ಅಪಾರ ಹೆಸರು, ಕೀರ್ತಿಗಳನ್ನು ಸೋಕಿಸಿಕೊಂಡ ಯಾರೇ ಆದರೂ ಆಗಾಗ ರಿಫ್ರೆಶ್ ಆಗುತ್ತಿರಬೇಕು. ಬಹುತೇಕ ನಟನಟಿಯರು ಆ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಯಶ್ ಕೂಡಾ ಮನೆ, ಮಡದಿ, ಮಕ್ಕಳಿಗೆ ಮೊದಲ ಆದ್ಯತೆ ನೀಡುತ್ತಾಬಂದಿದ್ದಾರೆ. ಈ ಸಲ ರಾಧಿಕಾ ಮತ್ತು ಮಕ್ಕಳ ಜೊತೆಗೆ ಈ ಮಾಸ್ಟರ್ ಪೀಸ್ ಮಾಲ್ಡೀವ್ಸ್ ಗೆ ಪ್ರವಾಸ ತೆರಳುತ್ತಿದ್ದಾರೆ
ಕೆ.ಜಿ.ಎಫ್. ಚಿತ್ರದ ಕೆಲಸಗಳು, ಮುಂದಿನ ಸಿನಿಮಾಗಳ ಕುರಿತ ಚರ್ಚೆ, ಜಾಹೀರಾತು, ಇತರೆ ವ್ಯವಹಾರ ಮಾತ್ರವಲ್ಲ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಜನಪ್ರಿಯತೆ ಕೂಡಾ ನಟ ಯಶ್ ಅವರನ್ನು ಒತ್ತಡಕ್ಕೀಡುಮಾಡಿದೆ. ಸಾಮಾನ್ಯಕ್ಕೆ ಸಿನಿಮಾ, ಅವಕಾಶ, ಗೆಲುವು, ಹಣ, ಜನಪ್ರಿಯತೆಗಳೆಲ್ಲಾ ಜೊತೆಯಾಗುತ್ತಿದ್ದಂತೇ ತಮ್ಮನ್ನು ತಾವು ಕಳೆದುಕೊಂಡು, ಯದ್ವಾತದ್ವಾ ನಡೆದುಕೊಳ್ಳುವ ನಟ-ನಟಿಯರ ಸಂಖ್ಯೆಯೇ ಹೆಚ್ಚು. ದಿಢೀರನೆ ಬರುವ ಯಶಸ್ಸಿನಿಂದ ದಿಕ್ಕುತಪ್ಪಿರುವ ಎಷ್ಟೋ ಜನ ಸಿನಿಮಾ ತಾರೆಯರು ಎಲ್ಲ ಇದ್ದೂ ಏನೂ ಇಲ್ಲದವರಂತೆ ಶುಷ್ಕವಾಗಿ ಬದುಕುತ್ತಿರುತ್ತಾರೆ. ಚಿತ್ರರಂಗಕ್ಕೆ ಬಂದ ದಿನದಿಂದ ಸೋಲು, ಗೆಲುವಿನ ಹೊರತಾಗಿಯೂ ಶಿಸ್ತನ್ನು ಮೈಗೂಡಿಸಿಕೊಂಡುಬಂದ ಹೀರೋ ಯಶ್.
ಸಿನಿಮಾ ಬದುಕಿನಂತೆಯೇ ಪರ್ಸನಲ್ ಲೈಫನ್ನೂ ಕರಾರುವಕ್ಕಾದ ಪ್ಲಾನುಗಳ ಮೂಲಕ ರೂಪಿಸಿಕೊಳ್ಳುತ್ತಿರುವ ಅಪರೂಪದ ಸಿನಿಮಾ ಸ್ಟಾರ್ ಈತ. ಹಂತಹಂತವಾಗಿ ತಮ್ಮ ಮಾರ್ಕೆಟ್ಟನ್ನು ವಿಸ್ತರಿಸಿಕೊಂಡು, ಸಂಭಾವನೆಯನ್ನೂ ಹೆಚ್ಚಿಸಿಕೊಂಡು ಬಂದ ಯಶ್ ದುಡಿದ ದುಡ್ಡನ್ನೆಲ್ಲಾ ಜೋಡಿಸಿಕೊಂಡು ಆ ಕಾಲಕ್ಕೇ ತಂಗಿ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಸ್ವಂತ ಮನೆ, ಜಮೀನುಗಳನ್ನೆಲ್ಲಾ ಖರೀದಿಸಿದ ನಂತರ ವರ್ಷಗಳ ಕಾಲ ಪ್ರೀತಿಸಿದ ರಾಧಿಕಾರನ್ನು ವರಿಸಿದರು. ಯಾವ ಹಂತಗಳಲ್ಲಿ ಹೇಗೆ ಹೆಜ್ಜೆ ಇರಿಸಬೇಕು ಅನ್ನೋದನ್ನು ಯೋಚಿಸಿ ಮುಂದಡಿಯಿಟ್ಟರು. ಕಳೆದ ನಾಲ್ಕು ವರ್ಷಗಳಿಂದ ಮುಟ್ಟಿದ್ದೆಲ್ಲಾ ಚಿನ್ನವಾಯ್ತು ಅನ್ನುವಂತೆ ಯಶ್ ನಟಿಸಿದ ಚಿತ್ರಗಳೂ ದೊಡ್ಡ ಮಟ್ಟದಲ್ಲಿ ಗೆದ್ದವು. ತಡಮಾಡದೆ, ಚಿನ್ನದ ಗಣಿಗೇ ಕೈಯಿಟ್ಟ ಯಶ್ ಪಾಲಿಗೆ ಕೆ.ಜಿ.ಎಫ್ ಸಿನಿಮಾ ಬಂಗಾರವಾಗಿ ಪರಿಣಮಿಸಿತು.
ಸದ್ಯ ಚಾಲ್ತಿಯಲ್ಲಿರುವ ಹೀರೋಗಳಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರ್ಕೆಟ್ ಸೃಷ್ಟಿಸಿಕೊಂಡಿರುವ ಕನ್ನಡದ ಹೀರೋ ಆಗಿ ಯಶ್ ಗುರುತಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ದರ್ಶನ್, ಶಿವಣ್ಣ, ಪುನೀತ್, ಧೃವಾಸರ್ಜಾ; ಇಂಡಿಯಾ ಲೆವೆಲ್ಲಿನಲ್ಲಿ ಸುದೀಪ್, ಉಪೇಂದ್ರ ಹೆಸರು ಚಾಲ್ತಿಯಲ್ಲಿದ್ದರೂ ಕೆ.ಜಿ.ಎಫ್ ಮೂಲಕ ಯಶ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ಲೋಬಲ್ ಲೆವೆಲ್ಲನ್ನು ರೀಚ್ ಮಾಡಿದ್ದಾರೆ ಅನ್ನೋದರಲ್ಲಿ ಯಾವ ಡೌಟೂ ಇಲ್ಲ!
ಭರಪೂರ ಗೆಲುವು, ಕೀರ್ತಿಗಳೆಲ್ಲಾ ಮುಡಿಗೇರುತ್ತಿದ್ದರೂ ಅದರ ಪ್ರಭೆಯಲ್ಲಿ ಯಶ್ ಕಕ್ಕಾಬಿಕ್ಕಿಯಾದ, ದಿಕ್ಕುತಪ್ಪುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಅಷ್ಟರಮಟ್ಟಿಗೆ ಯಶ್ ಅಕ್ಷರಶಃ ಸ್ಥಿತಪ್ರಜ್ಞರಾಗಿದ್ದಾರೆ. ಹೊಗಳುಭಟ್ಟರನ್ನು, ಬಾಲಬಡುಕರನ್ನು ತಮ್ಮ ಹತ್ತಿರಕ್ಕೂ ಬಿಟ್ಟುಕೊಳ್ಳದೆ ಸ್ವಂತ ಬುದ್ದಿಯಿಂದ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಹೆತ್ತವರಿಗೆ ಮುದ್ದಿನ ಮಗನಾಗಿ, ತಂಗಿಗೆ ನೆಚ್ಚಿನ ಅಣ್ಣನಾಗಿ, ಪತ್ನಿ ರಾಧಿಕಾಗೆ ಜೀವದ ಗೆಳೆಯನಾಗಿ ಮತ್ತು ಈಗ ಎರಡು ಮುದ್ದು ಪುಟಾಣಿಗಳ ಅಪ್ಪನಾಗಿ ಜೀವನ ಕಟ್ಟಿಕೊಳ್ಳುವುದರ ಜೊತೆಗೆ ತೀರಾ ಸಣ್ಣ ವಯಸ್ಸಿಗೇ ಅಗಣಿತ ಅಭಿಮಾನಿಗಳನ್ನೂ ಯಶ್ ಸಂಪಾದಿಸಿದ್ದಾರೆ. ಎದುರಾದ ಎಲ್ಲ ಅಡೆತಡೆ, ಅವಮಾನಗಳಿಗೂ ಎದೆಯೊಡ್ಡಿ ಈ ಮಟ್ಟಕ್ಕೆ ಬಂದು ನಿಂತ ಯಶ್ ಬೆಳವಣಿಗೆ ನಿಜಕ್ಕೂ ಎಲ್ಲರಿಗೂ ಮಾದರಿ.
ಅಪಾರ ಹೆಸರು, ಕೀರ್ತಿಗಳನ್ನು ಸೋಕಿಸಿಕೊಂಡ ಯಾರೇ ಆದರೂ ಆಗಾಗ ರಿಫ್ರೆಶ್ ಆಗುತ್ತಿರಬೇಕು. ಬಹುತೇಕ ನಟನಟಿಯರು ಆ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಯಶ್ ಕೂಡಾ ಮನೆ, ಮಡದಿ, ಮಕ್ಕಳಿಗೆ ಮೊದಲ ಆದ್ಯತೆ ನೀಡುತ್ತಾಬಂದಿದ್ದಾರೆ. ಈ ಸಲ ರಾಧಿಕಾ ಮತ್ತು ಮಕ್ಕಳ ಜೊತೆಗೆ ಈ ಮಾಸ್ಟರ್ ಪೀಸ್ ಮಾಲ್ಡೀವ್ಸ್ ಗೆ ಪ್ರವಾಸ ತೆರಳುತ್ತಿದ್ದಾರೆ (ಈ ಸುದ್ದಿ ನಿಮ್ಮ cinibuzzನಲ್ಲಿ ಮಾತ್ರ).
ಪ್ರವಾಸೋದ್ಯಮವನ್ನೇ ನಂಬಿರುವ ದೇಶಗಳ ಪೈಕಿ ಮಾಲ್ಡೀವ್ಸ್ ಕೂಡಾ ಒಂದು. ಕೊರೋನಾದಿಂದ ಪ್ರವಾಸಿಗರಿಲ್ಲದೆ ಕಂಗಾಲಾಗಿದ್ದ ಈ ದೇಶ ಎಂದಿನಂತೆ ಜನರನ್ನು ಆಕರ್ಷಿಸಲು ಕೆಲ ತಿಂಗಳುಗಳ ಹಿಂದೆ ಸಖತ್ ಪ್ಲಾನ್ ಮಾಡಿತ್ತು. ಭಾರತದ ಸಿನಿಮಾ ನಟರಿಗೆ ಉಚಿತ ಪ್ರವೇಶದ ಆಮಿಶವೊಡ್ಡಿತ್ತು. ರಕುಲ್ ಪ್ರೀತ್ ಸಿಂಗ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ, ವಿವೇಕ್ ಒಬೆರಾಯ್, ಸಮಂತಾ, ಸಾನ್ವಿ ಶ್ರೀ ವಾತ್ಸವ್, ನಾಗ ಚೈತನ್ಯ, ಸೇರಿದಂತೆ ಹಲವಾರು ಮಂದಿ ಮಾಲ್ಡೀವ್ಸಿಗೆ ಹೋಗಿ ಕಾಲ ಕಳೆದುಬಂದಿದ್ದರು. ಕಾಜಲ್ ಅಗರ್ ವಾಲ್ ಥರದ ಹೊಸದಾಗಿ ಮದುವೆಯಾದ ಸ್ಟಾರ್ಗಳು ಹನಿಮೂನ್ ಗಾಗಿ ಸೆಲೆಕ್ಟ್ ಮಾಡಿಕೊಂಡಿದ್ದೂ ಇದೇ ಜಾಗವನ್ನು. ಹಿಂದೊಮ್ಮೆ ಪವರ್ ಸ್ಟಾರ್ ಪುನೀತ್ ಕೂಡಾ ಇದೇ ಸ್ಥಳಕ್ಕೆ ಭೇಟಿ ನೀಡಿದ್ದರು.
ಈಗ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಇದೇ 2021ರ ಜನವರಿ 18ರಂದು ಮಾಲ್ಡೀವ್ಸ್ʼಗೆ ಪ್ರಯಾಣ ಬೆಳೆಸಲಿದೆ. ಅಲ್ಲಿನ ರಂಗಾಲಿ ದ್ವೀಪದಲ್ಲಿರುವ ಹೆಸರಾಂತ ಕಾನ್ರಾಡ್ ಹೊಟೇಲಿನಲ್ಲಿ ಇವರು ಉಳಿದುಕೊಳ್ಳಲಿದ್ದಾರೆ. ಯಶ್ ಬರುವಿಕೆಗಾಗಿ ಕಾನ್ ಕಾರ್ಡ್ ಹೊಟೇಲ್ ವಿಶೇಷ ಸಿದ್ದತೆಯನ್ನೂ ನಡೆಸಿದೆಯಂತೆ. ರಾಕಿ ಭಾಯ್ ಮತ್ತು ರಾಧಿಕಾ ಪಂಡಿತ್ ಅವರಿಗಾಗಿ ಅಂಡರ್ ವಾಟರ್ ಸ್ಯೂಟ್ ರೂಮ್ ಈಗಾಗಲೇ ಕಾದಿರಿಸಿದ್ದಾರೆ. ಸಮುದ್ರದ ನಡುವೆ ಹದಿನಾರು ಅಡಿಗಳ ಒಳಗಿರುವ ಈ ಅಂಡರ್ ವಾಟರ್ ಕೊಠಡಿಯಲ್ಲಿ ತಂಗುವುದು ನಿಜಕ್ಕೂ ರೋಮಾಂಚನ ಅನುಭವ ನೀಡುತ್ತದೆ. ಸಮುದ್ರದಲ್ಲಿರುವ ಚಲಚರಗಳ ನಡುವೆ ಜೀವಿಸುವ ಅನುಭವವೇ ಒಂಥರಾ ಅದ್ಭುತ. ಸದ್ಯ ಮಾಸ್ಟರ್ ಪೀಸ್ ಜೋಡಿ ಈ ಸುಂದರ ಕ್ಷಣಗಳನ್ನು ಅನುಭವಿಸಲು ಸಜ್ಜಾಗಿದೆ.
ಅಣ್ತಮ್ಮನ ಪ್ರಯಾಣ ಸುಖಮಯವಾಗಿರಲೆಂದು ನೀವೂ ಒಮ್ಮೆ ಹಾರೈಸಿ… ಹ್ಯಾಪಿ ಜರ್ನಿ ರಾಜಾಹುಲಿ!
No Comment! Be the first one.