ಬನಶಂಕರಿ ಮನೆಯನ್ನು ಖಾಲಿ ಮಾಡಿದ್ದರೂ ಸಹ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆಂಬ ಆರೋಪದ ಮೇಲೆ ಚಿತ್ರನಟ ಯಶ್ ಅವರ ತಾಯಿ ಪುಷ್ಬಾ ವಿರುದ್ಧ ಗಿರಿನಗರ ಠಾಣೆಯಲ್ಲಿ ದಾಖಲಿಸಿದ್ದ ಎಫ್ ಐ ಆರ್ ಅನ್ನು ಹೈ ಕೋರ್ಟ್ ರದ್ದುಪಡಿಸಿದೆ.
‘ನನ್ನ ವಿರುದ್ಧದ ಎಫ್ಐಆರ್ ಮತ್ತು ನಗರದ 56ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಪುಷ್ಪಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಯಶ್ ತಾಯಿ ಪರ ವಾದ ಮಂಡಿಸಿದ ವಕೀಲ ಡಿ.ಆರ್.ರವಿಶಂಕರ್ ಅವರು, ‘ದೂರು ದಾಖಲಿಸುವ ಕಾನೂನು ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಆದ್ದರಿಂದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಎಫ್ಐಆರ್ ರದ್ದುಗೊಳಿಸಿತು.
ಅಂತದ್ದೇನಾಯಿತು: 2019ರ ಜೂನ್ 7ರಂದು ಸಂಜೆ 6.30ಕ್ಕೆ ಪುಷ್ಪಾ ಅವರು ಬ್ಯಾಲೆನ್ಸ್ ಬಾಡಿಗೆ ನೀಡಿ ಮನೆ ಖಾಲಿ ಮಾಡಿದ್ದರು. ಮನೆಯ ಕೀಲಿ ಕೈ ಅನ್ನು ಅವರ ಪರ ವಕೀಲರು ನಮಗೆ ಹಸ್ತಾಂತರಿಸಿದ್ದರು. ನಾವು ಮನೆಯೊಳಗೆ ಪ್ರವೇಶಿಸಿದಾಗ ಸಾಕಷ್ಟು ನಷ್ಟ ಉಂಟಾಗಿದ್ದುದು ಕಂಡು ಬಂದಿದೆ’ ಎಂದು ಮನೆಯ ಮಾಲೀಕರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಮನೆಯ ಎಲೆಕ್ಟ್ರಿಕ್ ಬಲ್ಬ್ಗಳು, ಡೆಕೋರೇಷನ್ ಲ್ಯಾಂಪ್, ಫ್ಯಾನ್ಗಳು, ಪೂಜಾ ಕೋಣೆ, ಬಾತ್ ರೂಂಗಳ ಬಾಗಿಲುಗಳನ್ನು ಬಾಡಿಗೆದಾರರು ಬಿಚ್ಚಿಕೊಂಡು ಹೋಗಿದ್ದಾರೆ. ಸಿಂಕ್, ವಾಷ್ ಬೇಸಿನ್, ಕಮೋಡ್ಗಳನ್ನು ಉದ್ದೇಶಪೂರ್ವಕವಾಗಿ ಒಡೆದು ಹಾಕಲಾಗಿದೆ. ಇದರಿಂದ 28 ಲಕ್ಷ ನಷ್ಟ ಉಂಟಾಗಿದೆ. ಆದ್ದರಿಂದ ಪುಷ್ಪಾ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಲಾಗಿತ್ತು. ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
No Comment! Be the first one.