ಕನ್ನಡದ ಕೆಜಿಎಫ್ ಸಿನಿಮಾದ ನಂತರ ಕನ್ನಡದ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಾರ್ಪಟ್ಟಿರುವುದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷ್ಯ. ಬಹುಭಾಷೆಗಳಲ್ಲಿ ಕೆಜಿಎಫ್ ಮೂಡಿಬಂದಿದ್ದ ಹಿನ್ನೆಲೆಯಲ್ಲಿ ಯಶ್ ಪ್ರಚಾರಕ್ಕಾಗಿ ತೆಲುಗು ಮತ್ತು ಹಿಂದಿಯಲ್ಲಿ ಮಾತನಾಡಿದಾಗ ಕನ್ನಡಿಗರು ಬೇಸರ ಮಾಡಿಕೊಳ್ಳದೇ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದರು. ಅಲ್ಲಲ್ಲಿ ಯಶ್ ಕನ್ನಡವನ್ನು ಮಾತನಾಡುವ ಮೂಲಕ ಕನ್ನಡಿಗರ ಸಂತಸಕ್ಕೆ ಕಾರಣವೂ ಆಗಿದ್ದರು.
https://www.instagram.com/p/B1bqsNPn2MU/?utm_source=ig_web_copy_link
ಆದರೆ ಅದ್ಯಾಕೋ ಯಶ್ ಹಾಗೂ ಅವರ ಹೆಂಡತಿ ರಾಧಿಕಾ ಪಂಡಿತ್ ಕನ್ನಡವನ್ನು ಬಳಸದೇ ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿ ಒಂದು ವಿಡಿಯೋವನ್ನು ಮಾಡಿದ್ದಾರೆ. ಯಶ್ ಅವರ ಮಗಳು ಐರಾಗೆ ಅವರ ರಾಧಿಕಾರ ಮೇಕಪ್ ಮ್ಯಾನ್ ಒಂದು ಉಡುಗೊರೆ ನೀಡಿದ್ದಾರಂತೆ. ಅದರ ಕುರಿತಾಗಿ ರಾಕಿಂಗ್ ದಂಪತಿ ಧನ್ಯವಾದ ತಿಳಿಸಲು ಒಂದು ವಿಡಿಯೋ ಮಾಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡಾ ಮಾಡಿದ್ದಾರೆ. ಯಶ್ ಹಾಗೂ ರಾಧಿಕಾರ ಈ ವರ್ತನೆಯನ್ನು ಕನ್ನಡಾಭಿಮಾನಿಗಳು ತೀವ್ರವಾಗಿ ಟೀಕಿಸುವುದರೊಂದಿಗೆ ಖಂಡಿಸಿದ್ದಾರೆ. ನೀವು ನ್ಯಾಷನಲ್ ಸ್ಟಾರ್ ಆಗಿರಬಹುದು. ಹಾಗೆಂದು ಕೇವಲ ಇಂಗ್ಲಿಷ್ನಲ್ಲೇ ಮಾತನಾಡುವ ಬದಲು ಕನ್ನಡವನ್ನೂ ಸೇರಿಸಿ ಮಾತನಾಡಬಹುದಿತ್ತು ಎಂದು ಕೆಲವರು ಬರೆದರೆ, ಮತ್ತೆ ಕೆಲವರು ಈಗ ಯಶ್ ಅವರ ವಿಡಿಯೋವನ್ನು ಎಲ್ಲ ಭಾಷೆಗಳವರು ನೋಡುತ್ತಾರೆ. ಅದಕ್ಕೆ ಅವರು ಇಂಗ್ಲಿಷ್ನಲ್ಲಿ ಮಾತ್ರ ಮಾತನಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ತಿಳಿದವರೇ ಹೀಗೆ ಮಾಡಿದರೆ ಹೇಗೆ, ಸ್ವಲ್ಪವಾದರೂ ಕನ್ನಡದಲ್ಲಿ ಮಾತನಾಡಿ ಎಂದು ಮನವಿ ಮಾಡಿದ್ದಾರೆ. ಇಂಗ್ಲಿಷ್ನಲ್ಲಿ ಮಾತನಾಡುವ ಮೂಲಕ ಬೇರೆ ಭಾಷೆಯವರನ್ನು ಓಲೈಕೆ ಮಾಡಲು ಹೋಗಿ ನಿಮ್ಮ ಮೇಲೆ ಇಟ್ಟಿರುವ ಅಭಿಮಾನ ಕಡಿಮೆಯಾಗುವಂತೆ ಮಾಡಿಕೊಳ್ಳಬೇಡಿ ಎಂದೂ ಸಾಕಷ್ಟು ಮಂದಿ ಕಮೆಂಟ್ ಮಾಡಿ ರಾಕಿಂಗ್ ದಂಪತಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.