟಾರ್ ನಟರ ಚಿತ್ರವಾದರೂ ಪೈರಸಿ ಭೂತದ ಮುಂದೆ ಬೆಚ್ಚಿ ನಿಲ್ಲುವಂಥಾ ವಾತಾವರಣ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿತ್ತು. ಅದನ್ನು ಕೊಂಚ ಮಟ್ಟಿಗೆ ತಡೆಯಲೆಂದೇ ಚಿತ್ರಗಳಿಗೆ ಡಿಜಿಟಲ್ ಮಾರುಕಟ್ಟೆ ಸೃಷ್ಟಿಯಾಗಿರೋದು ಗೊತ್ತೇ ಇದೆ. ಸದ್ಯ ಅಮೇಜಾನ್ ಪ್ರೈಮ್ ಮತ್ತು ನೆಟ್ಪ್ಲಿಕ್ಸ್ ಇದರಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಯಜಮಾನ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ಭಾರೀ ಮೊತ್ತಕ್ಕೆ ಖರೀದಿಸಿದೆ.ಅಮೇಜಾನ್ ಪ್ರೈಮ್ಗೆ ಯಜಮಾನ ಚಿತ್ರದ ಡಿಜಿಟಲ್ ಹಕ್ಕುಗಳು ಮಾರಾಟವಾಗಿರೋದು ಬರೋಬ್ಬರಿ ಮೂರೂವರೆ ಕೋಟಿಗೆ. ಈ ಹಿಂದೆ ಕೆಜಿಎಫ್, ಬಜ಼ಾರ್ ಮುಂತಾದ ಚಿತ್ರಗಳನ್ನೂ ಕೂಡಾ ಅಮೇಜಾನ್ ಪ್ರೈಮ್ ಖರೀದಿಸಿತ್ತು. ಆದರೆ ಯಜಮಾನ ಚಿತ್ರಕ್ಕೆ ಸಿಕ್ಕ ಮೊತ್ತ ಕಂಡು ಎಲ್ಲರೂ ಕಂಗಾಲಾಗಿ ಹೋಗಿದ್ದಾರೆ.
ಅಮೇಜಾನ್ ಪ್ರೈಮ್ ಮಂದಿ ಇಷ್ಟೊಂದು ದೊಡ್ಡ ಮೊತ್ತದ ಹಣ ಕೊಟ್ಟು ಡಿಜಿಟಲ್ ಹಕ್ಕುಗಳ್ನ್ನು ಖರೀದಿಸುವಂತೆ ಮಾಡಿರೋದು ಮೊದಲ ದಿನದಿಂದಲೇ ಹ್ಞೂಂಕರಿಸುತ್ತಾ ಮುಂದುವರೆಯುತ್ತಿರೋ ಯಜಮಾನನ ಖದರ್. ಭರ್ಜರಿ ಓಪನಿಂಗ್ ಪಡೆದಿದ್ದ ಈ ಚಿತ್ರ ಅದೇ ಆವೇಗದಿಂದ ಮುಂದುವರೆಯುತ್ತಿದೆ. ಐದು ದಿನ ಕಳೆಯೋದರೊಳಗಾಗಿ ಯಜಮಾನನ ಕಲೆಕ್ಷನ್ ಐವತ್ತು ಕೋಟಿಯ ಗಡಿ ದಾಟಿಕೊಂಡಿದೆ. ದರ್ಶನ್ ಅಭಿಮಾನಿಗಳಂತೂ ಯಜಮಾನ ಚಿತ್ರದ ಗಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದಾರೆ. ಅದು ಸತ್ಯವೂ ಹೌದು. ದರ್ಶನ್ ಪಾಲಿಗೆ ಈ ಮೂಲಕ ಮತ್ತೊಂದು ಪುಷ್ಕಳ ಗೆಲುವು ಸಿಕ್ಕಂತಾಗಿದೆ.
No Comment! Be the first one.