ಒರಟ ಐ ಲವ್ ಯೂ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಶಾಂತ್. ಆ ನಂತರದಲ್ಲಿ ಒರಟ ಪ್ರಶಾಂತ್ ಎಂದೇ ಹೆಸರಾದ ಅವರು ನಟಿಸಿದ್ದೆಲ್ಲ ಮಾಸ್ ಪಾತ್ರಗಳಲ್ಲಿಯೇ. ನಿಜವಾದ ಕಲಾವಿದನಿಗೆ ಒಂದೇ ವೆರೈಟಿಯ ಪಾತ್ರಗಳು ಅದೆಷ್ಟೇ ಆಕರ್ಷಕವಾಗಿ ಕಂಡರೂ ಏಕತಾನತೆ ಹುಟ್ಟಿಸಿ ಬಿಡುತ್ತವೆ. ಪ್ರಶಾಂತ್ ಹೇಳಿಕೇಳಿ ರಂಗಭೂಮಿಯಲ್ಲಿಯೇ ನಟನಾಗಿ ರೂಪುಗೊಂಡವರು. ಸೂಕ್ಷ್ಮತೆಯನ್ನು ತುಸು ಹೆಚ್ಚೇ ಧರಿಸಿಕೊಂಡಿರುವ ಅವರು ಅಂಥಾದ್ದೊಂದು ಏಕತಾನತೆಗೀಡಾಗಿ ಬದಲಾವಣೆ ಬಯಸಿ ಬಹು ಕಾಲವಾಗಿದೆ. ಅದಕ್ಕೆ ಪೂರಕವಾಗಿ ಸಿಕ್ಕಿದ್ದು ಕಿರಣ್ ಗೋವಿ ನಿರ್ದೇಶನದ ಯಾರಿಗೆ ಯಾರುಂಟು ಚಿತ್ರ!
ಕ್ಲಾಸ್ ಲುಕ್ಕನ್ನು ಏಕಾಏಕಿ ಮಾಸ್ ಆಗಿ ಬದಲಾಯಿಸೋದು, ಮಾಸ್ ಇಮೇಜನ್ನು ಕ್ಲಾಸ್ಗೆ ರೂಪಾಂತರಿಸೋದು ನಿಜಕ್ಕೂ ರಿಸ್ಕಿನ ಕೆಲಸ. ಅಂಥಾದ್ದೊಂದು ಸವಾಲನ್ನು ತಾವಾಗಿಯೇ ಸ್ವೀಕರಿಸಿದವರು ಈ ಚಿತ್ರದ ನಿರ್ದೇಶಕ ಕಿರಣ್ ಗೋವಿ. ಪ್ರಶಾಂತ್ ಮತ್ತು ಕಿರಣ್ ಗೋವಿಯವರದ್ದು ಬಹು ವರ್ಷಗಳ ಗೆಳೆತನ. ಅತ್ತ ಕಿರಣ್ ಕೂಡಾ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ಅಷ್ಟೇ ಅವಧಿಯಲ್ಲಿ ಪ್ರಶಾಂತ್ ಕೂಡಾ ಮರೆಯಾದಂತಿದ್ದರು. ಇಬ್ಬರ ಪಾಲಿಗೂ ಅದೊಂದು ನಿರ್ವಾತ ಸ್ಥಿತಿ. ಒಂದು ಬದಲಾವಣೆಗಾಗಿ ಹಂಬಲಿಸುತ್ತಿದ್ದ ಪ್ರಶಾಂತ್ ಮತ್ತು ಮೂರು ವರ್ಷಗಳ ತಪನೆಯೊಂದಕ್ಕೆ ಅಂತಿಮ ರೂಪ ನೀಡಲು ಸಜ್ಜಾಗಿದ್ದ ಕಿರಣ್ ಗೋವಿ. ಇವರಿಬ್ಬರ ಮುಖಾಮುಖಿಯಾದ ಪರಿಣಾಮವಾಗಿಯೇ ಜನ್ಮತಳೆದದ್ದು ಯಾರಿಗೆ ಯಾರುಂಟು ಸಿನಿಮಾ!
ಅಚಾನಕ್ಕಾಗಿ ಸಿಕ್ಕ ಕಿರಣ್ ಗೋವಿ ಪ್ರಶಾಂತ್ ಅವರಿಗೆ ಈ ಚಿತ್ರದ ಕಥೆ ಹೇಳಿದ್ದರಂತೆ. ಬಳಿಕ ಈ ಪಾತ್ರವನ್ನು ನೀವು ಮಾಡಬೇಕು ಅಂದಾಗ ಪ್ರಶಾಂತ್ ಅವರಿಗೇ ಕಸಿವಿಸಿ ಕಾಡಿತ್ತಂತೆ. ಯಾಕೆಂದರೆ ಆ ಪಾತ್ರ ಅವರಿಗೆ ಈವರೆಗಿರೋ ಒರಟ ಎಂಬ ಇಮೇಜಿಗೆ ಪಕ್ಕಾ ತದ್ವಿರುದ್ಧವಾದದ್ದು. ಇದು ಸಾಧ್ಯವಾ ಅಂತ ಪ್ರಶಾಂತ್ ಸಂದೇಹದಿಂದಲೇ ಕೇಳಿದಾಗ ಕಿರಣ್ ಗಾಢವಾದ ವಿಶ್ವಾಸದಿಂದ `ಇದು ನನ್ನ ಕನಸು. ನಾನಿದನ್ನು ಮಾಡ್ತೀನಿ, ಖಂಡಿತಾ ನೀವೂ ಕೂಡಾ ಈ ಪಾತ್ರವನ್ನ ಮಾಡುತ್ತೀರಿ’ ಅಂದಿದ್ದರಂತೆ. ಅಂಥಾದ್ದೇ ಒಂದು ಬದಲಾವಣೆ ಬಯಸಿದ್ದ ಪ್ರಶಾಂತ್ ಗೋವಿಯವರ ವಿಶ್ವಾಸದಿಂದ ಪ್ರೇರಿತರಾಗಿ ತಕ್ಷಣವೇ ನಟಿಸಲು ಒಪ್ಪಿಕೊಂಡಿದ್ದರು.
ಒರಟೊರಟು ಪಾತ್ರಗಳಲ್ಲಿಯೇ ನಟಿಸಿದ್ದ ಪ್ರಶಾಂತ್ ಪಾಲಿಗೆ ಈ ಚಿತ್ರದ ಸಾಫ್ಟ್ ಕ್ಯಾರೆಕ್ಟರ್ ಆರಂಭದಲ್ಲಿ ಸವಾಲಾಗಿತ್ತಂತೆ. ಇದಕ್ಕೆ ಬೇಕಾದ ಹೋಂ ವರ್ಕ್ ಮಾಡಿಕೊಂಡು ಬಣ್ಣ ಹಚ್ಚಿದವರಿಗೀಗ ನಿರ್ದೇಶಕರ ಕಲ್ಪನೆಯಂತೆಯೇ ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತಿಯಿದೆ. ಈ ಪಾತ್ರ ನಗಿಸೋ ಶೇಡನ್ನೂ ಹೊಂದಿರೋದರಿಂದ ಪ್ರತೀ ಸೀನೂ ಪ್ರಶಾಂತ್ ಪಾಲಿಗೆ ಸವಾಲಿನದ್ದಾಗಿತ್ತು. ಆದರೆ ಕಿರಣ್ ಗೋವಿಯವರ ಸಹಕಾರ ಎಲ್ಲವನ್ನೂ ಸಲೀಸಾಗಿಸಿತ್ತಂತೆ.
ಈಗ್ಗೆ ಮೂರು ವರ್ಷಗಳ ಹಿಂದೆ ಪ್ರಶಾಂತ್ ಚಿರಾಯು ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಅವರು ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಥರ ಥರದಲ್ಲಿ ಸುದ್ದಿ ಹರಡಿರಬಹುದು. ಕೆಲ ಮಂದಿ ಅವಕಾಶವಿಲ್ಲದೇ ಅವರು ದೂರವುಳಿದಿದ್ದರು ಅಂದುಕೊಂಡಿರಲೂಬಹುದು. ಆದರೆ ಅಸಲೀ ಸತ್ಯ ಬೇರೆಯದ್ದೇ ಇದೆ. ಅವರು ಮನಸು ಮಾಡಿದ್ದರೆ ಈ ಮೂರು ವರ್ಷಗಳಲ್ಲಿ ಐದಾರು ಚಿತ್ರಗಳಲ್ಲಿಯೂ ನಟಿಸಬಹುದಿತ್ತು. ಆದರೆ ಅದಾಗಲೇ ಬದಲಾವಣೆ ಬಯಸಿ ಅದಕ್ಕೆ ತಕ್ಕುದಾದ ಕಥೆಗಾಗಿ ಅರಸುತ್ತಿದ್ದ ಅವರಿಗೆ ಆ ಥರದ ಕಥೆ ಸಿಕ್ಕಿರಲಿಲ್ಲ. ಸಿಕ್ಕಿದ್ದನ್ನೇ ಇರಲಿ ಅಂತ ಒಪ್ಪಿಕೊಂಡಿರಲೂ ಇಲ್ಲ. ಈ ಅರಸುವಿಕೆ ಅಖಂಡ ಮೂರು ವರ್ಷಗಳನ್ನು ನುಂಗಿದರೂ ಕೂಡಾ ಆ ಅವಧಿಯ ಎಲ್ಲ ಧಾವಂತವನ್ನೂ ಮರೆಸುವಂತೆ ಯಾರಿಗೆ ಯಾರುಂಟು ಚಿತ್ರದ ಅವಕಾಶ ಪ್ರಶಾಂತ್ ಅವರನ್ನು ಅರಸಿ ಬಂದಿದೆ.
ಹೀಗೆ ನಾಯಕನಾಗಿ ಮೊದಲ ಹೆಜ್ಜೆಯಲ್ಲಿಯೇ ಭರ್ಜರಿ ಗೆಲುವು ಕಂಡರೂ ಆ ನಂತರದಲ್ಲಿ ಏಳು ಬೀಳುಗಳನ್ನೂ ಕಂಡಿರುವ ಪ್ರಶಾಂತ್ ಪಾಲಿಗೆ ಅದೆಲ್ಲವೂ ಪಾಠ. ಸಿಕ್ಕ ಸೋಲನ್ನು ಯಾರ ಹೆಗಲಿಗೋ ತಗುಲಿಸಿ ನಿರಾಳವಾಗೋ ಮನಸ್ಥಿತಿ ಅವರದ್ದಲ್ಲ. ಅದರಲ್ಲಿ ತಮ್ಮದೂ ಏನೋ ತಪ್ಪಿರ ಬಹುದು ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ವ್ಯಕ್ತಿತ್ವ ಅವರದ್ದು. ಅಂಥಾ ತಪ್ಪು ಒಪ್ಪುಗಳೆಲ್ಲವೂ ಯಾರಿಗೆ ಯಾರುಂಟು ಚಿತ್ರದ ಯಶಸ್ಸಿನ ಮೂಲಕ ಸಾರ್ಥಕ್ಯ ಪಡೆಯುತ್ತವೆ ಎಂಬ ನಂಬಿಕೆ ಹೊಂದಿರೋ ಪ್ರಶಾಂತ್ ಬದುಕಿನ ಹಾದಿ ಕೂಡಾ ಅಷ್ಟೇ ವಿಶಿಷ್ಟವಾಗಿದೆ.
ಅವರು ಅಪ್ಪಟ ಬೆಂಗಳೂರಿನ ಹುಡುಗ. ಮಾರ್ಕೆಟ್ ಏರಿಯಾದ ಕೋಟೆ ಪ್ರದೇಶದ ವಾತಾವರಣದಲ್ಲಿಯೇ ಹುಟ್ಟಿ ಬೆಳೆದವರು ಪ್ರಶಾಂತ್. ಅವರು ಓದಿದ್ದೂ ಕೂಡಾ ಕೋಟೆ ಕಾಲೇಜಿನಲ್ಲಿಯೇ. ಕಾಲೇಜು ದಿನಗಳಲ್ಲಿ ಅವರು ಲಾಸ್ಟ್ ಬೆಂಚ್ ಪಾರ್ಟಿಯಾದರೂ ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದ್ದರು. ಹೀಗೆ ಕಾಲೇಜಿನಲ್ಲಿ ನಾಟಕವೊಂದರಲ್ಲಿ ಪ್ರಶಾಂತ್ ಅವರ ಅಭಿನಯ ನೋಡಿದ ರಂಗಕರ್ಮಿ ಎ.ಎಸ್ ಮೂರ್ತಿಯವರು ತಮ್ಮ ಅಭಿನಯ ತಂರಂಗ ಅಭಿನಯ ತರಬೇತಿ ಶಾಲೆಗೆ ಸೇರಿಸಿಕೊಂಡಿದ್ದರು. ಅಲ್ಲಿಂದಾಚೆಗೆ ಪ್ರಶಾಂತ್ ಮುಂದೆ ಹೊಸಾ ಜಗತ್ತೇ ತೆರೆದುಕೊಂಡಿತ್ತು.
ಅಭಿನಯತಂರಂಗದ ವತಿಯಿಂದ ಬೀದಿ ನಾಟಕಗಳನ್ನು ಮಾಡುತ್ತಾ ಆ ಮೂಲಕವೇ ಪ್ರಶಾಂತ್ ನಟನಾಗಿ ರೂಪುಗೊಂಡಿದ್ದರು. ಅದುವೇ ಸಿನಿಮಾ ನಾಯಕನಾಗೋ ಕನಸಿಗೂ ಉತ್ತೇಜನ ನೀಡಿತ್ತು. ಕಡೆಗೂ ಒರಟ ಐ ಲವ್ ಯೂ ಚಿತ್ರದ ಮೂಲಕ ಅದು ಸಾಕಾರಗೊಂಡಿತ್ತು. ಮೊದಲ ಚಿತ್ರದಲ್ಲಿಯೇ ಅವರಿಗೆ ದೊಡ್ಡ ಮಟ್ಟದಲ್ಲಿ ಗೆಲುವೂ ಸಿಕ್ಕಿತ್ತು. ಆ ಗೆಲುವಿನ ಸವಿಯನ್ನು ಯಾರಿಗೆ ಯಾರುಂಟು ಚಿತ್ರ ಮತ್ತೊಮ್ಮೆ ತಮಗೆ ನೀಡುತ್ತದೆ ಎಂಬ ಭರವಸೆ ಅವರಿಗಿದೆ.
ಯಾರಿಗೆ ಯಾರುಂಟು ಚಿತ್ರದಲ್ಲಿ ತಾವು ಒರಟ ಇಮೇಜನ್ನು ಸುಳ್ಳು ಮಾಡುವಂಥಾ ಮುಗ್ಧನಾಗಿ ನಟಿಸಿದ್ದೇನೆಂಬುದು ಪ್ರಶಾಂತ್ ಮಾತು. ಅದು ಹೊಡಿ ಬಡಿ ಸೀನುಗಳಿಂದ ಸಂಪೂರ್ಣವಾಗಿ ಮುಕ್ತವಾದ ಪಾತ್ರ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದೆಂಬುದು ಅದರ ಸೂತ್ರ. ಮೂವರು ನಾಯಕಿಯರು, ಮೂರು ಥರದ ಕಾಲದ ಜೊತೆ ಪಯಣಿಸುವ ವಿಶಿಷ್ಟವಾದ ಪಾತ್ರಕ್ಕೆ ಪ್ರಶಾಂತ್ ಜೀವ ತುಂಬಿದ್ದಾರೆ. ಇದೊಂದು ಅಪ್ಪಟ ಪ್ರೇಮಕಾವ್ಯ. ಈಗ ಹಿಟ್ ಆಗಿರೋ ಹಾಡುಗಳೇ ಆ ಹೊಳಹನ್ನೂ ನೀಡಿವೆ. ಒರಟನ ಹೊಸಾ ಗೆಟಪ್, ವರ್ಷಾಂತರಗಳ ಕಾಲ ಬಯಸಿ ಒಲಿಸಿಕೊಂಡಿರೋ ಬದಲಾವಣೆ ಪ್ರೇಕ್ಷಕರಿಗೆ ಇಷ್ಟವಾಗೋದರಲ್ಲಿ ಸಂದೇಹವೇನಿಲ್ಲ.
#
No Comment! Be the first one.